ಶಿಕ್ಷಣದಲ್ಲಿ ಸಾಮಾಜಿಕ ನ್ಯಾಯದ ಸ್ಥಿತಿ-ಗತಿ

Spread the love

ಶಿಕ್ಷಣದಲ್ಲಿ ಸಾಮಾಜಿಕ ನ್ಯಾಯದ ಸ್ಥಿತಿ-ಗತಿ

ಆರು ತಿಂಗಳ ಹಿಂದಿನ ಪರಿಸ್ಥಿತಿಗೂ, ಇಂದಿನ ಪರಿಸ್ಥಿತಿಗೂ ಅಜಗಜಾಂತರ ವ್ಯತ್ಯಾಸ ಕಾಣಿಸುತ್ತಿದೆ. ಸಮಾಜದ ರೀತಿ, ನೀತಿ, ರಿವಾಜುಗಳು ಮತ್ತೆ ಸುಮಾರು 8-10 ವರ್ಷಗಳಷ್ಟು ಹಿಂದಿನ ಪರಿಸ್ಥಿತಿಗೆ ತಿರುಗಿದೆಯೋ ಎಂಬ ಸಂಶಯ ಮೂಡುತ್ತಿದೆ. ಇದಕ್ಕೆ ಕಾರಣ ಕೊರೊನಾ ವೈರಸ್‍ನ ಹೊಡೆತ. ಕಣ್ಣಿಗೆ ಕಾಣದ ಈ ವೈರಸ್ ಜಗತ್ತಿನಲ್ಲಿ ಲಕ್ಷಾಂತರ ಮಂದಿಯನ್ನು ಆಪೋಶನ ತೆಗೆದುಕೊಂಡಿದೆ. ಇಂತಹ ವೈರಸ್ ಪ್ರತಿಯೊಬ್ಬರ ದೇಹದಲ್ಲೂ ಇರುತ್ತದೆ. ಆದರೆ ಯಾವಾಗ ದೇಹದ ಪ್ರತಿರೋಧಕ ಬಲ ಕಡಿಮೆಯಾಗುತ್ತದೋ ಆಗ ಆ ರೋಗದ ಲಕ್ಷಣ ಹೊಂದಿರುವಾತನ ಸಂಪರ್ಕದಿಂದ ವೈರಸ್ ಮತ್ತೆ ಪ್ರಬಲಗೊಂಡು ಅನಾರೋಗ್ಯ ಹೆಚ್ಚಿಸುತ್ತದೆ. ಹೀಗಾಗಿ ಸಾಮಾಜಿಕ ಅಂತರವಾದ ಕನಿಷ್ಠ ಎರಡು ಗಜಗಳ ದೂರದ ಅಂತರ ಕಾಪಾಡಿಕೊಳ್ಳಿ ಎಂದೂ, ಮಾಸ್ಕ್ ಕಡ್ಡಾಯವಾಗಿ ಧರಿಸಿರೆಂದೂ ಸರಕಾರ, ಆರೋಗ್ಯ ಇಲಾಖೆ ಮತ್ತೆ ಮತ್ತೆ ಬೇಡಿಕೊಳ್ಳುತ್ತಿದೆ, ಪ್ರತಿಯೊಬ್ಬರ ಮೊಬೈಲ್ ಕಾಲ್ ಸಂದರ್ಭದಲ್ಲೂ ನೆನಪಿಸುತ್ತಿದೆ. ಆದರೆ ಕೆಲವು ಸಂಭಾವಿತರು ಎಲ್ಲವನ್ನೂ ಗಾಳಿಗೆ ತೂರಿ ಮನ ಬಂದಂತೆ ವರ್ತಿಸಿ ಇತರರಿಗೆ ರೋಗ ಹರಡಲು, ಉಲ್ಬಣಗೊಳ್ಳಲು ಕಾರಣಕರ್ತರಾಗುತ್ತಿದ್ದಾರೆ.

ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧಾರಣೆ ಅತ್ಯಗತ್ಯವಾಗಿರುವಾಗ ಶೈಕ್ಷಣಿಕ ಕಾರ್ಯಕ್ರಮಗಳು ಹೇಗೆ ತಾನೇ ಪ್ರಾರಂಭಗೊಳ್ಳಲು ಸಾಧ್ಯ? ಒಂದು ವೇಳೆ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಪ್ರತೀ ತರಗತಿಯ ಅರ್ಧದಷ್ಟು ವಿದ್ಯಾರ್ಥಿಗಳು ಬೆಳಗ್ಗಿನ ಅವಧಿಗೆ, ಇನ್ನರ್ಧದಷ್ಟು ವಿದ್ಯಾರ್ಥಿಗಳು ಮಧ್ಯಾಹ್ನದ ಅವಧಿಗೆ ಹಾಜರಾಗುವಂತೆ ಮಾಡಬಹುದಾಗಿದೆ. ಆದರೆ ಆರು ವಿಷಯಗಳ ಪಾಠ ಪ್ರವಚನದ ಮರು ಹೊಂದಾಣಿಕೆಯೇ ಬಹಳ ಯೋಚನಾ ವಿಷಯವಾಗಿದೆ. ಖಾಸಗೀ ಹಾಗೂ ದೇಶೀಯ ಶಿಕ್ಷಣ ಮಾಧ್ಯಮಗಳಲ್ಲಿ ಆನ್ ಲೈನ್ ಶಿಕ್ಷಣ ಸಾಧ್ಯವಾಗಿದ್ದರೂ ಕೂಡಾ ಅದು ಸಮರ್ಪಕ ಶಿಕ್ಷಣ ಅಲ್ಲ ಎಂದು ಎಲ್ಲರೂ ಒಪ್ಪಿಕೊಂಡಿದ್ದಾರೆ. ಆದರೆ ರಾಜ್ಯ ಶಿಕ್ಷಣ ಮಾಧ್ಯಮzಲ್ಲಿರುವ ವಿದ್ಯಾರ್ಥಿಗಳಲ್ಲಿ, ಹೆತ್ತವರಲ್ಲಿ ಸ್ಮಾರ್ಟ್‍ಫೋನ್ಗಳ ಅಲಭ್ಯತೆಯಿಂದಾಗಿ ಆನ್ ಲೈನ್ ಶಿಕ್ಷಣ ಹೆಚ್ಚು ಪ್ರಭಾವಶಾಲಿಯಾಗಿಲ್ಲ. ಹೀಗಿದ್ದರೂ ಕೂಡಾ ರಾಜ್ಯ ಸರಕಾರ ಚಂದನ ಚಾನಲ್ ಮೂಲಕ ಹೆಚ್ಚಿನ ವಿದ್ಯಾರ್ಥಿಗಳ ಮನೆ-ಮನ ಮುಟ್ಟಲು ಇನ್ನಿಲ್ಲದ ಪ್ರಯತ್ನದಲ್ಲಿದೆ. ಅದಕ್ಕಾಗಿ ರಾಜ್ಯದ ಶಿಕ್ಷಣ ಮಂತ್ರಿಗಳನ್ನು ಅವರ ಶ್ರಮಕ್ಕಾಗಿ ಅಭಿನಂದಿಸಬೇಕಾಗಿದೆ. ಆದರೆ ಬಹಳ ಖೇದಕರ ವಿಷಯವೇನೆಂದರೆ ಕೆಲವು ವಿದ್ಯಾರ್ಥಿಗಳ ಮನೆಗಳಲ್ಲಿ ಟಿ.ವಿ.ಯ ಲಭ್ಯತೆಯೂ ಇಲ್ಲದ ಕಾರಣ ಮಂತ್ರಿಗಳ ಪ್ರಯತ್ನದಲ್ಲಿ ಸ್ವಲ್ಪ ಮುಕ್ಕಾಗುತ್ತಿದೆ. ಕೂಲಿ, ನಾಲಿ ಮಾಡಿ ಜೀವನ ಸಾಗಿಸುವ ಅತ್ಯಂತ ಕಡು ಬಡ ಕುಟುಂಬಗಳಲ್ಲಿ ಟಿ.ವಿ. ಕೂಡಾ ಇಲ್ಲದಿರುವುದು ನಮ್ಮ ಸಾಮಾಜಿಕ ನ್ಯಾಯದ ಸ್ಥಿತಿ-ಗತಿಯನ್ನು ಸಾರಿ ಹೇಳುತ್ತಿದೆ.

