ಶಿರ್ವ ವಲಯ ಮಟ್ಟದ ಕೆಥೊಲಿಕ್ ವೈದ್ಯರು, ದಾದಿಯರು ಮತ್ತು ಪ್ಯಾರಾಮೆಡಿಕಲ್ ಸಿಬಂದಿಗಳ ಸಮಾವೇಶಕ್ಕೆ ಚಾಲನೆ

Spread the love

ಶಿರ್ವ ವಲಯ ಮಟ್ಟದ ಕೆಥೊಲಿಕ್ ವೈದ್ಯರು, ದಾದಿಯರು ಮತ್ತು ಪ್ಯಾರಾಮೆಡಿಕಲ್ ಸಿಬಂದಿಗಳ ಸಮಾವೇಶಕ್ಕೆ ಚಾಲನೆ

ಉಡುಪಿ: ಕಾಯಿಲೆಯಲ್ಲಿ ಇದ್ದವರಿಗೆ ಗುಣಪಡಿಸುವ ಮೂಲಕ ಯೇಸು ಸ್ವಾಮಿಯ ನೈಜ ಆಶಯದಂತೆ ಸೇವೆ ಸಲ್ಲಿಸುವ ವೈದ್ಯರು ದಾದಿಯರ ಕಾಯಕ ದೇವರು ಮೆಚ್ಚುವಂತಾದ್ದಾಗಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಅವರು ಸೋಮವಾರ ಶಿರ್ವ ಸಾವುದ್ ಸಭಾಭವನದಲ್ಲಿ ಉಡುಪಿ ಧರ್ಮಪ್ರಾಂತ್ಯ ಹಾಗೂ ಶಿರ್ವ  ವಲಯ ಆರೋಗ್ಯ ಆಯೋಗ, ಉಸ್ವಾಸ್ ಸಂಸ್ಥೆ ಇವರುಗಳ ಜಂಟಿ ಆಶ್ರಯದಲ್ಲಿ ವಲಯ ಮಟ್ಟದ ಕೆಥೊಲಿಕ್ ವೈದ್ಯರು, ದಾದಿಯರು ಮತ್ತು ಪ್ಯಾರಾಮೆಡಿಕಲ್ ಸಿಬಂದಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಯೇಸು ಸ್ವಾಮಿಯು ತನ್ನ ಜೀವನದಲ್ಲಿ ಹಲವಾರು ಬಾರಿ ಅನಾರೋಗ್ಯ ಪೀಡಿತರನ್ನು, ಕಾಯಿಲೆಯಲ್ಲಿ ನರಳುತ್ತಿರುವವರನ್ನು ಗುಣಪಡಿಸಿದ ಕುರಿತು ಬೈಬಲ್ ಶ್ರೀಗಂಥದ ಮೂಲಕ ತಿಳಿದುಕೊಂಡಿದ್ದೇವೆ. ಅಂದು ಯೇಸು ಸ್ವಾಮಿಯವರು ಮಾಡಿದ ಸೇವೆಯನ್ನು ಅವರ ಪ್ರತಿರೂಪವಾಗಿ ವೈದ್ಯರು, ದಾದಿಯರು, ಪ್ಯಾರಾಮೆಡಿಕಲ್ ಸಿಬಂದಿಗಳು ನಿರ್ವಹಿಸುತ್ತಿದ್ದಾರೆ. ಕಾಯಿಲೆಯಲ್ಲಿ ನರಳುತ್ತಿರುವವರ ಕಣೀರು ಒರೆಸುವ ಮಹತ್ತರವಾದ ಜವಾಬ್ದಾರಿಯನ್ನು ವಹಿಸಿಕೊಳ್ಳುವುದರ ಮೂಲಕ ಆರೋಗ್ಯಯುತ ಸಮಾಜ ನಿರ್ಮಿಸುವತ್ತ ಪಣತೊಟ್ಟಿದ್ದಾರೆ ಎಂದರು.

ಉಡುಪಿ ಧರ್ಮಪ್ರಾಂತ್ಯ ಆರೋಗ್ಯ ಆಯೋಗದ ನಿರ್ದೇಶಕ ಡಾ|ಎಡ್ವರ್ಡ್ ಲೋಬೊ ಮಾತನಾಡಿ ಆರೋಗ್ಯ ಆಯೋಗದ ಮೂಲಕ ಕಳೆದ 6 ವರ್ಷಗಳಲ್ಲಿ ಧರ್ಮಪ್ರಾಂತ್ಯದ ಕ್ರೈಸ್ತ ವಿಶ್ವಾಸಿಗಳ ಆರೋಗ್ಯ ರಕ್ಷಣೆಯಲ್ಲಿ  ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಪೋರೈಸುವ ಪ್ರಯತ್ನ ನಡೆಯುತ್ತಿದೆ. ಆರೋಗ್ಯ ಸಂಬಂಧಿತ ನಿರಂತರವಾದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. 2025ರ ಒಳಗೆ ಸಂಪೂರ್ಣ ಆರೋಗ್ಯಭರಿತ ಧರ್ಮಪ್ರಾಂತ್ಯ ನಿರ್ಮಿಸುವ ಯೋಚನೆ ಇದೆ ಎಂದರು.

ಮಂಗಳೂರ ಸಂತ ಜೋಸೆಫರ ಸೆಮಿನರಿಯ ಪ್ರಾಧ್ಯಾಪಕರಾದ ವಂ|ಡಾ|ಪ್ರವೀಣ್ ಲಿಯೊ ಲಸ್ರಾದೊ, ವಂ|ರೊಕ್ವಿನ್ ಪಿಂಟೊ, ಮಣಿಪಾಲ ಕೆಎಮ್‍ಸಿ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ|ಲೆಸ್ಲಿ ಲೂವಿಸ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೋರ್ ಬ್ಯಾಪ್ಟಿಸ್ಟ್ ಮಿನೇಜಸ್, ಶಿರ್ವ ಡೊನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂ|ಮಹೇಶ್ ಡಿಸೋಜಾ, ಶಿರ್ವ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ, ಪಾಲನ ಮಂಡಳಿಯ ಉಪಾಧ್ಯಕ್ಷರಾದ ವಿಲ್ಸನ್ ಡಿಸೋಜಾ, ಪಿಲಾರ್ ಚರ್ಚಿನ ಧರ್ಮಗುರು ವಂ|ವಿಶಾಲ್ ಲೋಬೊ ಉಪಸ್ಥಿತರಿದ್ದರು.

ಶಿರ್ವ ವಲಯದ ಪ್ರಧಾನ ಧರ್ಮಗುರು ವಂ|ಡೆನಿಸ್ ಡೆಸಾ, ಸ್ವಾಗತಿಸಿ, ಆಯೋಗದ ಕಾರ್ಯದರ್ಶಿ ಗ್ರೆಟ್ಟಾ ಮಿನೇಜಸ್ ವಂದಿಸಿದರು.


Spread the love