ಶ್ರೀ ರಾಮ ಮಂದಿರ ನಿರ್ಮಾಣ ಶಿಲಾನ್ಯಾಸ : ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ
ಕುಂದಾಪುರ: ಅಯೋದ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯದ ಶಿಲಾನ್ಯಾಸ ಆ.5ರಂದು ನಡೆಯಲಿದ್ದು, ಅಂದು ಯಾವುದೇ ವಿಶೇಷ ಸಂಭ್ರಮಾಚರಣೆಗೆ ಅವಕಾಶ ಇಲ್ಲ. ದೇವಸ್ಥಾನ, ಮಂದಿರಗಳಲ್ಲಿ ಜನರು ಸೇರಿಕೊಂಡು ಯಾವುದೇ ರೀತಿಯ ವಿಶೇಷ ರೀತಿಯ ಆಚರಣೆ ಮಾಡಬಾರದು. ಸಾರ್ವಜನಿಕ ಸ್ಥಳಗಳಲ್ಲಿ, ಬೀದಿಗಳಲ್ಲಿ ಯಾವುದೇ ಪರ ವಿರೋಧ ಕಾರ್ಯಕ್ರಮಗಳನ್ನು ನಡೆಸಬಾರದು. ಕಾನೂನು ಉಲ್ಲಂಘಿಸಿ ಯಾವುದೇ ಕಾರ್ಯಕ್ರಮ, ಆಚರಣೆ ನಡೆಸಿದರೆ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಭೀಮಾಶಂಕರ ಎಸ್. ಹೇಳಿದರು.
ಶ್ರೀ ರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮದ ಪ್ರಯುಕ್ತ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾಗಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ಮತ, ಸಮಾಜಬಾಂಧವರು ಸಹಕಾರ ನೀಡಬೇಕು. ನೈತಿಕ ಪೊಲೀಸ್ ಗಿರಿ ನಡೆಸಲು ಅವಕಾಶ ಇಲ್ಲ. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಅಕ್ರಮ ಗೋಸಾಗಾಟ, ಗೋಸಾಗಾಟಕ್ಕೆ ಸಹಕಾರ ನೀಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಕೋಮು ಪ್ರಚೋದಿಸಿ ಸಮಾಜದ ಶಾಂತಿ ಕೆಡಿಸುವ ಕಿಡಿಗೇಡಿಗಳ ಬಗ್ಗೆ ಇಲಾಖೆ ಕ್ರಮ ಜರುಗಿಸಲಿದೆ. ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾರ್ವಜನಿಕರು ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಪ್ರೊಬೆಷನರಿ ಪಿಎಸ್ಐ ದೇವರಾಜ್, ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ವಾಸುದೇವ ದೇವಾಡಿಗ, ರತ್ನಾಕರ ಗಾಣಿಗ, ಯಶವಂಶ ಖಾರ್ವಿ, ನವೀನ್ ದೊಡ್ಡಹಿತ್ಲು, ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ತಬ್ರೇಜ್, ಜಾಫರ್, ಖಲೀಲ್, ಹನೀಫ್ ಮತ್ತಿತರರು ಉಪಸ್ಥಿತರಿದ್ದರು.