‘ಶಾಂತಿಯ ಸಂದೇಶ ನೀಡಿದ ಮಹಾವೀರರು ಸದಾ ಸ್ಮರಣೀಯರು’
ಉಡುಪಿ: ಸತ್ಯ, ಅಹಿಂಸೆಯ ಸಂದೇಶವನ್ನು ಜಗತ್ತಿಗೆ ಬೋಧಿಸಿದ ಮಹಾವೀರ ಇಂದಿಗೂ ಪ್ರಸ್ತುತ. 2,600 ವರ್ಷಗಳ ಹಿಂದೆ ಬದುಕಿ, ಉತ್ತಮ ಬದುಕಿಗೆ ಮಾರ್ಗದರ್ಶನ ನೀಡಿದ ಅವರ ಸಂದೇಶಗಳು ನಮ್ಮನ್ನು ಉತ್ತಮವಾಗಿ ಬದುಕಲು ಪ್ರೇರೇಪಿಸುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ಹೇಳಿದರು.
ಅವರಿಂದು ಧರ್ಮಸ್ಥಳ ಮಾತೃಶ್ರೀ ರತ್ನಮ್ಮ ಮೆಮೊರಿಯಲ್ ಗೋಲ್ಡನ್ ಜ್ಯುಬಿಲಿ ಹಾಲ್, ಅಯುರ್ವೇದಿಕ್ ಕಾಲೇಜಿನ ಕುತ್ಪಾಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಆಯುರ್ವೇದಿಕ್ ಕಾಲೇಜು ಸಂಯುಕ್ತವಾಗಿ ಆಯೋಜಿಸಿದ್ದ ಶ್ರೀ ಮಹಾವೀರ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜಿನ ಎಂದರೆ ಗೆದ್ದವನು ಎಂದರ್ಥ. ಬದುಕಿನ ಗಮ್ಯದೆಡೆಗೆ ತಲುಪಿ ಇತರರು ಅಲ್ಲಿ ತಲುಪಲು ನೆರವಾಗುವುದು. ಬದುಕಿನ ಅರ್ಥವನ್ನು ಹೇಳಿಕೊಡುವುದು, ಪ್ರಕೃತಿಯನ್ನು ಅರಿತು ಬಾಳುವುದರ ಅಗತ್ಯವನ್ನು ಮಹಾತ್ಮರು ನಮಗೆ ಬಹಳ ಹಿಂದಿನಿಂದಲೇ ಬೋಧಿಸಿದ್ದಾರೆ. ಉತ್ತಮ ಬೋಧನೆಗಳನ್ನು ಅಳವಡಿಸಿಕೊಂಡು ಬಾಳಿ ಎಂದು ಅವರು ಕರೆ ನೀಡಿದರು.
ವಿಶೇಷ ಉಪನ್ಯಾಸ ನೀಡಿದ ಎಸ್ ಡಿ ಎಂ ಸಮಾಜ ಕಾರ್ಯವಿಭಾಗದ ಸುವೀರ್ ಜೈನ್ ಅವರು, ಮಹಾವೀರ ವಿಶ್ವಕ್ಕೆ ನೀಡಿದ ತತ್ವಾದರ್ಶಗಳು ಅಜರಾಮರ; ಧರ್ಮವೆಂಬುದು ಜೀವನಪದ್ಧತಿ, ಇದು ಮನುಷ್ಯರನ್ನು ಸನ್ಮಾರ್ಗದಲ್ಲಿ ನಡೆಯಲು ಕಲಿಸುತ್ತದೆ. ತೀರ್ಥಂಕರರು ನೆಮ್ಮದಿಯ ಬದುಕಿಗೆ ಪಾಲಿಸಬೇಕಾದ ತತ್ವಾದರ್ಶಗಳನ್ನು ಕಲಿಸುತ್ತಾರೆ. ಬದುಕಿನ ಜಂಜಾಟಗಳಿಗೆ ಉತ್ತರವನ್ನು ದೊರಕಿಸಿಕೊಟ್ಟು ಮಾರ್ಗದರ್ಶಕರಾಗುತ್ತಾರೆ. ಆತ್ಮ ಕಲ್ಯಾಣ ಹೇಗೆ ಎಂದು ವಿವರಿಸಿದ್ದಾರೆ ಎಂದರು.
ಸರ್ಕಾರ ಎಲ್ಲ ಜಯಂತಿಗಳನ್ನು ಆಚರಿಸುತ್ತಿದ್ದು, ಎಲ್ಲರ ಅಭಿವೃದ್ದಿಗೆ ಪೂರಕವಾಗಿ ಮೀಸಲಾತಿಗಳನ್ನು ನೀಡುತ್ತಿದ್ದಾರೆ. ಇದರ ಜೊತೆಗೆ ಉತ್ತಮ ವ್ಯಕ್ತಿತ್ವಕ್ಕೆ ಮೀಸಲಾತಿ ನೀಡುವಂತಾಗಲಿ ಎಂದು ಸುವೀರ್ ಜೈನ್ ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯತ್ ಅಧ್ಯಕ್ಷರಾದ ನಳಿನಿ ಪ್ರದೀಪ್ ರಾವ್ ಮಾತನಾಡಿ, ಮಹಾತ್ಮರು ಕ್ರಮಿಸಿದ ನೀಡಿದ ಜೀವನ ಪಾಠಗಳು ಮಾನವ ಜನಾಂಗವನ್ನು ಸದೃಢಗೊಳಿಸಲಿ ಎಂದರು.
ಕಾರ್ಯಕ್ರಮದಲ್ಲಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರಭಾಕರ ಉಪಾಧ್ಯಾಯ, ಭಾರತೀಯ ಜೈನ್ ಮಿಲನ್ ವಲಯ-8 ರ ಕಾರ್ಯಾಧ್ಯಕ್ಷ ಕೆ.ಪ್ರಸನ್ನಕುಮಾರ್, ಉಡುಪಿ ಜೈನ್ ಮಿಲನ್ನ ಜಿಲ್ಲಾಧ್ಯಕ್ಷ ವೈ.ಸುಧೀರ್ ಜೈನ್ ಉಪಸ್ಥಿತರಿದ್ದರು.
ತಹಸೀಲ್ದಾರ್ ಮಹೇಶ್ಚಂದ್ರ ಸ್ವಾಗತಿಸಿದರು, ಶಂಕರದಾಸ್ ಚಂಡ್ಕಳ ಕಾರ್ಯಕ್ರಮ ನಿರೂಪಿಸಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ತಾಂತ್ರಿಕ ಮೇಲ್ವೀಚಾರಕರಾದ ಪೂರ್ಣಿಮ ವಂದಿಸಿದರು.