ಸಂಸದೆ ಶೋಭಾ ಕರಂದ್ಲಾಜೆಯರನ್ನು ಹುಡುಕಿ ಕೊಡಿ: ಕೊಪ್ಪ ಠಾಣೆಗೆ ಕಾಂಗ್ರೆಸಿಗರ ದೂರು
ಚಿಕ್ಕಮಗಳೂರು: ಉಡುಪಿ -ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯನ್ನು ಕಾಣದೆ ಹಲವು ತಿಂಗಳುಗಳು ಕಳೆದಿದ್ದು ಅವರು ನಾಪತ್ತೆಯಾಗಿದ್ದು ಕೂಡಲೇ ಅವರನ್ನು ಹುಡುಕಿ ಕೊಡುವಂತೆ ಒತ್ತಾಯಿಸಿ ಕೊಪ್ಪ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಲು ಸೀಮಿತವಾಗಿದದು, ಜನರ ಸಮಸ್ಯೆಗಳತ್ತ ಗಮನ ಹರಿಸುವುದನ್ನು ಅವರು ಮರೆತು ಬಿಟ್ಟಿದ್ದಾರೆ. ಮಲೆನಾಡಿಗೆ ಮರಣ ಶಾಸನವಾಗಿರುವ ಕಸ್ತೂರಿರಂಗನ್ ವರದಿಯ ಬಗ್ಗೆ ಸಂಸದರು ಮೌನವಾಗಿದ್ದು, ಕಸ್ತೂರಿ ರಂಗನ್ ವರದಿ ಕುರಿತಂತೆ ಸಂಸದರ ಸಭೆಗೆ ಶೋಭಾ ಪಾಲ್ಗೊಂಡಿಲ್ಲ. ನಿಜವಾಗಿ ಅವರಿಗೆ ಕ್ಷೇತ್ರದ ಜನರ ಬಗ್ಗೆ ಕಾಳಜಿ ಹೊಂದಿದವರಾಗಿದ್ದರೆ ಅವರು ಆ ಸಭೆಯಲ್ಲಿ ಭಾಗವಹಿಸಿ ಕ್ಷೇತ್ರದ ಜನರ ಸಮಸ್ಯೆ ಬಗ್ಗೆ ಸಭೆಯಲ್ಲಿ ಧ್ವನಿ ಎತ್ತಬೇಕಿತ್ತು. ಅದನ್ನು ಬಿಟ್ಟು ಬೇರೆಯವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುವುದು ಮಾತ್ರವಲ್ಲದೆ ಜನರ ಕೈಗೂ ಸಿಗುತ್ತಿಲ್ಲ ಎಂದು ಕಾರ್ಯಕರ್ತರು ದೂರಿನಲ್ಲಿ ತಿಳಿಸದ್ದಾರೆ. ಸಂಸದರ ಇಂತಹ ನಡೆ ಸಂಶಯ ಮೂಡುವಂತಾಗಿದೆ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮರೋಳಿ, ಪ್ರಧಾನ ಕಾರ್ಯದರ್ಶಿ ಎಚ್ ಎನ್ ಇನೇಶ್, ಎಸ್ ಸುಬ್ರಹ್ಮಣ್ಯ ಶೆಟ್ಟಿ, ಸಿಕೆ ಮಾಲತಿ, ನವೀನ್ ಮಾವಿನಕಟ್ಟೆ ಹರೀಶ್ ಭಂಡಾರಿ ಹಾಗು ಇತರರು ಉಪಸ್ಥಿತರಿದ್ದರು.