ಶಿಕ್ಷಣ ಜಗತ್ತನ್ನು ಬದಲಾಯಿಸುವ ಅತ್ಯಂತ ಶಕ್ತಿಶಾಲಿ ಅಸ್ತ್ರ – ವಂ|ವಿನ್ಸೆಂಟ್ ಕ್ರಾಸ್ತಾ

Spread the love

ಶಿಕ್ಷಣ ಜಗತ್ತನ್ನು ಬದಲಾಯಿಸುವ ಅತ್ಯಂತ ಶಕ್ತಿಶಾಲಿ ಅಸ್ತ್ರ – ವಂ|ವಿನ್ಸೆಂಟ್ ಕ್ರಾಸ್ತಾ

ಉಡುಪಿ: ಶಿಕ್ಷಣ ಜಗತ್ತನ್ನು ಬದಲಾಯಿಸುವ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿದ್ದು ಪ್ರತಿಯೊಬ್ಬರೂ ಉನ್ನತ ಶಿಕ್ಷಣ ಪಡೆಯುವತ್ತ ಕಾರ್ಯೋನ್ಮುಖರಾಗಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂ|ವಿನ್ಸೆಂಟ್ ಕ್ರಾಸ್ತಾ ಅಭಿಪ್ರಾಯಪಟ್ಟರು.

ಅವರು ಭಾನುವಾರ ಕಕ್ಕುಂಜೆಯ ಅನುಗ್ರಹ ಪಾಲನಾ ಕೇಂದ್ರದಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ ಹಾಗೂ ದಿ. ತೆರೆಜಾ ಕರ್ನೆಲಿಯೋ ಮತ್ತು ಕುಟುಂಬ ಇವರುಗಳ ಜಂಟಿ ಆಶ್ರಯದಲ್ಲಿ ಆಯೋಜಸಿದ್ದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶಿಕ್ಷಣವು ಆಧುನಿಕ ಸಮಾಜದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಜೀವನದ ಗುಣಮಟ್ಟವನ್ನು ಸುಧಾರಿಸಲು ಅಗತ್ಯವಾದ ಸಾಧನಗಳನ್ನು ಒದಗಿಸುತ್ತದೆ. ಶಿಕ್ಷಣವು ಪರಸ್ಪರ ಸಂಪರ್ಕ ಸಾಧನವಾಗಿದ್ದು ವ್ಯಕ್ತಿಯ ಹಾಗೂ ಸಮಾಜದ ಅಭಿವೃದ್ಧಿಗೆ ಶಿಕ್ಷಣವೆಂಬುದು ಅವಿಭಾಜ್ಯ ಅಂಗವಾಗಿದೆ. ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ತಾವು ಅಭಿವೃದ್ಧಿ ಹೊಂದಿದ ಬಳಿಕ ಇತರರಿಗೆ ಸಹಾಯ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸರಕಾರಿ ಹುದ್ದೆಗಳತ್ತ ಗಮನ ಹರಿಸುವಂತೆ ಸಲಹೆ ನೀಡಿದರು.

ಸಮಾಜ ಸೇವಕಿ ಹಾಗೂ ದಿ|ತೆರೆಸಾ ಕರ್ನೆಲಿಯೋ ಕುಟುಂಬ ಸದಸ್ಯೆ ವೆರೋನಿಕಾ ಕರ್ನೆಲಿಯೋ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮವಾದ ಹಾಗೂ ಇಂದಿನ ಅಗತ್ಯತೆಗೆ ಸಂಬಂಧಪಟ್ಟ ಶಿಕ್ಷಣ ಹೊಂದಿರದಿದ್ದರೆ ಉತ್ತಮ ಭವಿಷ್ಯ ಪಡೆಯುವುದು ಕಷ್ಟ ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥೀಗಳು ಉನ್ನತ ಶಿಕ್ಷಣದತ್ತ ಹೆಚ್ಚು ಗಮನ ಹರಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷರಾದ ಸಂತೋಷ್ ಕರ್ನೆಲಿಯೋ ವಹಿಸಿದ್ದರು. ಕಥೊಲಿಕ್ ಸಭಾದ ಆಧ್ಯಾತ್ಮಿಕ ನಿರ್ದೇಶಕರಾದ ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಒಟ್ಟು 50 ವಿದ್ಯಾರ್ಥಿಗಳಿಗೆ ರೂ 5 ಲಕ್ಷ ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಇದೇ ವೇಳೆ ಸಶಕ್ತ ಸಮುದಾಯ ಟ್ರಸ್ಟ್ ವತಿಯಿಂದ ಕ್ಯಾಪ್ ಸೆಲ್ ಕಲ್ಯಾಣಪುರ ಇದರ ನಿಧಿಯಿಂದ ಇಬ್ಬರು ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಸಹಾಯಧನವನ್ನು ಕೂಡ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕಥೊಲಿಕ್ ಸಭಾ ನಿಯೋಜಿತ ಅಧ್ಯಕ್ಷರಾದ ರೊನಾಲ್ಡ್ ಆಲ್ಮೇಡಾ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಸಹಕಾರ್ಯದರ್ಶಿ ಲೂಯಿಸ್ ಡಿಸೋಜಾ, ಮಾಜಿ ಅಧ್ಯಕ್ಷರಾದ, ಆಲ್ಫೋನ್ಸ್ ಡಿಕೋಸ್ತಾ, ವಾಲ್ಟರ್ ಸಿರಿಲ್ ಪಿಂಟೊ, ಕುಂದಾಪುರ ವಲಯ ಅಧ್ಯಕ್ಷರಾದ ರೋಜಿ ಕ್ವಾಡ್ರಸ್, ಕುಂದಾಪುರ ವಲಯ ಅಧ್ಯಕ್ಷರಾದ ವಿಲ್ಸನ್ ಡಿ ಆಲ್ಮೇಡಾ ಹಾಗೂ ಇತರ ಪದಾಧಿಕಾರಿಗಳು ಉಪಸ್ಥೀತರಿದ್ದರು.
ಕಾರ್ಯಕ್ರಮದ ಸಂಚಾಲಕರಾದ ಡಾ. ಜೆರಾಲ್ಡ್ ಪಿಂಟೊ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಒಲಿವೀಯಾ ಡಿಮೆಲ್ಲೊ ವಂದಿಸಿದರು.


Spread the love
Subscribe
Notify of

0 Comments
Inline Feedbacks
View all comments