ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆ

Spread the love

ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆ

ಮಂಗಳೂರು: ಸಂತ ಅಲೋಶಿಯಸ್ ಕಾಲೇಜು ಅಂತರ್ ಧರ್ಮೀಯ ಕ್ರಿಸ್ಮಸ್ ಸಂಭ್ರಮಾಚರಣೆಯನ್ನು ದಿನಾಂಕ 17ನೇ ಡಿಸೆಂಬರ್ 2018ರಂದು ಕಾಲೇಜಿನ ಎಲ್.ಎಫ್. ರಸ್ಕೀನ್ಹಾ ಸಭಾಂಗಣದಲ್ಲಿ ಹಮ್ಮಿಕೊಂಡಿತ್ತು. ಡಿವೈನ್ ಮರ್ಸಿ ರಿಟ್ರೀಟ್ ಸೆಂಟರಿನ ನಿರ್ದೇಶಕರಾದ ವಂ. ಫಾ. ಡೆರಿಕ್ ಡಿಸೋಜಾ, ಕೆ.ಎಂ.ಸಿ.ಯ ನರತಜ್ಞರಾದ ಡಾ. ಜಿ.ಜಿ. ಲಕ್ಷ್ಮಣ್ ಪ್ರಭು ಹಾಗೂ ಬಂಟ್ವಾಳದ ಸರಕಾರಿ ಕಾಲೇಜಿನ ಪ್ರೊ. ಹೈದರಾಲಿಯವರು ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದರು.

ಈ ಸಂಭ್ರಮಾಚರಣೆಯ ಉದ್ಘಾಟನೆಯನ್ನು ಕ್ರಿಸ್ಮಸ್ ಕ್ರಿಬ್ನಲ್ಲಿ ಮೂರ್ತಿಗಳನ್ನು ಇಡುವ ಮೂಲಕ ವಿಶೇಷವಾದ ರೀತಿಯಲ್ಲಿ ಉದ್ಘಾಟಿಸಿದರು. ವಿದ್ಯಾರ್ಥಿಗಳು ಕ್ರಿಸ್ಮಸ್ ಹಬ್ಬದ ಸಂಕೇತವನ್ನು ಸಾರುವ ಕಿರುನಾಟಕವನ್ನು ಪ್ರದರ್ಶಿಸಿದರು ಜೊತೆಗೆ ಕ್ರಿಸ್ಮಸ್ ಗೀತೆಗಳನ್ನು ಹಾಡಿ, ನೃತ್ಯದ ಮೂಲಕ ನೆರೆದವರ ಮನರಂಜಿಸಿದರು.

ಫಾ. ಡೆರಿಕ್ ಡಿಸೋಜಾರವರು ತಮ್ಮ ಭಾಷಣದಲ್ಲಿ “ನಾವು ಧರ್ಮವನ್ನು ಎಂದರೆ ಒಂದು ಜಾತೀಯ ನೆಲೆಯಲ್ಲಿ ಕಾಣುತ್ತೇವೆ ಆದರೆ ಧರ್ಮದ ನಿಜವಾದ ಅರ್ಥ ಜಾತಿಗೆ ಸಂಬಂಧಿಸಿದುದಲ್ಲ. ಬದಲಾಗಿ ವೇದ ಅಥವಾ ಉಪನಿಶತ್ತಿನ ಪ್ರಕಾರ ಧರ್ಮ ಎಂದರೆ ಒಳ್ಳೆಯದನ್ನು, ನೈತಿಕತೆಯನ್ನು ಮತ್ತು ಅದ್ಭುತವಾದುದನ್ನು ಸ್ವೀಕರಿಸುವುದು ಎಂಬುದಾಗಿದೆ. ಸಂಸ್ಕೃತ ಭಾಷೆಯ ಹೊರತಾಗಿ ಧರ್ಮಕ್ಕೆ ಬೇರೆ ಯಾವುದೇ ಭಾಷೆಯಲ್ಲಿ ಅರ್ಥವಿರುವುದಿಲ್ಲ. ನಮ್ಮೊಳಗೆ ದೇವರನ್ನು ಕಂಡುಕೊಂಡು, ಇತರರಲ್ಲಿಯೂ ದೇವರನ್ನು ಕಾಣಬೇಕು. ಪ್ರತಿಯೊಂದು ಜಾತೀಯ ಧರ್ಮವೂ ದೇವರ ಪ್ರತಿಬಿಂಬವನ್ನು ತೋರಿಸುತ್ತದೆ. ದೇವರು ಮನುಷ್ಯರನ್ನು ಬೇರೆಬೇರೆಯಾಗಿಸಿಲ್ಲ, ಬದಲಾಗಿ ಜೊತೆಗೂಡಿಸಿದ್ದಾರೆ ಆದರೆ ಮಾನವರು ದೇವರನ್ನು ಬೇರೆ ಬೇರೆಯಾಗಿಸಿದರು ಎಂದು ಹೇಳಿದರು. ಈ ಕ್ರಿಸ್ಮಸ್ ಸಂಭ್ರಮಾಚರಣೆಯಲ್ಲಿ ನಾವು ನಿಜವಾಗಿಯೂ ಅಗತ್ಯವಿರುವವರಿಗೆ ಸಂತೋಷವನ್ನು ಹಂಚಬೇಕಾಗಿದೆ ಎಂದು ಹೇಳಿದರು.

