ಸದೃಢ ಗೃಹರಕ್ಷಕರು ಸಮಾಜದ ಆಸ್ತಿ- ಡಾ ಪ್ರಶಾಂತ್
ಉಡುಪಿ: ಶಿಸ್ತುಬದ್ಧ ಇಲಾಖೆಯ ಜೊತೆ ಕಾರ್ಯನಿರ್ವಹಿಸುವ ಗೃಹರಕ್ಷಕ ಪಡೆ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸೇವೆ ನೀಡುವ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಉಡುಪಿ ಜಿಲ್ಲಾ ಗೃಹರಕ್ಷಕದಳದ ಜಿಲ್ಲಾ ಕಮಾಂಡೆಂಟ್ ಡಾ.ಕೆ.ಪ್ರಶಾಂತ್ ಶೆಟ್ಟಿ ಹೇಳಿದರು.
ಅವರಿಂದು ಉಡುಪಿ ಜಿಲ್ಲಾ ಗೃಹರಕ್ಷಕದಳದ ಜಿಲ್ಲಾ ಮಟ್ಟದ ವೃತ್ತಿಪರ ಮತ್ತು ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಗೃಹರಕ್ಷಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚಿನ ಒತ್ತು ನೀಡಬೇಕಲ್ಲದೆ, ಕ್ರೀಡೆ, ವ್ಯಾಯಾಮದಿಂದ ಸದೃಢವಾಗಿರಬೇಕು.
ಆರೋಗ್ಯಕರ ಗೃಹರಕ್ಷಕರು ಸಮಾಜದ ಆಸ್ತಿ ಎಂದು ಅವರು ಹೇಳಿದರಲ್ಲದೆ, ಕ್ರೀಡೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕೆಂದರು.
ಮುಖ್ಯ ಅತಿಥಿಯಾಗಿದ್ದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಇದರ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ, ಅವಘಡಗಳು ನಡೆದಾಗ ತುರ್ತು ಸಂದರ್ಭದಲ್ಲಿ ಗೃಹರಕ್ಷಕದಳದವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೇವೆ ಸಲ್ಲಿಸುತ್ತಾರೆ. ರಾಜ್ಯದಲ್ಲಿ ಗೃಹರಕ್ಷಕದಳದವರಿಗೆ ಅತೀ ಕಡಿಮೆ ವೇತನ ಇರುವ ಕಾರಣ ವರ್ಷದಿಂದ ವರ್ಷಕ್ಕೆ ಗೃಹಸಿಬ್ಬಂದಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸರಕಾರವು ಅವರಿಗೆ ಉತ್ತಮ ಸಂಬಳ ನೀಡಿ ಸಿಬ್ಬಂದಿಗಳ ಸಂಖ್ಯೆ ಹೆಚ್ಚಿಸಬೇಕು ಎಂದರು.
ಉಡುಪಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಸಂತ ಕುಮಾರ್ ಹೆಚ್.ಎಂ ಮಾತನಾಡಿ, ಸಮವಸ್ತ್ರದಾರಿಗಳಿಗೆ ದೈಹಿಕ ಸದೃಡತೆ ಮುಖ್ಯ. ಹಾಗಾಗಿ ಇಂಥ ಕ್ರೀಡೆಗಳು ಸಹಕಾರಿಯಾಗಿದೆ. ಗೃಹರಕ್ಷಕದಳದವರು ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಕಚೇರಿ ಸಿಬ್ಬಂದಿಗಳು, ಗೃಹರಕ್ಷಕ ದಳದ ಅಧಿಕಾರಿಗಳು, ಘಟಕಾಧಿಕಾರಿಗಳು, ಗೃಹರಕ್ಷಕ ದಳದವರು ಉಪಸ್ಥಿತರಿದ್ದರು. ಉಡುಪಿ ಜಿಲ್ಲೆ ಮತ್ತು ದ.ಕ ಜಿಲ್ಲಾ ಗೃಹರಕ್ಷಕದಳದ ಡೆಪ್ಯುಟಿ ಕಮಾಂಡೆಂಟ್ ರಮೇಶ್ ಸ್ವಾಗತಿಸಿದರು. ಗೃಹರಕ್ಷಕದಳದ ಪ್ರಥಮ ದರ್ಜೆ ಸಹಾಯಕಿ ಶ್ಯಾಮಲ.ಎ ವಂದಿಸಿದರು. ಸಾಯಿನಾಥ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.