ಸಮಗ್ರ ಮೀನುಗಾರಿಕೆ ನೀತಿ ತರಲು ಚಿಂತನೆ ನಡೆಸಲಾಗಿದೆ- ಕೋಟ ಶ್ರೀನಿವಾಸ ಪೂಜಾರಿ 

Spread the love

ಸಮಗ್ರ ಮೀನುಗಾರಿಕೆ ನೀತಿ ತರಲು ಚಿಂತನೆ ನಡೆಸಲಾಗಿದೆ- ಕೋಟ ಶ್ರೀನಿವಾಸ ಪೂಜಾರಿ 

ಮಂಗಳೂರು: ಪ್ರಸಕ್ತ ದಿನಗಳಲ್ಲಿ ಯಾಂತ್ರೀಕೃತ ದೋಣಿಗಳನ್ನು ಬಳಸಿಕೊಂಡು ಮೀನುಗಾರಿಕೆ ಮಾಡಲಾಗುತ್ತಿದ್ದು, ಮುಂದಿನ ತಲೆಮಾರಿಗೂ ಮೀನಿನ ಸಂತತಿ ಉಳಿಯುವಂತಾಗಲಿ. ಈ ನಿಟ್ಟಿನಲ್ಲಿ ಸಮಗ್ರ ಮೀನುಗಾರಿಕೆ ನೀತಿ ತರಲು ಚಿಂತನೆ ನಡೆಸಲಾಗಿದೆ ಎಂದು ಮುಜರಾಯಿ, ಮೀನುಗಾರಿಕೆ ಹಾಗೂ ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಬುಧವಾರ ನಗರದ ಬಂದರ್‍ನಲ್ಲಿರುವ ಮತ್ಸ್ಯಗಂಧಿ ಸಭಾಭವನದಲ್ಲಿ ನಡೆದ ಮೀನುಗಾರಿಕಾ ಇಲಾಖೆಯ ಮಾಹಿತಿ ಕಾರ್ಯಗಾರ ಹಾಗೂ ಸವಲತ್ತು ವಿತರಣಾ ಕಾರ್ಯಕ್ರಮದ ಉದ್ಘಾಟನೆ ನಡೆಸಿ ಮಾತಾನಾಡಿದ ಸಚಿವರು, ಸಮಗ್ರ ಮೀನುಗಾರಿಕೆಯ ನೀತಿಯು ಕರಡು ಹಂತದಲ್ಲಿದ್ದು, ಸಾಧಕ ಭಾದಕಗಳನ್ನು ತುಲನೆ ಮಾಡಿದ ಬಳಕವೇ ಮುಂದಿನ ಬಜೆಟ್‍ನಲ್ಲಿ ಜಾರಿಗೊಳಿಸಲಾಗುವುದು ಎಂದು ಹೇಳಿದರು.

ಸಮುದ್ರ ಕಿನಾರೆ ಮೀನುಗಾರಿಕೆ, ಒಳನಾಡು ಮೀನುಗಾರಿಕೆ ಸೇರಿದಂತೆ ಎಲ್ಲ ರೀತಿಯ ಮೀನುಗಾರಿಕೆಗೆ ಸರಕಾರವು ಪ್ರೋತ್ಸಾಹ ನೀಡಲಿದೆ. ರಾಜ್ಯದಲ್ಲಿ ಲಕ್ಷಾಂತರ ಕೆರೆಗಳಿವೆ ಇವುಗಳನ್ನು ಮೀನುಗಾರಿಕಾ ಸಹಕಾರಿ ಸಂಘಗಳಿಗೆ ಕೊಡಲು ಚಿಂತಿಸಲಾಗಿದೆ ಎಂದರು.

2017-18 ರಲ್ಲಿ ಬೂತಾಯಿ ಮೀನು ಐದು ಲಕ್ಷ ಟನ್ ಸಿಕ್ಕಿತ್ತು ಆದರೆ ಹಿಂದಿನ ವರ್ಷ ಒಂದು ಲಕ್ಷಕ್ಕೆ ಇಳಿಕೆಯಾಯಿತು. ಮೀನಿನ ಉತ್ಪಾದನೆ ಸಹಿತ ಸಮಸ್ಯೆ ಪರಿಹರಿಸುವ ಬಗ್ಗೆ ಚರ್ಚೆ ನಡೆಸುವ ಅಗತ್ಯವಿದೆ. ಯೋಜನೆ ರೂಪಿಸಲು ಬರಬಹುದಾದ ರಾಜಕೀಯ ಒತ್ತಡಗಳನ್ನು ಎದುರಿಸಿ ಸಮಗ್ರ ಮೀನುಗಾರಿಕಾ ನೀತಿ ತರುವ ಜವಾಬ್ದಾರಿ ಸರಕಾರದ ಮುಂದಿದೆ ಎಂದು ಸಷ್ಟಪಡಿಸಿದರು.