ಪ್ರೊ. ಹೈದರಾಲಿಯವರು ಮಾತನಾಡಿ, “ಕ್ರೈಸ್ತ ಸಮುದಾಯವು ಜನಸಾಮಾನ್ಯರಿಗೆ ಶಿಕ್ಷಣವನ್ನು ನೀಡುವಲ್ಲಿ ಮಂಚೂಣಿಯಲ್ಲಿದೆ. ಅವರು ಸ್ಪರ್ಧಾತ್ಮಕ ಉಪಯೋಗಕ್ಕಾಗಿ ನಮಗೆ ಆಂಗ್ಲಭಾಷೆಯನ್ನು ಕಲಿಸಿದರು. ಕ್ರಿಶ್ಚಿಯನ್ ಸಂಸ್ಥೆಗಳಲ್ಲಿ ನೀಡುವಂತಹ ಕೌಶಲ್ಯ, ಜ್ಞಾನ, ಆರೋಗ್ಯ ಮತ್ತು ಮೌಲ್ಯಗಳಂತಹ ನಾಲ್ಕು ಪ್ರಮುಖ ಅಂಶಗಳು ಒಬ್ಬ ವ್ಯಕ್ತಿಯ ಸಂಫೂರ್ಣ ವ್ಯಕ್ತಿತ್ವವನ್ನು ವಿಕಸನಗೊಳಿಸುತ್ತವೆ. ಭಾರತವು ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ. ಯೋಸುಕ್ರಿಸ್ತರು ಒಬ್ಬ ದೇವದೂತರು. ಕುರಾನ್ ಗ್ರಂಥದಲ್ಲಿ 25 ಬಾರಿ ಯೇಸುವಿನ ನಾಮವನ್ನು ಪ್ರಸ್ತಾಪಿಸಲಾಗಿದೆ. ಮಾತೆ ಮರಿಯಮ್ಮನನ್ನು ವಿಶ್ವದ ವಿಶೇಷ ಗೌರವದ ಮಹಿಳೆಯೆಂದು ಕುರಾನ್ ಗೌರವಿಸುತ್ತದೆ ಎಂದು ಹೇಳಿದರು. ’ಒಬ್ಬರನ್ನೊಬ್ಬರು ಪ್ರೀತಿಸ” ಎಂಬ ಸಾಮಾನ್ಯ ಸಂದೇಶವನ್ನು ಕುರಾನ್, ಬೈಬಲ್ ಹಾಗೂ ಭಗವದ್ಗೀತೆಯು ನೀಡುತ್ತದೆ ಎಂದರು. ಕ್ರೈಸ್ತ ಮಹಿಳೆಯರು ಮಲ್ಲಿಗೆ ಹೂವನ್ನು ಬೆಳೆಸುತ್ತಾರೆ, ಅದನ್ನು ಮುಸ್ಲಿಮ್ ಜನರು ಮಾರುತ್ತಾರೆ ಮತ್ತು ಹಿಂದೂ ಧರ್ಮೀಯರು ಅದನ್ನು ಕೊಂಡುಕೊಂಡು ದೇವರಿಗೆ ಅರ್ಪಿಸುತ್ತಾರೆ. ಹೀಗಿರುವಾಗ ನಾವು ಎಲ್ಲ ಧರ್ಮಗಳನ್ನು ಪ್ರೀತಿಸಿ ಶಾಂತಿ ಸೌಹಾರ್ದತೆಯಿಂದ ಬಾಳಲು ಪ್ರಯತ್ನಿಸಬೇಕು” ಎಂದು ಹೇಳಿದರು.

