ಸರಕಾರದಿಂದ ಎಚ್ಐವಿ ಸೋಂಕಿತರಿಗೆ ಆತ್ಮವಿಶ್ವಾಸ ವೃಧ್ದಿ: ವಿನಯ ಕುಮಾರ್ ಸೊರಕೆ
ಉಡುಪಿ : ಏಡ್ಸ್/ಎಚ್ಐವಿ ಸೋಂಕಿತರಿಗೆ ಸರಕಾರವು ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದು, ಈ ಮೂಲಕ ಅವರ ಆತ್ಮವಿಶ್ವಾಸ ವೃದ್ಧಿಸುವ ಕಾರ್ಯ ನಡೆಸಲಾಗುತ್ತಿದೆ ಎಂದು ಶಾಸಕ ವಿನಯ ಕುಮಾರ್ ಸೊರಕೆಯವರು ಹೇಳಿದರು.
ಅವರು ಶುಕ್ರವಾರ ಜಿ.ಪಂ., ಆರೋಗ್ಯ ಇಲಾಖೆ, ಏಡ್ಸ್ ನಿಯಂತ್ರಣ ಘಟಕ, ಕಾನೂನು ಸೇವೆಗಳ ಪ್ರಾಧಿಕಾರ ಇನ್ನಿತರ ಸಂಸ್ಥೆಗಳ ಸಹಯೋಗದಲ್ಲಿ `ಆರೋಗ್ಯ ಎಲ್ಲರ ಹಕ್ಕು-ನನ್ನ ಆರೋಗ್ಯ ನನ್ನ ಹಕ್ಕು’ ಎನ್ನುವ ಘೋಷಣೆಯಡಿ ಉದ್ಯಾವರ ಎಸ್ಡಿಎಂ ಕಾಲೇಜಿನ ಸಭಾಂಗಣದಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಚ್ಐವಿ ಪೀಡಿತರನ್ನು ಸಮಾಜ ವಕ್ರದೃಷ್ಟಿಯಿಂದ ನೋಡುವ ಕಾಲ ಹಿಂದೆ ಇತ್ತು. ವ್ಯವಸ್ಥಿತ ಚಿಕಿತ್ಸೆ, ಮುಂಜಾಗ್ರತಾ ಕ್ರಮದಿಂದ ಏಡ್ಸ್/ಎಚ್ಐವಿ ಸೋಂಕು ತಡೆಯಲ್ಲಿ ರಾಜ್ಯ ಪರಿಣಾಮಕಾರಿ ಘಟ್ಟಕ್ಕೆ ತಲುಪಿದೆ. ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿ , ಎಚ್.ಐ.ವಿ ಯನ್ನು ಸೊನ್ನೆಗೆ ತರಲು ಶ್ರಮ ವಹಿಸಬೇಕಿದೆ ಎಂದು ಸೊರಕೆ ತಿಳಿಸಿದರು.
ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅವರು ಮಾಹಿತಿ ಕರಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ, ಸಮಾಜದ ಎಲ್ಲರ ಸಹಕಾರದಿಂದ ಸೋಂಕು ತಡೆಗಟ್ಟಲು ಸಾಧ್ಯವಿದೆ. ಬದ್ಧತೆಯಿಂದ ಕಾರ್ಯ ಮಾಡಿದಲ್ಲಿ ಯಶಸ್ಸು ಸಾಧ್ಯವಿದೆ ಎಂದರು.
ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉದ್ಯಾವರ ಗ್ರಾ.ಪಂ. ಅಧ್ಯಕ್ಷೆ ಸುಗಂಧಿ ಶೇಖರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಲತಾ, ಕಾಲೇಜಿನ ಪ್ರಾಂಶುಪಾಲ ಡಾ| ಪ್ರಭಾಕರ ಉಪಾಧ್ಯಾಯ ಅವರು ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿ ಡಾ| ರೋಹಿಣಿ ಪ್ರಸ್ತಾವನೆಗೈದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ| ಚಿದಾನಂದ ಸಂಜು ಎಸ್.ವಿ. ಸ್ವಾಗತಿಸಿದರು.