ತೇಲುವ ಜಟ್ಟಿ ನಿರ್ಮಾಣಕ್ಕಾಗಿ ಅನುದಾನ ತೆಗೆದಿರಿಸಲಾಗಿದೆ. ಜಟ್ಟಿ ನಿರ್ಮಾಣವಾದಲ್ಲಿ ಹೆಚ್ಚಿನ ಸಮಸ್ಯೆಗಳು ನಿವಾರಣೆಯಾಗಲಿದೆ. ಮಂಗಳೂರು ಉಡುಪಿಯಲ್ಲಿ ತೇಲುವ ಜಟ್ಟಿಗಳನ್ನು ನಿರ್ಮಿಸಲು ತಲಾ ರೂ. ಆರೂವರೆ ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಸಮಗ್ರ ಮೀನುಗಾರಿಕೆ ಕುರಿತು ಚರ್ಚೆ ಬಂದಾಗ ಎಲ್ಲ ಮೀನುಗಾರರೂ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಸಚಿವರು ಮನವಿ ಮಾಡಿದರು.

2017-18, 2018-19 ನೇ ಸಾಲಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ತೆಗೆದುಕೊಂಡ ರೂ.50 ಸಾವಿರವರೆಗಿನ ಸಾಲ ಮನ್ನಾ ಆಗಿದೆ. ಸಾಲ ಮನ್ನಕ್ಕೆ ರೂ.60 ಕೋಟಿ ವೆಚ್ಚ ತಗುಲಿದೆ. ಇದರಿಂದ 23 ಸಾವಿರ ಮಹಿಳಾ ಮೀನುಗಾರರು ನಿರಾಳರಾಗಿದ್ದಾರೆ ಶೇ. 90 ರಷ್ಟು ಮೀನುಗಾರರು ದ.ಕ ಜಿಲ್ಲೆ ಮತ್ತು ಉಡುಪಿಯವರಾಗಿದ್ದಾರೆ. ಕೆಲವೆಡೆ ಬ್ಯಾಂಕ್ ಅಧಿಕಾರಿಗಳು ಮೀನುಗಾರರಿಗೆ ಸಾಲ ಮರುಪಾವತಿ ಮಾಡದಿದ್ದಲ್ಲಿ ಮುಂದಿನ ಬಾರಿ ಸಾಲ ನೀಡಲ್ಲ ಎಂದು ಎಚ್ಚರಿಕೆ ನೀಡಿರುವುದು ಗಮನಕ್ಕೆ ಬಂದಿದೆ. ಯಾವುದೇ ಮಹಿಳಾ ಮೀನುಗಾರರು ಹೆದರುವ ಅಗತ್ಯವಿಲ್ಲ ಎಂದು ಸಚಿವರು ತಿಳಿಸಿದರು.

ಕಾರ್ಯಕ್ರಮದಲ್ಲಿ ರೂ. 80 ಲಕ್ಷ ಮೌಲ್ಯದ ಕಾಡ್ ಎಂಡ್ ಬಲೆಗಳನ್ನು 800 ಫಲಾನುಭವಿಗಳಿಗೆ ಸಚಿವ ಶ್ರೀನಿವಾಸ್ ಪೂಜಾರಿ ವಿತರಿಸಿದರು. ಮೀನುಗಾರರಿಗೆ ಸಲಕರಣೆ ಕಿಟ್‍ಗಳನ್ನೂ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಂಗಳೂರು ಮೀನುಗಾರಿಕಾ ಉಪನಿರ್ದೇಶಕ ತಿಪ್ಪೇಸ್ವಾಮಿ, ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್, ದ.ಕ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಂಗಳೂರು ಮಹಾನಗರಪಾಲಿಕೆ ಸದಸ್ಯ ಅಬ್ದುಲ್ ಲತೀಫ್, ಪರ್ಷಿನ್ ಮೀನುಗಾರರ ಸಂಘದ ಅಧ್ಯಕ್ಷ ಮೋಹನ್ ಬೆಂಗ್ರೆ, ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ನಿತಿನ್ ಕುಮಾರ್, ಪರ್ಷಿನ್ ಮೀನುಗಾರರ ಸಂಘದ ಗೌರವಧ್ಯಕ್ಷ ಉಮೇಶ್ ಕರ್ಕೇರಾ, ಉಡುಪಿ, ದ.ಕ ಜಿಲ್ಲೆ ಮೀನುಗಾರಿಕಾ ಫೆಡರೇಷನ್ ಆಡಳಿತ ನಿರ್ದೇಶಕರು ಹರೀಶ್ ಕುಮಾರ್, ಉಪಸ್ಥಿತರಿದ್ದರು.


Spread the love