ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ದಾಳಿ- ಕಿಡಿಗೇಡಿಗಳಿಗೆ ಗೃಹ ಸಚಿವರಿಂದ ಕಾನೂನು ಕ್ರಮದ ಎಚ್ಚರಿಕೆ
ಉಡುಪಿ: ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ದಾಳಿ ನಡೆಸಿರುವುದನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಖಂಡಿಸಿದ್ದಾರೆ.
ಈ ಬಗ್ಗೆ ಉಡುಪಿ ಪ್ರವಾಸದ್ಲಲಿರುವ ಅವರು ರಾತ್ರಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು ಡಿಜೆ ಹಳ್ಳಿ ವ್ಯಾಪ್ತಿಯಲ್ಲಿ ನಡೆದ ಪುಂಡಾಟಿಕೆ ಗಮನಕ್ಕೆ ಬಂದಿದೆ ಬೆಂಕಿ ಹಚ್ಚುವುದು , ಗಲಾಟೆ ಕಾನೂನು ಬಾಹಿರ ಕೃತ್ಯ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ . ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನು ರವಾನೆ ಮಾಡಲಾಗಿದ್ದು ಪೊಲೀಸರಿಗೆ ಸಂಪೂರ್ಣ ಅಧಿಕಾರವನ್ನು ಕೊಟ್ಟಿದ್ದೇನೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ.
ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರುತ್ತಾರೆ ತಪ್ಪು ಮಾಡಿದವರು ಎಷ್ಟೇ ದೊಡ್ಡವರಾಗಿದ್ದರೂ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಘಟನೆ ವಿವರ
ಪುಲಿಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ್ ಸಂಬಂಧಿಯೊಬ್ಬರು ಫೇಸ್ಬುಕ್ನಲ್ಲಿ ಕೋಮು ಪ್ರಚೋದಿತ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ಅಖಂಡ ಶ್ರೀನಿವಾಸ್ ಮೂರ್ತಿ ನಿವಾಸ ಹಾಗೂ ಕಚೇರಿ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.
ಘಟನೆಯಲ್ಲಿ ಶಾಸಕರ ಮನೆ ಕಿಟಕಿ ಗಾಜುಗಳು ಪುಡಿ ಪುಡಿಯಾಗಿದ್ದು, ಆಫೀಸ್ ಬಳಿ ನಿಂತಿದ್ದ ಕಾರುಗಳ ಮೇಲೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯನ್ನು ನೋಡಿ ಅಲ್ಲಿದ್ದ ಜನ ಓಡಿ ಹೋಗಿ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಪೊಲೀಸರು ಅಕ್ಕಪಕ್ಕದ ಎಲ್ಲಾ ರಸ್ತೆ ಗಳನ್ನು ಮುಚ್ಚಿದ್ದಾರೆ. ಪೊಲೀಸರ ಮೇಲೆ ಯುವಕರ ಗುಂಪು ದಾಳಿ ಮಾಡಿದೆ.
ಪೋಸ್ಟ್ ಹಾಕಿದ ಶಾಸಕರ ಸಂಬಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ಎದುರು ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು, ಪರಿಸ್ಥಿತಿ ಬಿಗಡಾಯಿಸಿದೆ. ಫೇಸ್ಬುಕ್ನಲ್ಲಿ ಶಾಸಕರ ಸಂಬಂಧಿಯೊಬ್ಬರು ಮುಸ್ಲಿಂ ವಿರೋಧಿ ಪೋಸ್ಟ್ ಹಾಕಿದ್ದರು ಎನ್ನಲಾಗಿದೆ.
ತಡರಾತ್ರಿ ಶ್ರೀನಿವಾಸ್ ಮೂರ್ತಿ ನಿವಾಸದ ಮೇಲೆ 15ಕ್ಕೂ ಹೆಚ್ಚು ಕಿಡಿಗೇಡಿಗಳು ದಾಳಿ ನಡೆಸಿದ್ದಾರೆ. ಈಗಾಗಲೇ ಪೊಲೀಸ್ ಠಾಣಾ ಆವರಣದಲ್ಲಿ ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಪರಿಸ್ಥಿತಿ ಪೂರ್ವ ವಿಭಾಗದ ಎಲ್ಲಾ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಯನ್ನು ಕೆ.ಜಿ.ಹಳ್ಳಿ ಠಾಣೆ ಬಳಿ ಬರುವಂತೆ ಸೂಚನೆ ನೀಡಲಾಗಿದೆ.
ಅಖಂಡ ಶ್ರೀನಿವಾಸ್ ಮನೆ ಮುಂಭಾಗವೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕೆ.ಜಿ.ಹಳ್ಳಿ ಪೊಲೀಸ್ ಠಾಣೆಗ ಬಳಿ ಶಾಸಕ ಜಮೀರ್ ಅಹಮದ್ ಭೇಟಿ ನೀಡಿದ್ದು, ಗಲಾಟೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಪರಿಸ್ಥಿತಿ ತಹಬದಿಗೆ ಬಂದಂತೆ ಕಾಣುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮುಂದುವರೆಸಲಾಗಿದೆ.
ಇನ್ನು, ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ, ಏನೇ ಆಗಿದ್ದರೂ ನಾವೆಲ್ಲಾ ಅಣ್ಣ-ತಮ್ಮಂದಿರಂತೆ ಇರೋಣ. ಪೋಸ್ಟ್ ಹಾಕಿದ್ದ ಕಿಡಿಗೇಡಿಯನ್ನು ಈಗಾಗಲೇ ಬಂಧಿಸಿದ್ದೇವೆ ಎಂದು ಹೇಳಿದ್ದು, ಗಲಾಟೆ ಮಾಡಬೇಡಿ. ತನಿಖೆಯಿಂದ ಎಲ್ಲಾ ಹೊರಬರಲಿದೆ ಎಂದು ಕ್ಷೇತ್ರದ ಮತದಾರರದಲ್ಲಿ ಮನವಿ ಮಾಡಿದ್ದಾರೆ.