ಶಿವಮೊಗ್ಗ ಯುವನಿಧಿ ಯೋಜನೆ ಚಾಲನೆ ಕಾರ್ಯಕ್ರಮಕ್ಕೆ ಜಿಲ್ಲೆಯ ವಿದ್ಯಾರ್ಥಿಗಳ ದುರ್ಬಳಕೆ : ಯಶ್ಪಾಲ್ ಸುವರ್ಣ ಆಕ್ರೋಶ
ಉಡುಪಿ: ರಾಜ್ಯ ಸರ್ಕಾರದ ಯುವನಿಧಿ ಯೋಜನೆಯ ಚಾಲನೆಗೆ ಶಿವಮೊಗ್ಗದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಶಾಲೆ ಆಡಳಿತ ಮಂಡಳಿಗೆ ಒತ್ತಡ ಹೇರುತ್ತಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣೆಯಲ್ಲಿ ಘೋಷಿಸಿರುವ ಯುವನಿಧಿ ಕಾರ್ಯಕ್ರಮವನ್ನು ಅಧಿಕಾರಕ್ಕೆ ಬಂದು ಸುಮಾರು 7 ತಿಂಗಳು ಕಳೆದರೂ ಅನುಷ್ಠಾನ ಮಾಡದ ರಾಜ್ಯ ಸರ್ಕಾರ ಇದೀಗ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಹಲವು ಕಠಿಣ ಷರತ್ತುಗಳನ್ನು ಹಾಕಿ ಯೋಜನೆಗೆ ಚಾಲನೆ ನೀಡಿ ಲಾಭ ಪಡೆಯುವ ಹುನ್ನಾರ ನಡೆಸುತ್ತಿದ್ದು, ರಾಜಕೀಯ ಪ್ರೇರಿತವಾಗಿರುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿರುವುದು ಖಂಡನೀಯ.
ಯೋಜನೆಯ ಚಾಲನೆಯ ನೆಪದಲ್ಲಿ ಶಿವಮೊಗ್ಗ ಮಾತ್ರವಲ್ಲದೇ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳನ್ನು ಕರೆತರಲು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡುವ ಮೂಲಕ ಪರೀಕ್ಷೆಗಳು ಆರಂಭಗೊಳ್ಳುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆ ನೀಡುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಕೆಲವು ಕಾಂಗ್ರೆಸ್ ಮುಖಂಡರು ಹಲವು ಕಾಲೇಜುಗಳಲ್ಲಿ ಅನಧಿಕೃತವಾಗಿ ಸಭೆ ನಡೆಸಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಮಾಡುತ್ತಿರುವ ಬಗ್ಗೆಯೂ ಮಾಹಿತಿ ಇದ್ದು ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ಹತಾಶ ಧೋರಣೆಗೆ ಸಾಕ್ಷಿ ಯಾಗಿದೆ.
ರಾಜ್ಯ ಸರ್ಕಾರ ಕೂಡಲೇ ರಾಜಕೀಯ ಪ್ರೇರಿತ ಸರ್ಕಾರಿ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಬಲಸಿಕೊಳ್ಳುವ ನಿರ್ಧಾರ ತಕ್ಷಣ ಕೈಬಿಡಬೇಕು. ತಪ್ಪಿದಲ್ಲಿ ವಿದ್ಯಾರ್ಥಿ ಸಂಘಟನೆಗಳ ಮೂಲಕ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.