ಸಹಕಾರಿ ಸಾಧಕರಾದ ರಾಜೇಂದ್ರ ಕುಮಾರ್, ರವಿರಾಜ್ ಹೆಗ್ಡೆಗೆ ಅಭಿನಂದನೆ
ಉಡುಪಿ: ಉಡುಪಿ ಜಿಲ್ಲಾ ಸಮಸ್ತ ಸಹಕಾರಿ ಬಂಧುಗಳ ಪರವಾಗಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಬೆಂಗಳೂರು ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷರಾದ ಸಹಕಾರ ರತ್ನ ಡಾ|ಎಂ ಎನ್ ರಾಜೇಂದ್ರ ಕುಮಾರ್ ಹಾಗೂ ರಾಷ್ಟ್ರೀಯ ಡೈರಿ ಎಕ್ಸಲೆನ್ಸಿ ಪ್ರಶಸ್ತಿ ಪಡೆದೆ ದಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ಅಧ್ಯಕ್ಷರಾದ ಕೆ ರವಿರಾಜ್ ಹೆಗ್ಡೆ ಅವರಿಗೆ ಅಭಿನಂದನಾ ಕಾರ್ಯಕ್ರಮ ಶನಿವಾರ ಉಡುಪಿ ಅಮ್ಮಣ್ಣಿ ರಾಮಣ್ಣ ಸಭಾಭವನದಲ್ಲಿ ನಡೆಯಿತು.
ಸಮಾರಂಭವನ್ನು ಪೇಜಾವರ ಮಠದ ಕಿರಿಯ ಸ್ವಾಮೀಜಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉದ್ಘಾಟಿಸಿ ಸಹಕಾರಿ ಕ್ಷೇತ್ರವು ಸಾಕಷ್ಟು ಅಭಿವೃದ್ಧಿ ಪಥದಲ್ಲಿ ಸಾಗುವಲ್ಲಿ ಇಬ್ಬರೂ ಸೇವೆ ಅನನ್ಯ ಈ ಕ್ಷೇತ್ರವು ಇನ್ನಷ್ಟು ಬಲಿಷ್ಠವಾಗಲಿ ಎಂದರು.
ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ಮಾತನಾಡಿ ರೈತರಲ್ಲಿ ಹಾಗೂ ಜನಸಾಮಾನ್ಯರಲ್ಲಿ ಆತ್ಮವಿಶ್ವಾಸದ ಶಕ್ತಿ ತುಂಬಿದ ಸಹಕಾರಿ ಕ್ಷೇತ್ರವು, ಸಂಸ್ಥೆಯ ಅಭಿವೃದ್ಧಿಯ ಜೊತೆ ಸದಸ್ಯರು ಕೂಡ ಆರ್ಥಿಕವಾಗಿ ಸದೃಢವಾಗುವಂತೆ ಮಾಡಿದೆ. ಸಹಕಾರಿ ರಂಗ ಯಾವುದೇ ರಾಜಕೀಯ ಇಲ್ಲದೆ ಮುಂದುವರೆಯುತ್ತಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಜಿಲ್ಲೆಯ ಮಹಿಳೆಯರು ಸ್ವಾವಲಂಬಿಗಳಾಗಿ ನಿಲ್ಲುವಂತೆ ಮಾಡಿದ ಕೀರ್ತಿ ಇಬ್ಬರಿಗೂ ಸಲ್ಲುತ್ತದೆ. ಈ ಎರಡು ಸಂಸ್ಥೆಗಳ ಮುಖ್ಯಸ್ಥರನ್ನು ಗೌರವಿಸುವುದು ಸ್ತುತ್ಯರ್ಹ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ ಎನ್ ಎನ್ ರಾಜೇಂದ್ರ ಕುಮಾರ್ ಅವರು ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ವತಿಯಿಂದ ರಸಗೊಬ್ಬರ ಉತ್ಪಾದನಾ ಕಾರ್ಖಾನೆಯೊಂದನ್ನು ಸ್ಥಾಪಿಸುವ ಚಿಂತನೆ ನಡೆಯುತ್ತಿದ್ದು ಕಾರ್ಖಾನೆ ಸ್ಥಾಪನೆಗೆ ಕೇಂದ್ರ ಸರಕಾರವು 3 ಎಕರೆ ಭೂಮಿ ಅನುದಾನ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲಿದೆ. ಅದೇ ರೀತಿ ಕುಂದಾಪುರದಲ್ಲಿ ಶೀಘ್ರವೇ ರಸಗೊಬ್ಬರ ವಿತರಣಾ ಕೇಂದ್ರವನ್ನು ಆರಂಭಿಸಲಾಗುವುದು. ಸ್ವಸಹಾಯ ಸಂಘದ ಮಹಿಳೆಯರಿಗೆ ಸಮವಸ್ತ್ರವನ್ನು ಈ ವರ್ಷದೊಳಗೆ ನೀಡಲು ಪ್ರಯತ್ನಿಸಲಾಗುವುದು ಎಂದರು
ಡಾ|ಎಂ ಎನ್ ರಾಜೇಂದ್ರ ಕುಮಾರ್ ಮತ್ತು ಅವರ ಪತ್ನಿ ಅರುಣಾ ರಾಜೇಂದ್ರ ಕುಮಾರ್, ಹಾಗೂ ರವಿರಾಝ್ ಹೆಗ್ಡೆ ಮತ್ತು ಅವರ ಪತ್ನಿ ವಿನಯ ರವಿರಾಜ್ ಹೆಗ್ಡೆ ಅವರನ್ನು ಅಭಿನಂದದಿಸಲಾಯಿತು
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶ್ರೀನಿವಾಸ ಪೂಜಾರಿ, ಮಹಿಳಾ ಒಕ್ಕೂಟ ಅಧ್ಯಕ್ಷೆ ಸರಳಾ ಬಿ ಕಾಂಚನ್,ದಕ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಹಾಗೂ ಇತರರು ಉಪಸ್ಸ್ಥತರಿದ್ದರು.