ಶಿರಾಡಿ ಘಾಟಿ: ಲಘು ವಾಹನಗಳಿಗೆ ಸಂಚಾರ ಮುಕ್ತ; ದ.ಕ. ಜಿಲ್ಲಾಧಿಕಾರಿ ಆದೇಶ
ಮಂಗಳೂರು: ಶಿರಾಡಿ ಘಾಟಿ ರಸ್ತೆಯನ್ನು ಲಘು ವಾಹನಗಳ ಸಂಚಾರಕ್ಕೆ ತಕ್ಷಣದಿಂದಲೇ ಮುಕ್ತ ಮಾಡಿ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.
ಇತ್ತೀಚೆಗೆ ಶಿರಾಡಿ ಘಾಟಿ ರಸ್ತೆಯಲ್ಲಿ ಭೂಕುಸಿತ ಹಿನ್ನೆಲೆಯಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಪ್ರಸಕ್ತ ಭೂ ಕುಸಿತ ಸ್ಥಳಗಳನ್ನು ದುರಸ್ತಿ ಮಾಡಲಾಗಿದ್ದು, ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಹುದು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ವರದಿ ನೀಡಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗಳು ಸ್ಥಳ ತನಿಖೆ ನಡೆಸಿ , ವರದಿ ನೀಡಲು ರಾಷ್ಟ್ರೀಯ ಹೆದ್ದಾರಿ ಕಾರ್ಯಕಾರಿ ಅಭಿಯಂತರರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಹಾಗೂ ಪುತ್ತೂರು ಉಪವಿಭಾಗಾಧಿಕಾರಿಗಳ ತಂಡ ನೇಮಿಸಿದ್ದರು.
ಈ ತಂಡವು ನೀಡಿದ ವರದಿಯಾನ್ವಯ ಜಿಲ್ಲಾಧಿಕಾರಿಗಳು, ಶಿರಾಡಿ ಘಾಟಿ ರಸ್ತೆಯಲ್ಲಿ ಕೆಲವು ಸ್ಥಳಗಳಲ್ಲಿ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ನೀಡಿ ಕಾರು, ಜೀಪು, ದ್ವಿಚಕ್ರ ವಾಹನಗಳು, ಟೆಂಪೋ ಟ್ರಾವೆಲರ್, ಮ್ಯಾಕ್ಸಿಕ್ಯಾಬ್ ವಾಹನಗಳ ಸಂಚಾರಕ್ಕೆ ಅನುವು ಮಾಡಿದ್ದಾರೆ.
ಆದರೆ, ಶಿರಾಡಿ ಘಾಟಿ ರಸ್ತೆ ಇನ್ನೂ ಸಂಪೂರ್ಣ ಯಥಾಸ್ಥಿತಿಗೆ ಬಾರದಿರುವುದರಿಂದ ಎಲ್ಲಾ ವಿಧದ ಬಸ್ಸುಗಳು, ಲಾರಿ, ಟ್ಯಾಂಕರ್, ಕಂಟೈನರ್ ಗಳು ಸೇರಿದಂತೆ ಭಾರೀ ವಾಹನಗಳ ಸಂಚಾರವನ್ನು ಮುಂದಿನ ಆದೇಶದವರೆಗೆ ನಿರ್ಬಂಧಿಸಲಾಗಿದೆ.