ಸರಕಾರದ ಸೌಲಭ್ಯಗಳನ್ನು ಬಳಸಿಕೊಂಡರೆ ಬಡತನ ನಿರ್ಮೂಲನೆ ಸಾಧ್ಯ – ಡಾ| ಡಿ.ವೀರೇಂದ್ರ ಹೆಗ್ಗಡೆ

Spread the love

ಸರಕಾರದ ಸೌಲಭ್ಯಗಳನ್ನು ಬಳಸಿಕೊಂಡರೆ ಬಡತನ ನಿರ್ಮೂಲನೆ ಸಾಧ್ಯ – ಡಾ| ಡಿ.ವೀರೇಂದ್ರ ಹೆಗ್ಗಡೆ

ಮುಂಬೈ: ಹಳ್ಳಿಯ ಜನರಲ್ಲಿ ಎರಡು ರೀತಿಯ ಬಡತನಗಳಿವೆ. ಮೊದಲಾಗಿ ಆರ್ಥಿಕ ಬಡತನ. ಇದರ ನಿವಾರಣೆಗಾಗಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು ಮತ್ತು ಅನುಪಾಲನೆ ಮಾಡಬೇಕು. ಎರಡನೆಯದಾಗಿ ಜನರಲ್ಲಿರುವ ಮಾನಸಿಕ ಬಡತನ ಎಂದರೆ ತಮ್ಮ ಬಳಕೆಗಾಗಿರುವ ಸರಕಾರಿ ಕಾರ್ಯಕ್ರಮಗಳ ಕುರಿತಂತೆ ಅಜ್ಞಾನ, ತಮ್ಮ ಅಭಿವೃದ್ಧಿಗಾಗಿ ತಾವೇ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತಿಸದೇ ಇರುವುದರಿಂದ ಮಾನಸಿಕ ಬಡತನ ಉಂಟಾಗುತ್ತದೆ.

hegde-mumabi-conference

ಇಂದು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳಿಂದ ಸಾಕಷ್ಟು ಯೋಜನೆಗಳು ಗ್ರಾಮೀಣರಿಗೆ ಲಭ್ಯವಿದೆ. ಆದರೆ ಅವರು ಇದನ್ನು ಕೇಳಿ ಪಡಕೊಳ್ಳಬೇಕು. ದುರದೃಷ್ಟವಷಾತ್ ಬಡಜನರಿಗೆ ಯೋಜನೆಗಳ ಕುರಿತಾಗಿ ಸರಿಯಾಗಿ ತಿಳುವಳಿಕೆ ಇಲ್ಲದಿರುವುದರಿಂದ ಬಡತನ ಮುಂದುವರೆದಿದೆ. ಈ ಮಾನಸಿಕ ಬಡತನವನ್ನು ನಿರ್ಮೂಲನೆ ಮಾಡಿ ಪ್ರಜ್ಞಾವಂತ ಗ್ರಾಮೀಣ ಜನರನ್ನು ನಿರ್ಮಾಣ ಮಾಡುವ ಕೆಲಸ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ರುಡ್‍ಸೆಟ್ ಸಂಸ್ಥೆಗಳಿಂದ ಆಗುತ್ತಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿಡಾ| ಡಿ.ವೀರೇಂದ್ರ ಹೆಗ್ಗಡೆಯವರು ಅಭಿಪ್ರಾಯ ಪಟ್ಟಿದ್ದಾರೆ.

ಮುಂಬೈನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವತಿಯಿಂದ ನಡೆದ ಮೂರನೇ ಬ್ಯಾಂಕಿಂಗ್ ಮತ್ತು ಎಕಾನಾಮಿಕ್ ಸಮಾವೇಶದ “ಭಾರತದ ಅಭಿವೃದ್ಧಿಗೆ ನೆಲಗಟ್ಟಿನ ನಿರ್ಮಾಣ”ರಾಷ್ಟ್ರೀಯ ಕಾರ್ಯಾಗಾರದಲ್ಲಿ ಅವರು ಮಾತನಾಡುತ್ತಿದ್ದರು.

