ಸರ್ಕಾರ ಮೀನುಗಾರ ಬಂಧುಗಳ ಜೊತೆ ನಿಲ್ಲಲಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಭಯ

Spread the love

ಸರ್ಕಾರ ಮೀನುಗಾರ ಬಂಧುಗಳ ಜೊತೆ ನಿಲ್ಲಲಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಭಯ

ಕುಂದಾಪುರ: ಗಂಗೊಳ್ಳಿಯ ಮ್ಯಾಂಗನೀಸ್ ವಾರ್ಫ್‍ನಲ್ಲಿ ನಡೆದ ಅಗ್ನಿ ಅವಘಡ ಪ್ರದೇಶಕ್ಕೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರೊಂದಿಗೆ ದುರಂತದಲ್ಲಿ ಸಂಕಷ್ಟಕ್ಕೆ ಒಳಗಾದವರು ಹಾಗೂ ಮೀನುಗಾರಿಕಾ ಸಂಘಟನೆಯ ಪ್ರಮುಖರೊಂದಿಗೆ ಮಾತುಕತೆ ನಡೆಸಿ ಅವರ ಅಹವಾಲುಗಳನ್ನು ಸ್ವೀಕರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶೀಘ್ರವೇ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಕುರಿತು ಭರವಸೆ ನೀಡಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಈ ದುರಂತದಲ್ಲಿ 9 ಪರ್ಸಿನ್ ಬೋಟ್, 5 ಸಣ್ಣ ದೋಣಿಗಳು, 8 ಮೀನುಗಾರಿಕಾ ಬಲೆಗಳು ಸುಟ್ಟು ಕರಕಲಾಗಿದೆ ಎನ್ನುವ ಪ್ರಾಥಮಿಕ ಮಾಹಿತಿ ಇದೆ. ಈ ಘಟನೆಯಿಂದ ನಮ್ಮ ಸಹೋದರ ಮೀನುಗಾರ ಬಂಧುಗಳು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಂದಾಜು 13-15 ಕೋಟಿ ರೂ.ಗಳ ವರೆಗೆ ನಷ್ಟ ಉಂಟಾಗಿದೆ ಎನ್ನುವ ಲೆಕ್ಕಾಚಾರಗಳು ಇದೆ. ದುರಂತ ಸಂಭವಿಸಿದ ತಕ್ಷಣವೇ ಇಲ್ಲಿನ ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ಅವರು ಸರ್ಕಾರದ ಪ್ರಮುಖರಿಗೆ ಮಾಹಿತಿಯನ್ನು ನೀಡಿದ್ದ ಕಾರಣದಿಂದ ಅದೇ ದಿನ ರಾಜ್ಯ ಮೀನುಗಾರಿಕಾ ಸಚಿವರು ಇಲ್ಲಿಗೆ ಬಂದು ಪರಿವೀಕ್ಷಣೆ ನಡೆಸಿ, ಸಂತ್ರಸ್ತರಿಂದ ಅಹವಾಲು ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ನನ್ನನ್ನು ಭೇಟಿ ಮಾಡಿರುವ ಮಾಜಿ ಶಾಸಕರು ಸಂತ್ರಸ್ತರಿಗೆ ಪರಿಹಾರ ನೀಡುವ ಹಾಗೂ ಸ್ಥಳೀಯ ಮೀನುಗಾರರ ಬೇಡಿಕೆಗಳಿಗೆ ಸ್ಪಂದಿಸುವಂತೆಯೂ ಮನವಿ ಮಾಡಿಕೊಂಡಿದ್ದಾರೆ. ಸರ್ಕಾರ ಖಂಡಿತವಾಗಿಯೂ ಮೀನುಗಾರ ಬಂಧುಗಳ ಜೊತೆ ನಿಲ್ಲಲಿದೆ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಈ ದುರಂತದಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ಮಾನವೀಯ ನೆಲೆಯಲ್ಲಿ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳುತ್ತೇವೆ ಎಂದರು.