ಕೂಲಿ-ನಾಲಿ ಮಾಡಿ ಬಹಳ ಕಡು ಬಡತನದಲ್ಲಿರುವ ಕುಟುಂಬದ ಮಕ್ಕಳು ತಮ್ಮ ಶಿಕ್ಷಣವನ್ನು ಸುಧಾರಿಸಿಕೊಳ್ಳುವುದಕ್ಕಾಗಿ ಸರಕಾರ ಜಾರಿಗೆ ತಂದ ವಸತಿ ಶಾಲೆಗಳಲ್ಲಿ ಆಶ್ರಯವನ್ನು ಪಡೆದು ಊಟ, ಬಟ್ಟೆ, ಶಿಕ್ಷಣ, ವಸತಿ ಎಲ್ಲವನ್ನೂ ಉಚಿತವಾಗಿ ಪಡೆದು ಸುಧಾರಿಸಿಕೊಳ್ಳುತ್ತಿದ್ದರು. ಇಂತಹ ಸಂದರ್ಭದಲ್ಲಿ ಮಾರಕವಾಗಿ ಎರಗಿದ ಕೊರೊನಾ ಅವರ ಬದುಕನ್ನು, ಶಿಕ್ಷಣವನ್ನು ಅದಕ್ಕಿಂತ ಹೆಚ್ಚಾಗಿ ಅವರೆಲ್ಲರ ಕನಸುಗಳನ್ನು ಮೂರಾಬಟ್ಟೆ ಮಾಡಿ ಬಿಟ್ಟಿರುವುದು ಖೇದನೀಯ ಸಂಗತಿ.

ಕರ್ನಾಟಕ ರಾಜ್ಯದ ಸುಮಾರು ಒಂದು ಸಾವಿರದ ನೂರು ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ ಸುಮಾರು 55 ಸಾವಿರ ವಿದ್ಯಾರ್ಥಿಗಳು ಕಲಿಯುವರೇ ವಾಸವಾಗಿದ್ದರು. ಅದೇ ಪ್ರಕಾರ ಸುಮಾರು 300 ವಿದ್ಯಾರ್ಥಿನೀ ನಿಲಯಗಳಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕಲಿಯಲು ವಾಸವಾಗಿದ್ದರು. ಹೀಗೆಯೇ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಸುಮಾರು 500 ವಿದ್ಯಾರ್ಥಿ ನಿಲಯಗಳಲ್ಲಿ ಸುಮಾರು 46 ಸಾವಿರ ವಿದ್ಯಾರ್ಥಿಗಳು ಕಲಿಕಾ-ವಾಸ ಮಾಡುತ್ತಿದ್ದರು. ಅದೇ ರೀತಿ ಮೆಟ್ರಿಕ್ ನಂತರದ ಸುಮಾರು 700 ವಿದ್ಯಾರ್ಥಿನಿಯರ ನಿಲಯಗಳಲ್ಲಿ ಸಾಧಾರಣ 65 ಸಾವಿರದಷ್ಟು ವಿದ್ಯಾರ್ಥಿನಿಯರು ಕಲಿಕಾ-ವಾಸ ಮಾಡುತ್ತಿದ್ದರು. ಸಾಧಾರಣ ಇಷ್ಟೇ ಪ್ರಮಾಣದ/ ಸಂಖ್ಯೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರುಗಳು ಸಮಾಜ ಕಲ್ಯಾಣ ಇಲಾಖೆ ನಡೆಸುತ್ತಿರುವ ವಿದ್ಯಾರ್ಥಿ ನಿಲಯಗಳಲ್ಲಿ, ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ, ಹಾಗೂ ಇತರ ಹಲವಾರು ಆಶ್ರಮ ಶಾಲೆಗಳಲ್ಲಿ ಪ್ರವೇಶ ಪಡೆದು ಕಲಿಕಾ-ವಾಸ ಮಾಡುತ್ತಿದ್ದಿರಬಹುದು.

