ಶಬರಿಮಲೆ ವಿಚಾರದಲ್ಲಿ ಹಿಂದೂ ಧಾರ್ಮಿಕ ಮುಖಂಡರು ಹಾಗೂ ಹಿಂದೂ ಜನತೆ ನಿರ್ಧರಿಸಿದರೆ ಉತ್ತಮ – ಪೇಜಾವರ ಸ್ವಾಮೀಜಿ

Spread the love

ಶಬರಿಮಲೆ ವಿಚಾರದಲ್ಲಿ ಹಿಂದೂ ಧಾರ್ಮಿಕ ಮುಖಂಡರು ಹಾಗೂ ಹಿಂದೂ ಜನತೆ ನಿರ್ಧರಿಸಿದರೆ ಉತ್ತಮ – ಪೇಜಾವರ ಸ್ವಾಮೀಜಿ

ಉಡುಪಿ: ಶಬರಿಮಲೆ ಕುರಿತಂತೆ ನನ್ನದು ತಟಸ್ಥ ನಿಲುವು ಹೊಂದಿದ್ದು ಇದರ ಬಗ್ಗೆ ಈಗಾಗಲೇ ಹಲವಾರು ಬಾರಿ ನನ್ನ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದೇನೆ ಆದರೆ ಕೆಲವೊಂದು ಮಂದಿ ಇದನ್ನು ಗೊಂದಲ ಉಂಟಾಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು ಹೇಳಿದ್ದಾರೆ.

ಅವರು ಶುಕ್ರವಾರ ಉಡುಪಿ ಪೇಜಾವರ ಮಠದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಹಿಂದೂ ಧಾರ್ಮಿಕ ವಿಷಯಗಳಲ್ಲಿ, ಸಂಪ್ರದಾಯದ ವಿಷಯಗಳಲ್ಲಿ ನ್ಯಾಯಾಲಯಕ್ಕಾಗಲೀ, ಜಾತ್ಯತೀತ ಸರಕಾರಕ್ಕಾಗಲೀ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವಿಲ್ಲ. ಹಿಂದೂ ಧಾರ್ಮಿಕ ಮುಖಂಡರು ಹಾಗೂ ಹಿಂದೂ ಜನತೆ ಈ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು.

ಹಿಂದೆ ನಾನು ಹಲವು ಸಂಪ್ರದಾಯಗಳನ್ನು ವಿರೋಧಿಸಿದ್ದೇನೆ. ಉದಾಹರಣೆಗೆ ದಲಿತರ ದೇವಸ್ಥಾನ ಪ್ರವೇಶ, ದಲಿತರ ಕೇರಿಗೆ ಪ್ರವೇಶ, ಎಡೆಸ್ನಾನಗಳನ್ನು ನಾನು ವಿರೋಧಿಸಿದ್ದೇನೆ. ಕೃಷ್ಣ ಮಠದಲ್ಲಿ ಎಡೆಸ್ನಾನ ನಿಲ್ಲಿಸುವುದಕ್ಕೆ ನಾನು ಒಪ್ಪಿಗೆ ಕೊಟ್ಟಿದ್ದೇನೆ. ಶಬರಿಮನೆಯಲ್ಲಿ ಮಹಿಳೆಯರ ದೇವಸ್ಥಾನ ಪ್ರವೇಶ ವಿಷಯದಲ್ಲಿ ಶಾಸ್ತ್ರದ ವಿರೋಧವಿಲ್ಲ. ಆದರೆ ಅಲ್ಲಿನ ಸಂಪ್ರದಾಯದ ವಿರೋಧವಿದೆ ಎಂದರು.

ಇಂಥ ಹಿಂದೂ ಧಾರ್ಮಿಕ ವಿಷಯದಲ್ಲಿ, ಶಾಸ್ತ್ರ ಮತ್ತು ಸಂಪ್ರದಾಯದ ತಿಕ್ಕಾಟವನ್ನೆಲ್ಲಾ ನ್ಯಾಯಾಲಯ ಹಾಗೂ ಜಾತ್ಯತೀತ ಸರಕಾರ ತೀರ್ಮಾನ ಮಾಡಬಾರದು. ಹಿಂದೂ ಧಾರ್ಮಿಕ ಮುಖಂಡರು ಹಾಗೂ ಹಿಂದೂ ಜನತೆ ತೀರ್ಮಾನ ಮಾಡಬೇಕು ಎಂಬುದು ತನ್ನ ಅಭಿಪ್ರಾಯವಾಗಿದೆ ಎಂದರು.

ಶಬರಿಮಲೆ ದೇವಸ್ಥಾನ ಪ್ರವೇಶ ವಿಷಯದಲ್ಲಿ ಇಡೀ ಮಹಿಳಾ ವರ್ಗಕ್ಕೆ ಅಪಮಾನವಾಗಿಲ್ಲ. ಮಹಿಳೆಯರಿಗೆ ಈಗಲೂ ಅಲ್ಲಿಗೆ ಪ್ರವೇಶವಿದೆ. ಆದರೆ ಸಂಪ್ರದಾಯನುಸಾರ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಈಗಲೂ ಬಾಲಕಿಯರು ಹಾಗೂ ಪ್ರಾಯಸ್ಥ ಮಹಿಳೆಯರು ಅಲ್ಲಿಗೆ ತೆರಳಬಹುದಾಗಿದೆ ಎಂದರು.

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರು ತೆರಳುವುದನ್ನು ಹಿಂದೂ ಧಾರ್ಮಿಕ ಮುಖಂಡರು, ಸಂಪ್ರದಾಯಸ್ಥರು ಹಾಗೂ ಬಹುಪಾಲು ಹಿಂದೂ ಜನತೆ ವಿರೋಧಿಸುತಿದ್ದಾರೆ. ಕೇರಳದ ಹಿಂದೂಗಳು, ಕಾಂಗ್ರೆಸ್ ಮತ್ತು ಬಿಜೆಪಿನಂಥ ರಾಜಕೀಯ ಪಕ್ಷಗಳು ವಿರೋಧಿಸುತ್ತಿವೆ. ಕೇರಳ ಸರಕಾರ ತನ್ನ ಹಠ ಬಿಟ್ಟು ಬಿಡಬೇಕು. ಜನಾಭಿಪ್ರಾಯಕ್ಕೆ ಮಣಿದು ಹಿಂದಿನ ಸಂಪ್ರದಾಯವನ್ನು ಮುಂದುವರಿಸಬೇಕು. ಆದುದರಿಂದ ಸರಕಾರ ಅನಾವಶ್ಯವಾಗಿ ಹಟ ಹಿಡಿಯದೇ ಜನಾಭಿಪ್ರಾಯಕ್ಕೆ ಬೆಲೆ ಕೊಡಬೇಕು ಎಂದರು.


Spread the love