ಬೆಂಕಿಯಲ್ಲಿ ಸುಟ್ಟು ಕರಕಲಾದ ಒಂದು-ಒಂದೂವರೆ ಕೋಟಿ ಮೌಲ್ಯದ ಮೀನುಗಾರಿಕಾ ಬೋಟ್ ಗಳಿಗೆ ವಿಮಾ ಪರಿಹಾರವಿದ್ದರೂ ಅದು ದೊರಕಿ, ಪುನಃ ಜೀವನವನ್ನು ಕಟ್ಟಿಕೊಳ್ಳಲು ಸಮಯ ತಗಲುವುದರಿಂದ, ಎರಡು-ಮೂರು ದಿನಗಳಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತುರ್ತು ಪರಿಹಾಕ್ಕೆ ಒತ್ತಾಯಿಸುತ್ತೇನೆ. ಈ ಪರಿಹಾರ ಕ್ರಮ ತೆಗೆದುಕೊಳ್ಳಲು ಕನಿಷ್ಠ 15 ದಿನವಾದರೂ ಬೇಕಾಗಬಹುದು. ಈ ರೀತಿಯ ದುರಂತಗಳು ನಡೆದಿರುವುದು ಬಹಳ ವಿರಳ. ಬೆಂಕಿ ಯಾವುದಕ್ಕೆ ಹೊತ್ತಿಕೊಂಡಿದೆ ಎನ್ನುವುದು ತನಿಖೆಯಿಂದಷ್ಟೆ ಗೊತ್ತಾಗಬೇಕಿದೆ. ಇಂತಹ ದುರಂತಗಳು ಮರುಕಳಿಸದಂತೆ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಸರ್ಕಾರ ಎಚ್ಚರಿಕೆ ವಹಿಸಲಿದೆ. ಬಂದರು ಪ್ರದೇಶದಲ್ಲಿ ಪಂಪ್‍ಹೌಸ್, ಅಗ್ನಿಶಾಮಕ ದಳದ ಘಟಕ ಸ್ಥಾಪನೆಯ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಗಂಭೀರ ಚಿಂತನೆ ನಡೆಸಲಾಗುವುದು ಎಂದರು.

ಸ್ಥಳೀಯರ ಆಕ್ರೋಶ:
ದುರಂತ ಘಟಿಸಿದ ಸ್ಥಳದಲ್ಲಿ ಕಸ-ಕಡ್ಡಿ, ಕೊಳಚೆ ತ್ಯಾಜ್ಯ, ನಿರುಪಯುಕ್ತ ದೋಣಿಯ ಭಾಗಗಳನ್ನು ಕೂಡಲೇ ವಿಲೇವಾರಿ ಮಾಡದೇ ಇರುವುದರಿಂದ ಹಾಗೂ ರಾಸಾಯನಿಕ ಮಿಶ್ರಿತ ಯಾಂತ್ರೀಕೃತ ದೋಣಿಗಳ ನಿರ್ಮಾಣ ಮಾಡುವುದರಿಂದ ಇಲ್ಲಿನ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗಿ ಸ್ಥಳೀಯರ ಆರೋಗ್ಯದ ಮೇಲೆ ಪರಿಣಾಮಗಳಾಗುತ್ತಿರುವುದರಿಂದ ಇಲ್ಲಿ ಈ ಎಲ್ಲಾ ಚಟುವಟಿಕೆಗಳನ್ನು ಕೂಡಲೇ ನಿರ್ಬಂಧಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