ಇಡೀ ರಾಜ್ಯದ ಇಷ್ಟು ¯ಕ್ಷಾಂತರ ಮಂದಿ ವಿದ್ಯಾರ್ಥಿಗಳ ಕಲಿಕಾ-ವಾಸಕ್ಕೆ ಇನ್ನು ಮುಂದೆ ವಿದ್ಯಾರ್ಥಿ ನಿಲಯಗಳಲ್ಲಿ ಸಾಧ್ಯವಾಗಲಿಕ್ಕಿಲ್ಲ. ಕಾರಣ ಕೋವಿಡ್ ಅಥವಾ ಕೊರೊನಾದಿಂದಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಾಗಿರುವುದು. ವಿದ್ಯಾರ್ಥಿ ನಿಲಯಗಳಿಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳು ಹೆಚ್ಚಿನ ಕಡೆಗಳಲ್ಲಿ ಒಂದೇ ಕೋಣೆ / ಹಾಲ್ ಗಳಲ್ಲಿ ಕನಿಷ್ಠ 5 ರಿಂದ 20-25 ಮಂದಿ ವಾಸಿಸುತ್ತಿದ್ದರು.. ಇನ್ನು ಮುಂದೆ ಇದು ಸಾಧ್ಯವಾಗಲಾರದು. ಅದೇ ರೀತಿ 4-5 ಶೌಚಾಲಯಗಳನ್ನು ನೂರಕ್ಕೂ ಹೆಚ್ಚು ಮಂದಿ ಉಪಯೋಗಿಸುತ್ತಿದ್ದರು. ಸಾಮಾಜಿಕ ಅಂತರವಿಲ್ಲದೆ

ಊಟ-ತಿಂಡಿ-ಇತ್ಯಾದಿ ಎಲ್ಲವೂ ನಡೆಯುತ್ತಿತ್ತು. ಆದರೆ ಇದೆಲ್ಲವೂ ಇನ್ನು ಕಷ್ಟ ಸಾಧ್ಯ. ಎಲ್ಲಿಯ ತನಕ ವೈರಸ್ ನಿಯಂತ್ರಣದ ಚುಚ್ಚುಮದ್ದು / ಔಷಧಿ ದೇಶದಾದ್ಯಂತ ಜಾರಿಗೆ ಬರುವುದಿಲ್ಲವೋ ಇಂತಹ ಎಲ್ಲ ಸಾರ್ವಜನಿಕ, ಒಟ್ಟಾಗಿ, ಒಂದಾಗಿ ಬದುಕುವ ವಿಧಾನ ಕಷ್ಟ ಸಾಧ್ಯವಾಗಬಹುದು.

