ಸಮ್ಮೇಳನಗಳಿಂದ ಕನ್ನಡದ ಮನಸುಗಳ ಒಗ್ಗಟ್ಟು: ಗಣೇಶ್ ಕಾರ್ಣಿಕ್
ಉಜಿರೆ: ಸಾಹಿತ್ಯ ಸಮ್ಮೇಳನಗಳು ಭಾಷೆಯ ಅಗಾಧತೆಯ ಮೂಲಕ ಕನ್ನಡದ ಮನಸ್ಸುಗಳನ್ನು ಒಂದುಗೂಡಿಸುತ್ತವೆ ಎಂದು ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅಭಿಪ್ರಾಯಪಟ್ಟರು.
ಉಜಿರೆಯಲ್ಲಿ ದ.ಕ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ‘ಧ್ವಜಾರೋಹಣ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಎಸ್ಡಿಎಂ ಸ್ನಾತಕೋತ್ತರ ಕೇಂದ್ರದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ನೂರಾರು ಮತಪಂಥಗಳಿವೆ. ಸಾಹಿತ್ಯ ಯಾವುದೇ ಸಮಯದಲ್ಲಿ ಓದಿಸಿಕೊಂಡರೂ ಹಿತ ನೀಡುತ್ತಿರಬೇಕು. ನಕಾರಾತ್ಮಕ ಸಂಗತಿಗಳ ವೈಭವೀಕರಣ ಸಾಹಿತ್ಯ ಎನ್ನಿಸಿಕೊಳ್ಳುವುದಿಲ್ಲ ಎಂದರು.
ಪರಕೀಯ ದಾಳಿಯ ಮಧ್ಯೆಯೂ ಭಾರತದ ಸನಾತನ ಸಂಸ್ಕøತಿಯ ಲಕ್ಷಣಗಳು ಹಾಗಿಯೇ ಉಳಿದುಕೊಂಡಿವೆ. ಇದು ನಮ್ಮ ಅಂತಃಶಕ್ತಿ. ಈ ಪರಂಪರೆಯ ಅರಿವನ್ನು ಸಮ್ಮೇಳನಗಳ ಮೂಲಕ ಮೂಡಿಸಬೇಕು ಎಂದು ಹೇಳಿದರು.
ಭಾಷೆಯು ಭಾವನೆಗಳ ವಿನಿಮಯಕ್ಕಾಗಿ ಇರುವ ಮಾಧ್ಯಮ. ಸಾಹಿತ್ಯ ಸಮ್ಮೇಳನಗಳ ಚರ್ಚೆಗಳಲ್ಲಿ ವಾದ ಪ್ರತಿವಾದಗಳು ಏರ್ಪಟ್ಟಾಗ ವ್ಯಕ್ತಿಯ ವೈಯಕ್ತಿಕ ನಿಲುವುಗಳೂ ಗೌರವಿಸಲ್ಪಡಬೇಕು. ರಾಜಕೀಯ ವಾಗ್ಯುದ್ಧಗಳಿಗೆ ಸಮ್ಮೇಳನಗಳು ವೇದಿಕೆಯೊದಗಿಸಬಾರದು. ಅಲ್ಲಿ ಯೋಜನಾ, ಯೋಚನಾಬದ್ಧ ಪ್ರಧಾನ ಚರ್ಚೆಗಳಾಗಬೇಕು ಎಂದು ಆಶಿಸಿದರು.