ಸಂಜೀವಿನಿ ಮಾಸಿಕ ಸಂತೆ : ಖಾಯಂ ಆಗಿಸಲು ಕ್ರಮ – ಜಿಲ್ಲಾ ಪಂಚಾಯತ್ ಸಿಇಓ ಡಾ. ಆನಂದ್ ಕೆ.
ಮಂಗಳೂರು: ಸಂಜೀವಿನಿ ಮಾಸಿಕ ಸಂತೆಯು ಜನಸಾಮಾನ್ಯರನ್ನು ತಲುಪಲು ತಾಲೂಕುಗಳಲ್ಲಿ ಮುಂದಿನ ದಿನಗಳಲ್ಲಿ ಸೂಪರ್ ಮಾರ್ಕೆಟ್ನ ಪರಿಕಲ್ಪನೆಯತೆ ಅಂಗಡಿಗಳನ್ನು ನಿರ್ಮಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ. ಹೇಳಿದರು.
ಅವರು ಗುರುವಾರ ಜಿಲ್ಲಾ ಪಂಚಾಯತ್, ಮಂಗಳೂರು ತಾಲೂಕು ಪಂಚಾಯತ್, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಇದರ ಸಹಯೋಗದೊಂದಿಗೆ ಮಂಗಳೂರು ತಾಲೂಕು ಪಂಚಾಯತ್ ಆವರಣದಲ್ಲಿ ನಡೆದ ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಜೀವಿನಿ ಒಕ್ಕೂಟದಿಂದ ಪ್ರತಿ ತಿಂಗಳು ನಡೆಯುವ ಮಾಸಿಕ ಸಂತೆಯು ತಾತ್ಕಾಲಿಕವಾಗಿರದೆ ಖಾಯಂ ಆಗಿ ನಡೆಯಲು ಅಂಗಡಿಗಳನ್ನು ನಿರ್ಮಿಸಲು ಮುಂದಿನ 2 ತಿಂಗಳೊಳಗೆ ಜನಸಂದಣಿ ಇರುವಂತಹ ಸೂಕ್ತ ಜಾಗಗಳನ್ನು ಗುರುತಿಸಲಾಗುವುದು. ಜಿಲ್ಲೆಯಲ್ಲಿರುವ ಸಂಜೀವಿನಿ ಒಕ್ಕೂಟದ ಎಲ್ಲಾ ಉತ್ಪನ್ನಗಳನ್ನು ಒಂದೇ ಕಡೆ ಮಾರಾಟಕ್ಕೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಸುಮಾರು 200 ಕ್ಕಿಂತಲೂ ಅಧಿಕ ಉತ್ಪನ್ನಗಳನ್ನು ಸಂಜೀವಿನಿ ಒಕ್ಕೂಟದವರು ಉತ್ಪಾದಿಸುತ್ತಿದ್ದಾರೆ, ಅವುಗಳಿಗೆ ಮಾರುಕಟ್ಟೆಯ ಅಭಾವ ಕಾಡುತಿದ್ದು ಇತ್ತೀಚಿಗೆ ಮೀಶೋ ಆನ್ಲೈನ್ ಆ್ಯಪ್ ಮೂಲಕವೂ ಸಂಜೀವಿನಿ ಉತ್ಪನ್ನಗಳು ಮಾರಾಟವಾಗುತ್ತಿದ್ದು ಇನ್ನಷ್ಟು ಮಾರುಕಟ್ಟೆಗಳು ಇಂತಹ ಉತ್ಪನ್ನಗಳಿಗೆ ಸಿಗಬೇಕು ಎಂದರು.
ಉತ್ಪನ್ನವು ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಲು ಅದರಲ್ಲಿ ವಿಭಿನ್ನತೆಯಿರಬೇಕು, ಉತ್ಪನ್ನದ ಗುಣಮಟ್ಟ ಮತ್ತು ಅದನ್ನು ಗ್ರಾಹಕರಿಗೆ ನೀಡುವಾಗ ಉತ್ತಮ ಪ್ಯಾಕೆಜಿಂಗ್ ಹೊಂದಿರಬೇಕು. ಆಗ ಮಾತ್ರ ಉತ್ಪನ್ನಗಳು ಬೇಗ ಜನರನ್ನು ತಲುಪುತ್ತವೆ ಎಂದರು. ಇದಕ್ಕಾಗಿ ಸರಕಾರದಿಂದ ತರಬೇತಿಯನ್ನು ನೀಡಲಾಗುತ್ತಿದೆ.
ಈ ಸಂದರ್ಭದಲ್ಲಿ ಸಂಜೀವಿನಿ ಒಕ್ಕೂಟದ ಸದಸ್ಯರಿಂದ ಅನೇಕ ಉತ್ಪನ್ನಗಳನ್ನು ಸ್ಥಳದಲ್ಲಿಯೇ ಮಾರಾಟ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಮಹೇಶ್ ಹೊಳ್ಳ, ಮಹೇಶ್ , ಸಂಜೀವಿನಿ ತಾಲೂಕು ಪಂಚಾಯತ್ ಮುಲ್ಕಿ ಒಕ್ಕೂಟದ ಅಧ್ಯಕ್ಷೆ ಭಾನುಮತಿ ಶೆಟ್ಟಿ. ಮಂಗಳೂರು ತಾಲೂಕು ಪಂಚಾಯತ್ ಸಹಾಯಕ ನಿರ್ಧೇಶಕರು ಮಹೇಶ್ ಮತ್ತಿರರು ಉಪಸ್ಥಿತರಿದ್ದರು.