ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿದ ವಂ|ಮಹೇಶ್ ಡಿಸೋಜಾ ಅಂತ್ಯ ಸಂಸ್ಕಾರ
ಉಡುಪಿ: ಅಕಾಲಿಕವಾಗಿ ಸಾವನಪ್ಪಿದ ಶಿರ್ವ ಡಾನ್ ಬಾಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಹಾಗೂ ಚರ್ಚಿನ ಸಹಾಯಕ ಧರ್ಮಗುರು ವಂ|ಮಹೇಶ್ ಡಿಸೋಜಾ ಅವರ ಅಂತ್ಯ ಸಂಸ್ಕಾರ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶಿರ್ವ ಆರೋಗ್ಯ ಮಾತಾ ಚರ್ಚಿನಲ್ಲಿ ಮಂಗಳವಾರ ಜರುಗಿತು.
ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಹಾಗೂ ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷರಾದ ಅತಿ ವಂ|ಡಾ| ಅಲೋಶಿಯಸ್ ಪಾವ್ಲ್ ಡಿಸೋಜಾ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗಿದವು.
ಧರ್ಮಪ್ರಾಂತ್ಯದ ಪರವಾಗಿ ಕುಂದಾಪುರ ವಲಯ ಪ್ರಧಾನ ಧರ್ಮಗುರು ಹಾಗೂ ಶಿರ್ವ ಚರ್ಚಿನಲ್ಲಿ ಹಿಂದೆ ಪ್ರಧಾನ ಧರ್ಮಗುರುವಾಗಿ ಸೇವೆ ಸಲ್ಲಿಸಿದ್ದ ವಂ|ಸ್ಟ್ಯಾನಿ ತಾವ್ರೊ ಅವರು ಶೃದ್ಧಾಂಜಲಿ ಅರ್ಪಿಸಿ ವಂ|ಮಹೇಶ್ ಅವರ ಮಾನವೀಯ ಗುಣ, ಆಡಳಿತದಲ್ಲಿ ತೋರಿಸುತ್ತಿದ್ದ ನಾಯಕತ್ವ, ಮಕ್ಕಳೊಂದಿಗೆ ಅವರು ತೋರಿಸುತ್ತಿದ್ದ ಪ್ರೀತಿ ಹಾಗೂ ಶಿಕ್ಷಣ ಸಂಸ್ಥೆಯನ್ನು ಬೆಳೆಸುವಲ್ಲಿ ಅವರಿಗಿದ್ದ ಆಸಕ್ತಿಯ ಬಗ್ಗೆ ಗಮನ ಸೆಳೆದರು.
ಶಿರ್ವ ಧರ್ಮಕೇಂದ್ರದ ಪರವಾಗಿ ಪಾಲನ ಮಂಡಳಿಯ ಸದಸ್ಯ ಜಿಪಂ ಸದಸ್ಯರಾದ ವಿಲ್ಸನ್ ರೊಡ್ರಿಗಸ್, ಡೋನ್ ಬೊಸ್ಕೊ ಶಾಲೆಯ ಪರವಾಗಿ ಉಪ ಪ್ರಾಂಶುಪಾಲೆ ಐರಿನ್ ಕಾರ್ಡೋಜಾ, ವಂ|ಮಹೇಶ್ ಅವರ ಕುಟುಂಬದ ಪರವಾಗಿ ಆಸ್ಟಿನ್ ಬಾರ್ಬೋಜಾ ಅವರು ಶೃದ್ಧಾಂಜಲಿಯನ್ನು ಸಮರ್ಪಿಸಿದರು.
ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕರಾದ ಜೆ ಆರ್ ಲೋಬೊ, ಯು ಆರ್ ಸಭಾಪತಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ|ಮೋಹನ್ ಆಳ್ವಾ, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆ, ಕಾಪು ತಹಶೀಲ್ದಾರ್ ಮಹಮ್ಮದ್ ಐಸಾಕ್, ಶಿರ್ವಾ ಠಾಣಾಧಿಕಾರಿ ಅಬ್ದುಲ್ ಖಾದರ್ ಮೃತರಿಗೆ ಗೌರವ ಸೂಚಿಸಿದರು.