ಸಾಮಾಜಿಕ ನ್ಯಾಯದ ಆಧಾರದಲ್ಲಿ ಇದುವರೆವಿಗೆ ವಿದ್ಯಾರ್ಥಿ ನಿಲಯಗಳಲ್ಲಿ ಊಟ-ತಿಂಡಿ-ಬಟ್ಟೆ ಪಡೆದು ಕಲಿಕಾ-ವಾಸ ಪಡೆಯುತ್ತಿದ್ದ ಲಕ್ಷಾಂತರ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಪರಿಸ್ಥಿತಿ ಮತ್ತೊಮ್ಮೆ ಡೋಲಾಯಮಾನವಾಗಿದೆ. ಸರಕಾರ ಬಿಸಿ ಊಟದ ಸಾಮಗ್ರಿಗಳನ್ನು ಕೊಟ್ಟು ಹೆತ್ತವರ ಪರಿಸ್ಥಿತಿಯನ್ನು ಸುಧಾರಿಸಲು ಹೆಣಗಾಡುತ್ತಿದೆ. ಇಂತಹ ಸಂದರ್ಭದಲ್ಲಿ ಶಾಲೆಯನ್ನು ಪ್ರಾರಂಭಿಸಲು ಒತ್ತಾಯಿಸುತ್ತಿರುವ ಹೆತ್ತವರು, ಅಧಿಕಾರಿಗಳು, ಸಾಮಾನ್ಯರುಗಳು ಸ್ವಲ್ಪ ಈ ಮೇಲಿನ ವಿಚಾರಗಳ ಬಗೆಗೆ ಆಲೋಚಿಸುವುದು ಉತ್ತಮ. ನಿಮ್ಮ ಮಕ್ಕಳಂತೆಯೇ , ಈ ಮೇಲ್ಕಂಡ ವಿವಿಧ ವಿದ್ಯಾರ್ಥಿ ನಿಲಯಗಳಲ್ಲಿ ಆಶ್ರಯ ಪಡೆದು ವಿದ್ಯಾಭ್ಯಾಸದಲ್ಲಿ ಮೇಲ್ ಸ್ತರಕ್ಕೆ ಏರಲು ಪ್ರಯತ್ನಿಸುತ್ತಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅಂತಹ ಆಸರೆಯನ್ನೇ ಕಳೆದುಕೊಂಡು ಸೂಕ್ತ ಶೈಕ್ಷಣಿಕ ಪರಿಸರ ರಹಿತ ಮನೆಯ ಆವರಣದಲ್ಲಿ ಹೇಗೆ ತಾನೇ ತನ್ನ ಶಿಕ್ಷಣವನ್ನು ಮುಂದುವರೆಸಲು ಸಾಧ್ಯವಾಗುತ್ತದೆ?

ಕೆಲವು ವಿದ್ಯಾರ್ಥಿಗಳ ಮನೆಗಳಂತೂ ಜೋಪಡಿಯದ್ದು, ಕೆಲವು ಮಣ್ಣಿನ ನೆಲದ ಮೇಲೆಯೇ ಊಟ-ತಿಂಡಿ-ವಾಸ ಮಾಡುವಂತಹದ್ದು, ಕೆಲವು ಸೂಕ್ತ ಮಾಡೂ ಇಲ್ಲದ್ದು, ಇನ್ನು ಕೆಲವು ಗೋಡೆಯೂ ಇಲ್ಲದೆ ಕೇವಲ ತಟ್ಟಿ/ ಶೀಟುಗಳದ್ದು. ಇಂತಹದ್ದರಲ್ಲಿ ವಾಸಿಸುವ ಮಕ್ಕಳು ಈ ಮೊದಲು ಕುಡುಕ ತಂದೆ-ತಾಯಿಯರ, ಹೊಡೆದಾಟ-ಬಡಿದಾಟದ, ಹೆತ್ತವರ, ಹಿರಿಯರ ತೊಂದರೆಗಳಿಂದ ದೂರವಿದ್ದು ಶಿಕ್ಷಣ ಪೂರಕ ವಾತಾವರಣದ ವಿದ್ಯಾರ್ಥಿ ನಿಲಯಗಳಲ್ಲಿ ವಾಸಿಸಿ ಉತ್ತಮ ಊಟ-ಬಟ್ಟೆ-ವಾಸ ಪಡೆದು ಶೈಕ್ಷಣಿಕವಾಗಿ ಮೆರೆಯುತ್ತಿದ್ದರು. ಅಂತಹ ವಾತಾವರಣದಿಂದ ಬಂದ ಹಲವಾರು ಮಂದಿ ಇಂದು ಶೈಕ್ಷಣಿಕವಾಗಿ ಔನ್ನತ್ಯಕ್ಕೆ ಏರಿ ಉತ್ತಮ ಉದ್ಯೋಗ, ಮನೆ, ಇತ್ಯಾದಿಗಳನ್ನು ಹೊಂದಿ ತಮ್ಮ ಜಾಣ್ಮೆಯನ್ನು ಪ್ರಪಂಚಕ್ಕೆ ಸಾಬೀತು ಪಡಿಸಿ ತೋರಿಸಿದ್ದಾರೆ.