ಕುಂದಾಪುರ-ಬೈಂದೂರು ಬೇಡಿಕೆಗೆ ಮರುಜೀವ! 
ಕುಂದಾಪುರದಿಂದ ಗಂಗೊಳ್ಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿಯವರು ಈ ಕುರಿತು ಈಗಾಗಲೇ ಸಚಿವ ಸತೀಶ್ ಜಾರಕಿಹೊಳೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಗಿದೆ. ಸೇತುವೆ ನಿರ್ಮಾಣಕ್ಕೆ ಅಂದಾಜು 270 ರಿಂದ 300 ಕೋಟಿ ರೂ. ಬೇಕಾಗಬಹುದು. ಇದಕ್ಕೆ ಅಂದಾಜು ಯೋಜನಾ ವೆಚ್ಚವನ್ನು ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಿಆರ್‍ಎಫ್ ಅಥವಾ ಬೇರೆ ಯಾವುದಾದರೂ ವಿಶೇಷ ಯೋಜನೆಯಡಿಯಲ್ಲಿ ಆದ್ಯತೆಯ ಮೇಲೆ ಪರಿಗಣಿಸುವುದಾಗಿ ಸಚಿವರು ಭರವಸೆಯನ್ನು ನೀಡಿದ್ದಾರೆ. ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ ಕೂಡಲೇ ಉಸ್ತುವಾರಿ ಸಚಿವರೊಂದಿಗೆ ಸಚಿವ ಜಾರಕಿಹೊಳೆಯವರನ್ನು ಭೇಟಿಯಾಗಿ ಯೋಜನೆಗೆ ಅನುಮೋಧನೆ ನೀಡಲು ಕೋರಿಕೊಳ್ಳುವುದಾಗಿ ತಿಳಿಸಿದರು.

ಎಸ್ ಪಿ ಡಾ.ಅರುಣ್ ಕೆ, ಜಿ.ಪಂ ಸಿಇಒ ಪ್ರಸನ್ನ ಕುಮಾರ್, ಉಪವಿಭಾಗಾಧಿಕಾರಿ ಎಸ್.ಆರ್ ರಶ್ಮಿ, ಡಿವೈಎಸ್ ಪಿ, ಕೆ.ಯು ಬೆಳ್ಳಿಯಪ್ಪ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಪ್ರಸಾದ್ ರಾಜ್ ಕಾಂಚನ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅರವಿಂದ ಪೂಜಾರಿ, ಪ್ರದೀಪ್‍ಶೆಟ್ಟಿ ಗುಡಿಬೆಟ್ಟು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ದೇವಾಡಿಗ, ಗಂಗೊಳ್ಳಿ ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಸದಸ್ಯ ಬಿ.ರಾಘವೇಂದ್ರ ಪೈ, ಪ್ರಮುಖರಾದ ತಮ್ಮಯ್ಯ ದೇವಾಡಿಗ ಗುಜ್ಜಾಡಿ, ರಮೇಶ್ ಕಾಂಚನ್, ಮದನ್ ಕುಮಾರ್ ಉಪ್ಪುಂದ, ಪ್ರಶಾಂತ್ ಪೂಜಾರಿ ಕರ್ಕಿ, ಉದಯ್ ಕುಮಾರ್ ಶೆಟ್ಟಿ ವಂಡ್ಸೆ, ವಿಜಯ್ ಪುತ್ರನ್, ಸುಧೀಶ್ ಶೆಟ್ಟಿ ಗುಲ್ವಾಡಿ, ಹರೀಶ್ ತೋಳಾರ್ ಕೊಲ್ಲೂರು, ಮಂಜುನಾಥ್ ಪೂಜಾರಿ ಕಟ್ ಬೇಲ್ತೂರು, ಹರೀಶ್ ಮೇಸ್ತಾ, ಸುರೇಂದ್ರ ಖಾರ್ವಿ, ಇಸ್ಮಾಯಿಲ್ ಪರ್ಕಳ, ದುರ್ಗಾರಾಜ್ ಗಂಗೊಳ್ಳಿ, ಮೀನುಗಾರಿಕಾ ಸಂಘಟನೆಯ ರಮೇಶ್ ಕುಂದರ್ ಪಡುಕೆರೆ, ದಿನೇಶ್ ನಾಯ್ಕ್ ಕುಂದಾಪುರ, ಶ್ರೀಧರ ಮೇಸ್ತಾ, ಶೇಖರ್ ಕುಂದರ್ ಇದ್ದರು.


Spread the love