ಸಚಿವ ಆಂಜನೇಯ ಗ್ರಾಮ ವಾಸ್ತವ್ಯ- ಜಿಲ್ಲಾ ಉಸ್ತುವಾರಿ ಸಚಿವರಿಂದ ಪೂರ್ವಭಾವಿ ಸಭೆ
ಉಡುಪಿ: ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್.ಆಂಜನೇಯ ಅವರು ಗ್ರಾಮ ವಾಸ್ತವ್ಯಕ್ಕಾಗಿ ಉಡುಪಿ ಜಿಲ್ಲೆಗೆ ಭೇಟಿ ನೀಡುವ ಹಿನ್ನಲೆಯಲ್ಲಿ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಇಂದು ಅಧಿಕಾರಿಗಳ ಹಾಗೂ ಕೊರಗ ಸಮುದಾಯದ ಮುಖಂಡರ ಸಭೆ ನಡೆಸಿದರು.
ಇಂದು ಜಿಲ್ಲಾ ಪಂಚಾಯಿತಿಯ ಡಾ ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಚಿವರ ಭೇಟಿ ವೇಳೆ ಜಿಲ್ಲೆಯ ಅತ್ಯಂತ ಹಿಂದುಳಿದ ಸಮುದಾಯದವರಿಗೆ ವಿಶೇಷ ಕೊಡುಗೆಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ. ಇದನ್ನು ಗಮನದಲ್ಲಿರಿಸಿ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಕೊರಗರ ಪ್ರಮುಖ ಬೇಡಿಕೆಗಳ ಮನವಿಯನ್ನು ಈಗಾಗಲೇ ಪರಿಶೀಲಿಸಲಾಗಿದ್ದು, ಅವರ ಜನಸಂಖ್ಯೆ ಕುಂಠಿತ ಗೊಳ್ಳಲು ಮತ್ತು ಆರೋಗ್ಯ ಸಮಸ್ಯೆಯನ್ನು ಅಧ್ಯಯನ ಮಾಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಜಿಲ್ಲಾ ಸರ್ಜನ್ ಜೊತೆಯಲ್ಲಿ ಮಣಿಪಾಲದ ಸಮುದಾಯ ಆರೋಗ್ಯ ವಿಭಾಗದ ಸಹಕಾರದೊಂದಿಗೆ ಸಮಿತಿಯೊಂದನ್ನು ರಚಿಸಲು ತೀರ್ಮಾನಿಸಲಾಗಿದೆ.
ಇದೇ ಮಾದರಿಯಲ್ಲಿ ಶೈಕ್ಷಣಿಕ ಸಮಿತಿಯೊಂದನ್ನು ಕೊರಗ ಜನಾಂಗದ ಶೈಕ್ಷಣಿಕ ಅಭಿವೃದ್ಧಿಯನ್ನು ಗಮನದಲ್ಲಿರಿಸಿ ರಚಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಅವರು ಹೇಳಿದರು.
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರತಿ ವರ್ಷಾಂತ್ಯವನ್ನು ಬುಡಕಟ್ಟು ಜನರ ಹಾಡಿಯಲ್ಲಿ ಕಳೆಯುತ್ತಿರುವ ಸಚಿವ ಹೆಚ್ ಆಂಜನೇಯ ಅವರು ಡಿಸೆಂಬರ್ 31 2016 ರಂದು ಉಡುಪಿಯಿಂದ 80 ಕಿ,ಮೀ ದೂರವಿರುವ ಮೂರೂರು ಕೊರಗರ ಹಾಡಿಯಲ್ಲಿನ ಶ್ರೀಮತಿ ಮರ್ಲಿ ಕೋಂ ಮರ್ಲ ಕೊರಗ ಎಂಬವರ ಮನೆಯಲ್ಲಿ ವಾಸ್ತವ್ಯ ಮಾಡಲಿರುವರು.
ಈ ಹಿನ್ನಲೆಯಲ್ಲಿ ಕೊರಗರ ಹಾಡಿಯ ಮೂಲಭೂತ ಅಗತ್ಯಗಳನ್ನು ಗುರುತಿಸಿ ಪರಿಹರಿಸಲು ಸಚಿವರೇ ಖುದ್ದು ಆಗಮಿಸುವ ಹಿನ್ನಲೆಯಲ್ಲಿ ಬೇಡಿಕೆಗಳನ್ನು ಸಮಗ್ರವಾಗಿ ಹಾಗೂ ನಿರಂತರ ಪರಿಹಾರ ಗಮನದಲ್ಲಿರಿಸಿ ನೀಡಲು ಮನವಿಯನ್ನು ಕೊರಗ ಸಮುದಾಯದ ಪರವಾಗಿ ಸಲ್ಲಿಸಲು ಜಿಲ್ಲಾ ಉಸ್ತುವಾರಿ ಸಚಿವರು ನಿರ್ಧರಿಸಿದರು.
