ಸಂಪೂರ್ಣ ಲಾಕ್ ಡೌನ್ ಬಗ್ಗೆ ಸಂಜೆ ನಿರ್ಧಾರ: ಬಡವರಿಗೆ ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತ ಊಟ; ಯಡಿಯೂರಪ್ಪ
ಬೆಂಗಳೂರು: ಕೋವಿಡ್-19 ಸೋಂಕು ತಡೆಗಟ್ಟಲು ಸಂಪೂರ್ಣ ರಾಜ್ಯ ಲಾಕ್ ಡೌನ್ ಮಾಡುವ ಬಗ್ಗೆ ಇಂದು ಸಂಜೆ ತೀರ್ಮಾನಿಸಲಾಗುವುದು ಎಂದುಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಜ್ಷ ವೈದ್ಯರೊಂದಿಗೆ ಚರ್ಚಿಸಿ ಕೆಲವು ನಿರ್ಧಾರಗಳನ್ನು ಕೈಗೊಂಡಿದ್ದೇವೆ ಎಂದರು.
ಕೋವಿಡ್-19 ಸೋಂಕು ಕಾರಣದಿಂದ ಪರದಾಡುತ್ತಿರುವ ಬಡ ಜನರಿಗೆ ಸಹಾಯವಾಗುವ ಕಾರಣದಿಂದ ಬೆಂಗಳೂರಿನ ಬಡ ಜನರಿಗೆ ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತ ಊಟ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ಇನ್ನು ಕೋವಿದ್19 ಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವ ಸಂಬಂಧ 30 ಫೀವರ್ ಕ್ಲಿನಿಕ್ ಸ್ಥಾಪಿಸಲಾಗಿದೆ, ಖಾಸಗಿ ಆಸ್ಪತ್ರೆಯ ಅರ್ಧದಷ್ಟು ವೈದ್ಯರು ಮತ್ತು ಅರೆಕಾಲಿಕ ಸಿಬ್ಬಂದಿ ಸಹಾಯ ಡಲು ಮುಂದೆ ಬಂದಿದ್ದಾರೆ. 1 ಸಾವಿರ ವೆಂಟಿಲೇಟರ್ ಖರೀದಿಸಲು ನಿರ್ಧರಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನೂ ನಗರ ಪ್ರದೇಶಗಳಲ್ಲಿರುವ ಜನರು ಹಳ್ಳಿಗಳಿಗೆ ಹೋಗಬಾರದೆಂದು ಮನವಿ ಮಾಡಿರುವ ಸಿಎಂ, ಕೊರೊನಾ ಸೋಂಕನ್ನು ಗಂಭೀರವಾಗಿ ಪರಿಗಣಿಸಿ ಜನತೆ ಮನೆಯಿಂದ ಹೊರಗಡೆ ಬರಬಾರದು ಎಂದು ಮನವಿ ಮಾಡಿದ್ದಾರೆ. ಮಾರ್ಚ್ 27 ರವರೆಗೂ ವಿಧಾನಸಭೆ ಅಧಿವೇಶನ ನಡೆಯಸಲಿದೆ ಎಂದು ಹೇಳಿದ್ದಾರೆ.