“ಗ್ರಾಮೀಣ ಉತ್ಪಾದಕತೆಯಲ್ಲಿ ಹೆಚ್ಚಳ ಮತ್ತು ಮಾನವ ಸೂಚ್ಯಂಕದ ಅಭಿವೃದ್ಧಿ”ಯ ಕುರಿತಂತೆ ನಡೆಸಲಾದ ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಹೆಗ್ಗಡೆಯವರು, ಗ್ರಾಮೀಣ ಪ್ರದೇಶಗಳ ನೈಜ ಸಮಸ್ಯೆಗಳನ್ನು ಎಳೆಎಳೆಯಾಗಿ ವಿಶ್ಲೇಷಿಸಿದರು. ಶೌಚಾಲಯ ರಚನೆಯ ಸಮಸ್ಯೆಗಿಂತ ಶೌಚಾಲಯಕ್ಕೆ ನೀರು ಒದಗಿಸುವ ಸಮಸ್ಯೆಯೇ ಅಧಿಕವಾಗಿದೆ ಎಂದು ಅವರು ತಿಳಿಸಿದರು. ಕೃಷಿಯಲ್ಲಿ ಉತ್ಪಾದನೆಗಿಂತ ಕೃಷಿ ಮಾರುಕಟ್ಟೆ ಸಮಸ್ಯೆಯಿಂದ ಹೈರಾಣಾಗಿರುವ ರೈತರ ಸಮಸ್ಯೆಗಳನ್ನು ಅವರು ಆರ್ಥಿಕಜ್ಞರ ಎದುರು ವಿವರಿಸಿದರು.

ಗೋಷ್ಠಿಯಲ್ಲಿ ಇಸ್ರೆಲ್‍ನ ಕೃಷಿ ಸಲಹೆಗಾರ ಮನೆಚಂದ್ ದಿನಾರ್‍ರವರು ಮತ್ತು ನಬಾರ್ಡ್‍ನ ಅಧ್ಯಕ್ಷರಾದ ಡಾ| ಹರ್ಷಕುಮಾರ್ ಬನ್ವಾಲರವರು ಸಹ ಉಪನ್ಯಾಸಕರಾಗಿ ಭಾಗವಹಿಸಿದ್ದರು.

ಇದಕ್ಕೂ ಮುನ್ನಾ ದಿನ ಕಾರ್ಯಾಗಾರವನ್ನು ಉದ್ಘಾಟಿಸಿದ ಕೇಂದ್ರ ಸರಕಾರದ ಹಣಕಾಸು ಸಚಿವರಾದ ಅರುಣ್‍ಜೇಟ್ಲಿಯವರು ಗ್ರಾಮೀಣ ಪ್ರದೇಶಗಳಿಗೆ ಆರ್ಥಿಕ ನೆರವನ್ನು ಹೆಚ್ಚಿಸುವರೇ ಸರಕಾರವು ಕೈಗೊಂಡ ಕ್ರಮಗಳನ್ನು ವಿವರಿಸಿದರು. ಇಂದು ದೇಶದ ರಾಜಕೀಯ ವ್ಯವಸ್ಥೆಯು ಪಕ್ಷಾತೀತವಾಗಿ ರಾಷ್ಟ್ರೀಯ ಸಮಸ್ಯೆಗಳ ಕುರಿತಂತೆ ನಿರ್ಧಾರವನ್ನು ಕೈಗೊಳ್ಳಲು ಬದ್ಧವಾಗಿದೆ. ಜಿಎಸ್‍ಟಿ ವಿಧೇಯಕ ಅಂಗೀಕಾರವು ಇದಕ್ಕೆ ಸಾಕ್ಷಿಯಾಗಿದೆ ಎಂದು ನುಡಿದರು.

ಕಾರ್ಯಾಗಾರದಲ್ಲಿ ಬ್ಯಾಂಕ್ ಅಧಿಕಾರಿಗಳು, ಉದ್ದಿಮೆದಾರರು ಭಾಗವಹಿಸಿದ್ದರು. ಇದೇ ಸಂದರ್ಭ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಸ್ಟೇಟ್ ಬ್ಯಾಂಕ್ ಆಫ್‍ಇಂಡಿಯಾದ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ, ನಬಾರ್ಡ್‍ನ ಅಧ್ಯಕ್ಷರಾದ ಡಾ| ಹರ್ಷಕುಮಾರ್ ಬನ್ವಾಲ ಮತ್ತಿತರರೊಂದಿಗೆ ಚರ್ಚೆ ನಡೆಸಿದರು.


Spread the love