‘ಸದ್ಯದ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಿದ್ರೆ ದೇವರಿಂದಲೂ ರಾಜ್ಯವನ್ನು ಉಳಿಸಲು ಸಾಧ್ಯಾವಾಗುತ್ತಿರಲಿಲ್ಲ’ – ನಳಿನ್ ಕುಮಾರ್ ಕಟೀಲ್
ಬೆಂಗಳೂರು: ಈ ಸ್ಥಿತಿಯಲ್ಲಿ ಸಿದ್ದರಾಮಯ್ಯ ಏನಾದರು ಮುಖ್ಯಮಂತ್ರಿ ಆಗಿದ್ದರೆ ರಾಜ್ಯವನ್ನು ಆ ಭಗವಂತನಿಂದಲೂ ಉಳಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿ ಕಾರಿದ್ದಾರೆ.
ಕೋಲಾರಕ್ಕೆ ಭೇಟಿ ನೀಡಿ ಮಾತನಾಡಿದ ಅವರು ಭಗವಂತನ ಇಚ್ಛೆ ನಮ್ಮ ಮುಖ್ಯಮಂತ್ರಿ ಅವರ ಮೇಲೆ ಇರೋದರಿಂದ ರಾಜ್ಯದಲ್ಲಿ ಕೊರೊನಾ ವೈರಸ್ ನಿಯಂತ್ರಣ ಆಗುತ್ತಿದೆ. ಸಿದ್ದರಾಮಣ್ಣ ಮುಖ್ಯಮಂತ್ರಿ ಆಗಿದ್ರೆ ರಾಜ್ಯವನ್ನು ಭಗವಂತನ ಕೈಯಲ್ಲೂ ಉಳಿಸೋಕೆ ಆಗ್ತಿರಲಿಲ್ಲ. ಬೇರೆ ಬೇರೆ ಕಡೆಗೆ ಹೋಗಿ ಇತಿಹಾಸ ಬರೆದವರು ಇವತ್ತು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ಕಾಂಗ್ರೆಸ್ ಅವರ ಮೇಲೆ ಕಿಡಿಕಾರಿದರು.
ರಾಜ್ಯದಲ್ಲಿ ಕೊರೋನಾ ನಿಯಂತ್ರಣ ಮಾಡುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ಯಶಸ್ವಿಯಾಗಿದೆ. ವಿನಾಕಾರಣ ವಿರೋಧ ಪಕ್ಷದವರು ಮೆಡಿಕಲ್ ಕಿಟ್ ಹಗರಣದಲ್ಲಿ ಸರ್ಕಾರ ಲೂಟಿ ಹೊಡೆಯುತ್ತಿದೆ ಎಂದು ಬೊಬ್ಬೆ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಇಂತಹ ತುರ್ತು ಪರಿಸ್ಥಿತಿಯಲ್ಲಿ ಸಹಕಾರ ನೀಡದೆ ರಾಜಕೀಯ ಮಾಡುತ್ತಿದೆ. ಭ್ರಷ್ಟಾಚಾರದ ಬಗ್ಗೆ ಮಾತಾಡುವವರು ತಿಹಾರ್ ಜೈಲಿನಲ್ಲಿ ಏಕೆ ಕುಳಿತುಕೊಂಡಿದ್ದರು ಎಂದು ಛೇಡಿಸಿದರು. ಬಿಜೆಪಿ ವಿರೋಧ ಪಕ್ಷದಲ್ಲಿ ಇದ್ದಾಗ ತುರ್ತು ಸಂದರ್ಭಗಳಲ್ಲಿ ಸಹಕಾರ ನೀಡಿದೆ. ಆದರೆ ಇವರಿಗೆ ಅಂತಹ ಮನಸ್ಥಿತಿ ಇಲ್ಲದೇ ವೈಯಕ್ತಿಕ ಬೇಳೆ ಬೇಯಿಸಿಕೊಳ್ತಾ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.