ಡಾ. ಲಕ್ಷ್ಮಣ್ ಪ್ರಭು ಮಾತನಾಡಿ, “ಈ ಕ್ರಿಸ್ಮಸ್ ಸಂಭ್ರಮಾಚರಣೆಯಲ್ಲಿ ಭಾಗಿಯಾವುದೇ ಒಂದು ಸೌಭಾಗ್ಯ. ಬಾಲ್ಯದಲ್ಲಿ ಕ್ರಿಸ್ಮಸ್ ಬಂತೆಂದರೆ ಎಲ್ಲಿಲ್ಲದ ಸಂಭ್ರಮ ಏಕೆಂದರೆ ಕ್ರಿಸ್ಮಸ್ ಹಬ್ಬದಲ್ಲಿ ಕೇಕ್ ತಿನ್ನುವುದು ಹಾಗೂ ದೀಪಾವಳಿ ಸಮಯದಲ್ಲಿ ಸಿಹಿ ಹಂಚುವುದು. ಈ ಎರಡೂ ವಿಶೇಷ ಹಬ್ಬಗಳು ನಮ್ಮ ಸಂಸ್ಕೃತಿಯ ವಿಶೇಷತೆ” ಎಂದು ಹೇಳಿದರು. ಶಾಂತಿ ಮತ್ತು ಪ್ರೀತಿಯ ಸಂದೇಶವನ್ನು ಸಾರುವ ಈ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮಿಸಲು ಆಯೋಜಿಸಿದ ಈ ಕಾರ್ಯಕ್ರಮದ ಸಂಯೋಜಕರನ್ನು ಅಬಿನಂದಿಸಿದರು. ವಿದ್ಯಾರ್ಥಿಗಳು ಧರ್ಮವನ್ನು ಅರ್ಥಮಾಡಿಕೊಂಡು ಅದನ್ನು ಅನುಭವಿಸಿಕೊಂಡು ಬಾಳಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಂಶುಪಾಲರಾದ ರೆ. ಡಾ. ಪ್ರವೀಣ್ ಮಾರ್ಟಿಸ್ರವರು ಕ್ರಿಸ್ಮಸ್ ಹಬ್ಬದ ಸಂದೇಶ ಸಾರುವ ನಾಟಕ ಪ್ರಸ್ತುತ ಪಡಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೇವರು ಭೂಮಿಗಿಳಿದು ಬಂದು ನಮ್ಮಲ್ಲೊಬ್ಬರಾಗಿ ಬದುಕಿದರು ಮತ್ತು ಮನುಜ ಕುಲಕ್ಕೆ ಪ್ರೀತಿ, ಶಾಂತಿಯ ಸಂದೇಶವನ್ನು ಸಾರಿದರು ಎಂದು ಹೇಳಿದರು. ಕ್ರಿಸ್ಮಸ್ ಹಬ್ಬದ ನಿಜವಾದ ಅರ್ಥವೆಂದರೆ ಒಬ್ಬರನ್ನೊಬ್ಬರು ಪ್ರೀತಿಯನ್ಬ್ನು ಹಂಚುಕೊಳ್ಳುವುದು ಮತ್ತು ಆರೈಕೆ ಮಾಡುವುದು ಎಂಬುದಾಗಿದೆ ಎಂದರು.

ಕಾರ್ಯಕ್ರಮ ಸಂಯೋಜರಾದ ಅನೂಪ್ ಡೆಂಜಿಲ್ ವೇಗಸ್ ಸ್ವಾಗತಿಸಿದರು. ಸೋನಲ್ ಲೋಬೊ ಅತಿಥಿಗಳನ್ನು ಪರಿಚಯಿಸಿದರು. ಜೋಯ್ಸ್ಟನ್ ಮತ್ತು ಸ್ಮಿತಾ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ನಾಯಕ ರೆಲ್ಸ್ಟನ್ ವಂದಿಸಿದರು.


Spread the love