ಜಿಲ್ಲೆಯಲ್ಲಿ ಎರಡು ಸಾವಿರ ಕುಟುಂಬಗಳ 9000 ಜನರಿದ್ದು ಈಗಾಗಲೇ ಜಿಲ್ಲೆಯಲ್ಲಿ ಇವರ ಆರೋಗ್ಯ ಹಾಗೂ ಉನ್ನತಿಗಾಗಿ ಕ್ರಮಗಳನ್ನು ಐಟಿಡಿಪಿ ಇಲಾಖೆಯ ಮುಖಾಂತರ ಕೈಗೊಳ್ಳಲಾಗಿದೆ. ಕಾರ್ಯಕ್ರಮಗಳು ಇನ್ನಷ್ಟು ವಿಶೇಷವಾಗಿ ಕೊರಗ ಮತ್ತು ಮಲೆಕುಡಿಯ ಸಮುದಾಯಕ್ಕೆ ತಲುಪಿಸುವ ಹೊಣೆಗಾರಿಕೆ ಇದೆ ಸಚಿವರು ಹೇಳಿದರು.
ಕೊರಗ ಸಮುದಾಯದ ಪ್ರತಿನಿಧಿಗಳೇ ವೈದ್ಯಕೀಯ ಸೇವೆಗೆ ಆಸ್ಪತ್ರೆಗಳ ಹೆಸರನ್ನು ನೀಡಲಿ; ಅದೇ ರೀತಿ ಸಮೀಕ್ಷೆ ಸಮಿತಿಯಲ್ಲೂ ಕೊರಗ ಮುಖಂಡರಿರಲಿ ಎಂದು ಸಚಿವರು ಕೊರಗ ಪ್ರತಿನಿಧಿಗಳಿಗೆ ಹೊಣೆಯನು ್ನ ವಹಿಸಿದರು. ಕೌಶಲ್ಯ ತರಬೇತಿ, ಭೂಮಿ, ನಿವೇಶನ ಹಕ್ಕು ಎಲ್ಲ ಅಭಿವೃದ್ಧಿಗೆ ಐಟಿಡಿಪಿ ಇಲಾಖೆ ಸಿಂಗಲ್ ವಿಂಡೋ ಏಜೆನ್ಸಿಯಂತೆ ಕೆಲಸ ಮಾಡಲಿ ಎಂದು ಸಚಿವರು ಈ ಸಂದರ್ಭದಲ್ಲಿ ಸೂಚನೆ ನೀಡಿದರು.
ಸರ್ಕಾರ ನೀಡುವ ಸೌಲಭ್ಯಗಳಿಗಾಗಿ ಕೊರಗರು ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಅಲೆಯುವಂತಿರಬಾರದು; ಅವರಿಗೆ ಕೊಡಮಾಡಿದ ಸೌಲಭ್ಯಗಳು ಅವರಿಗೆ ಸುಲಭವಾಗಿ ಎಟುಕಬೇಕು. ತಾಂತ್ರಿಕ ಕಾರಣಗಳಿಂದ ಉದ್ಭವಿಸಿದ ಎಪಿಎಲ್ ಕಾರ್ಡ್ ಸಮಸ್ಯೆ ಶೀಘ್ರ ಇತ್ಯರ್ಥವಾಗಬೇಕು ಎಂದು ಸಚಿವರು ನುಡಿದರು.
ಬಳಿಕ ಜಿಲ್ಲಾಧಿಕಾರಿ ಟಿ ವೆಂಕಟೇಶ್ ಅಧ್ಯಕ್ಷತೆಯಲ್ಲ್ಲಿ 31ರ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಅಧಿಕಾರಿಗಳ ಸಭೆ ನಡೆಯಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಅಪರ ಜಿಲ್ಲಾಧಿಕಾರಿ ಅನುರಾಧ, ಉಪವಿಭಾಗಾಧಿಕಾರಿ ಶಿಲ್ಪಾ ನಾಗ್, ನೋಡಲ್ ಅಧಿಕಾರಿ ಯೋಗೇಶ್ವರ್ ಎಲ್ಲ ಅಧಿಕಾರಿಗಳು ಪಾಲ್ಗೊಂಡರು.
ಸಮಗ್ರ ಗಿರಿಜನ ಅಭಿವೃದ್ಧಿ ಅಧಿಕಾರಿ ಹರೀಶ್ ಗಾಂವ್ಕರ್, ಸಮಾಜ ಕಲ್ಯಾಣಾಧಿಕಾರಿ ರಮೇಶ್, ಎಲ್ಲ ತಹಸೀಲ್ದಾರ್ ಉಪಸ್ಥಿತರಿದ್ದರು.