ಶಿರ್ವ: ಕಟಪಾಡಿಯಿಂದ ಬೆಳ್ಮಣ್ವರೆಗಿನ ಚತುಷ್ಪತ ರಸ್ತೆ ಕಾಮಗಾರಿಗೆ ರೂ.7 ಕೋಟಿ ರೂ ಮಂಜೂರಾಗಿದ್ದು ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಹಾಗೂ ಆತ್ರಾಡಿ-ಶಿರ್ವ- ರಸ್ತೆ ಅಭಿವೃದ್ಧಿಗೆ ರೂ. 4 ಕೋಟಿ ಮಂಜೂರಾಗಿದ್ದು ಶೀಘ್ರದಲ್ಲಿ ಕಾಮಗಾರಿ ನಡೆಯಲಿದ ಎಂದು ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಅವರು ಇಂದು ಶಿರ್ವ ಗ್ರಾಮ ಪಂಚಾಯತ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ಹಾಗೂ ವಿವಿಧ ಸೌಲಭ್ಯಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುರ್ಕಾಲು-ಪಾಜಕ- ಮೂಡುಬೆಳ್ಳೆ ಗ್ರಾಮ ಸಡಕ್ ರಸ್ತಗೆ ರೂ.4 ಕೋಟಿ ಮಂಜೂರಾಗಿದ್ದು, ಶಿರ್ವದಲ್ಲಿ ರೂ.81 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆಯನ್ನು ನಿರ್ಮಿಸಲಾಗುವುದು ಎಂದು ಸಚಿವರು ಹೇಳಿದರು.
ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕಾಗಿ ಮಣಿಪುರದಿಂದ ಕಾಪುವರೆಗೆ ಕುಡಿಯುವ ನೀರು ಯೋಜನೆಗೆ ರೂ. 52 ಕೋಟಿ ಮಂಜೂರಾಗಿದ್ದು, ಮಣಿಪುರದಿಂದ ಕಾಪುವರೆಗೆ ಯೋಜನೆ ಹಾದುಹೋಗುವ ಎಲ್ಲಾ ಗ್ರಾಮಗಳಲ್ಲಿ ನೀರು ಶುದ್ದೀಕರಣ ಘಟಕಗಳನ್ನು ಸ್ಥಾಪಿಸಿ, ಕುಡಿಯುವ ನೀರು ಒದಗಿಸಲಾಗುವುದು , ಪ್ರಸ್ತುತ ನೀರಿನ ಸಮಸ್ಯೆ ಇರುವಲ್ಲಿ ಬೋರ್ವೆಲ್ಗಳನ್ನು ಕೊರೆಯಲಗುವುದು ಮತ್ತು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು , ನೀರಿನ ಸಮಸ್ಯೆ ಪರಿಹಾರಕ್ಕೆ ಯಾವುದೇ ಹಣಕಾಸಿನ ಕೊರತೆ ಇಲ್ಲ ಎಂದು ಸಚಿವರು ಹೇಳಿದರು.
ಶಿರ್ವದಲ್ಲಿ ನಾಡ ಕಚೇರಿ ಪ್ರಾರಂಭಿಸಲು ರಾಜ್ಯದ ಕಂದಾಯ ಸಚಿವರಿಗೆ ಮನವಿ ಸಲ್ಲಿಸಲಾಗಿದೆ, ನಗರಾಭಿವೃದ್ಧಿ ಇಲಾಖೆಯಡಿಯಲ್ಲಿನ “ಡೆಲ್ಟಾ” ಯೋಜನೆಯಡಿ ಶಿರ್ವ ಬಸ್ ಸ್ಟ್ಯಾಂಡ್ನ್ನು ಸುಸಜ್ಜಿತ ಮತ್ತು ಆಕರ್ಷಕ ರೀತಿಯಲ್ಲಿ ನಿರ್ಮಾಣ ಮಾಡಲು ಯೋಜನೆ ತಯಾರಿಸಲಾಗುತ್ತಿದೆ , ಶಿರ್ವ ಪಂಚಾಯತ್ಗೆ ಪಟ್ಟಣದ ಮಾದರಿಗೆ ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿ ಮೇ ತಿಂಗಳಿನಿಂದ ಬಿಪಿಎಲ್ ಪಡಿತರದಾರರಿಗೆ ಉಚಿತ ಅಕ್ಕಿ ವಿತರಣೆಯೊಂದಿಗೆ ರಿಯಾಯತಿ ದರದಲ್ಲಿ ತಾಳೆ ಎಣ್ಣೆ ಮತ್ತು ಅಯೋಡಿನ್ ಉಪ್ಪು ವಿತರಿಸಲಾಗುವುದು ಎಂದು ಸಚಿವರು ಹೇಳಿದರು.
ಇದಕ್ಕೂ ಮುನ್ನ ಸಚಿವರು ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರೂ.3.50 ಕೋಟಿ ವೆಚ್ಚದ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ ಕಾಮಗಾರಿಯ ಶಿಲಾನ್ಯಾಸ, ರೂ.22 ಲಕ್ಷಗಳ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಪಶು ಚಿಕಿತ್ಸಾಲಯ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿದರು. ನಂತರ 94 ಸಿ ಯಲ್ಲಿ ಅರ್ಜಿ ಸಲ್ಲಿಸಿದ 41 ಮಂದಿಗೆ ಹಕ್ಕುಪತ್ರ, 24 ಸಂಧ್ಯಾ ಸುರಕ್ಷಾ, 70 ಬಿ.ಪಿ.ಎಲ್, ವಿಧವಾ ವೇತನ, ಅಂಗವಿಕಲ ವೇತನ, ಮನಸ್ವಿನಿ, ಭಾಗ್ಯಲಕ್ಷ್ಮಿ ಮತ್ತು ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರಿಗೆ ಸುತ್ತುನಿಧಿಯನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಶಿರ್ವ ಗ್ರಾ.ಪಂ. ಅಧ್ಯಕ್ಷ ಹಸನಬ್ಬ ಶೇಖ್, ಉಪಾಧ್ಯಕ್ಷೆ ದೀಪಿಕಾ ಶಾಲೆಟ್ ಡಿಸೋಜಾ, ಜಿ.ಪಂ. ಸದಸ್ಯೆ ಐಡಾಗಿಬ್ಬ ಡಿಸೋಜಾ, ತಾ.ಪಂ. ಅಧ್ಯಕ್ಷೆ ಸುನೀತಾ ನಾಯಕ್, ಉಪಾಧ್ಯಕ್ಷ ಗಣೇಶ್ ಕುಮಾರ್, ತಾ.ಪಂ. ಸದಸ್ಯ ಕೃಷ್ಣ ಪೂಜಾರಿ , ಉಡುಪಿ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಾನಂದ ಮತ್ತಿತರರು ಉಪಸ್ಥಿತರಿದ್ದರು.