ಮನೆಯಲ್ಲಿ ಪ್ರತ್ಯೇಕ ರೂಮು, ಸ್ವಂತ ಮೊಬೈಲು, ವಾಟ್ಸಪ್, ಕಂಪ್ಯೂಟರ್, ಇತ್ಯಾದಿ ಎಲ್ಲವನ್ನೂ ಹೊಂದಿರುವ ಮಗುವಿನಂತೆಯೇ ಜೋಪಡಿಯ ನೆಲದಲ್ಲಿ ಏನೂ ಸಲಕರಣೆ ಇಲ್ಲದೆ ಆಗಸವನ್ನೇ ಸೂರನ್ನಾಗಿ ಹೊಂದಿರುವ, ಸೋರುವ ಮನೆಗೆ ಹಾದಿ-ಬೀದಿಯಲ್ಲಿ ದೊರಕುವ ಪ್ಲಾಸ್ಟಿಕ್ ಶೀಟ್ ಗಳನ್ನು ಹೊದಿಸಿ ಮಳೆಗಾಲವನ್ನು ದೂಡುವ ಮಗುವಿಗೂ ಸಾಮಾಜಿಕ ನ್ಯಾಯದಲ್ಲಿ ಶಿಕ್ಷಣ ದೊರಕಬೇಕಾಗಿದೆ. ಎಲ್ಲಿಯ ತನಕ ಸಾಮಾಜಿಕ ನ್ಯಾಯ ಎಲ್ಲ ಮಕ್ಕಳಿಗೂ ಸಮಾನವಾಗಿ ಪೂರೈಕೆಯಾಗುವುದಿಲ್ಲವೋ ಆ ತನಕ ಶಿಕ್ಷಣದ “ಕಡ್ಡಾಯ, ಸಾರ್ವತ್ರೀಕರಣ” ಕನ್ನಡಿಯ ಗಂಟು. ಕೊರೊನಾ ಇರಲಿ, ಬೇರಾವುದೇ ಇರಲಿ, ಬೇರಾವುದೇ ಅನಾರೋಗ್ಯ ಬರಲಿ ಸಾಮಾಜಿಕ ನ್ಯಾಯ ಶಿಕ್ಷಣದಲ್ಲಿಯೇ ಅಸಾಧ್ಯವೆಂದಾದರೆ ಬೇರಾವುದರಲ್ಲಿ ನ್ಯಾಯ ಸಾಧ್ಯವಾಗಬಹುದು? ಒಮ್ಮೆ ಯೋಚಿಸಿರಿ.

ಲೇಖನ : ರಾಯೀ ರಾಜ ಕುಮಾರ್, ಮೂಡುಬಿದಿರೆ (ಲೇಖಕರು ಹಿರಿಯ ಶಿಕ್ಷಕರು, ದ.ಕ. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತರು, ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ, ಸಮಾಜ ಚಿಂತಕರು, ಲೇಖಕರು, ದ.ಕ. ಜಿಲ್ಲಾ ಹಿಂದಿ ಶಿಕ್ಷಕ ಸಂಘದ ಅಧ್ಯಕ್ಷರು, ಮೂಡುಬಿದಿರೆ ಗ್ರಾಹಕ ಸಂಘಟನೆಯ ಅಧ್ಯಕ್ಷರು, ದ.ಕ. ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜತೆ ಕಾರ್ಯದರ್ಶಿ, 480 ಕ್ಕೂ ಮಿಕ್ಕಿ ವಿವಿಧ ವಿಷಯದ ಕಾರ್ಯಾಗಾರ, ಪ್ರದರ್ಶನಗಳನ್ನು ನಡೆಸಿದವರು)


Spread the love