ಮಂಗಳವಾರ ಬೆಳಿಗ್ಗೆ ಮೃತ ವಂ|ಮಹೇಶ್ ಅವರ ಪಾರ್ಥಿವ ಶರೀರವನ್ನು ಶವಾಗಾರದಿಂದ ಅವರ ಮನೆಗೆ ಕೊಂಡೊಯ್ದು ಬಳಿಕ ಶಿರ್ವ ಶೋಕ ಮಾತಾ ಚರ್ಚಿಗೆ ತಂದು ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಬೆಳಿಗ್ಗಿನಿಂದ ಸಂಜೆ ತನಕ ಸುಮಾರು 6000ಕ್ಕೂ ಮಿಕ್ಕಿ ಜನರು, ವಿದ್ಯಾರ್ಥಿಗಳು, 150ಕ್ಕೂ ಮಿಕ್ಕಿ ವಿವಿಧ ಧರ್ಮಪ್ರಾಂತ್ಯಗಳಿಂದ ಆಗಮಿಸಿದ ಧರ್ಮಗುರುಗಳು 300ಕ್ಕೂ ಮಿಕ್ಕಿ ಧರ್ಮಭಗಿನಿಯರು ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂ|ಮೊನ್ಸಿಂಜ್ಞೋರ್ ಬ್ಯಾಪ್ಟಿಸ್ಟ್ ಮಿನೇಜಸ್, ಮಂಗಳೂರು ಧರ್ಮಪ್ರಾಂತ್ಯದ ಚಾನ್ಸಲರ್ ವಂ|ಹೆನ್ರಿ ಸಿಕ್ವೇರಾ, ಉಡುಪಿ ಧರ್ಮಪ್ರಾಂತ್ಯದ ಚಾನ್ಸಲರ್ ವಂ|ಸ್ಟ್ಯಾನಿ ಬಿ ಲೋಬೊ, ಶಿರ್ವ ಚರ್ಚಿನ ಪ್ರಧಾನ ಧರ್ಮಗುರು ವಂ|ಡೆನಿಸ್ ಡೆಸಾ, ಸಹಾಯಕ ಧರ್ಮಗುರು ವಂ|ಅಶ್ವಿನ್ ಅರಾನ್ಹ, ಕಲ್ಯಾಣಪುರ ವಲಯ ಪ್ರಧಾನ ಧರ್ಮಗುರು ವಂ|ಡಾ|ಲಾರೆನ್ಸ್ ಡಿಸೋಜಾ, ಅತ್ತೂರು ಬೆಸಿಲಿಕಾದ ರೆಕ್ಟರ್ ವಂ|ಜೋರ್ಜ್ ಡಿಸೋಜಾ, ಉಡುಪಿ ವಲಯ ಪ್ರಧಾನ ಧರ್ಮಗುರು ವಂ|ವಲೇರಿಯನ್ ಮೆಂಡೋನ್ಸಾ, ಶಿರ್ವ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ವಿಲ್ಸನ್ ಡಿಸೋಜಾ, ಕಾರ್ಯದರ್ಶಿ ಲೀನಾ ಮಚಾದೊ, ಪದಾಧಿಕಾರಿಗಳಾದ ಮೆಲ್ವಿನ್ ಆರಾನ್ಹಾ, ಮೆಲ್ವಿನ್ ಡಿಸೋಜಾ, ನೊರ್ಬಟ್ ಮಚಾದೊ ವಂ|ಮಹೇಶ್ ಅವರ ತಂದೆ, ತಾಯಿ, ಸಹೋದರರು ಹಾಗೂ ಬಂಧುಮಿತ್ರರು ಹಾಗೂ ಇತರರು ಉಪಸ್ಥಿತರಿದ್ದರು.