ಸಹನಾ ಕುಳಾಯಿ ಭರತನಾಟ್ಯ ರಂಗಪ್ರವೇಶ
ಮಂಗಳೂರು: ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಭರತನಾಟ್ಯ ರಂಗಪ್ರವೇಶದಲ್ಲಿ ನಗರದ ಶಾರದಾ ನೃತ್ಯಾಲಯದ ನೃತ್ಯಗುರು ವಿದುಷಿ ಶ್ರೀಮತಿ ಭಾರತಿ ಸುರೇಶ್ ಅವರ ಶಿಷ್ಯೆ ಸಹನಾ ಕುಳಾಯಿ, ತನ್ನ ಪ್ರಬುದ್ಧ ಮತ್ತು ಸಂಪೂರ್ಣ ಹಿಡಿತದ ಭರತನಾಟ್ಯ ಹೆಜ್ಜೆಗಳ ಮೂಲಕ ನೆರೆದಿದ್ದ ಕಲಾಸಕ್ತರ ಪ್ರಶಂಸೆಗೆ ಪಾತ್ರರಾದರು.
ಹದಿನಾರು ವರ್ಷಗಳ ಕಾಲ ಭರತನಾಟ್ಯ ಅಭ್ಯಾಸವನ್ನು ಗುರುವಿನ ಮಾರ್ಗದರ್ಶನದಲ್ಲಿ ಮಾಡಿದ್ದ ಸಹನಾ, ವಾಸಂತಿ ರಾಗ ಆದಿತಾಳದ ಪುಷ್ಪಾಂಜಲಿಯೊಂದಿಗೆ ತನ್ನ ರಂಗಪ್ರವೇಶದ ಪ್ರಸ್ತುತಿಯನ್ನು ಆರಂಭಿಸಿದರು. ಶ್ರೀ ಮಧುರೈ ಮುರಳೀಧರನ್ ಸಂಯೋಜನೆಯ ಈ ನೃತ್ಯದ ನಂತರ ರಾಗಮಾಲಿಕೆಯಲ್ಲಿ ವಿವಿಧ ದೇವರನ್ನು ಸ್ತುತಿಸುತ್ತಾ ನೆರೆದಿದ್ದ ಪ್ರೇಕ್ಷಕರೆದುರು ತನ್ನ ನೃತ್ಯ ಪ್ರತಿಭೆಯ ಅನಾವರಣಗೊಳಿಸಿದರು. ನಂತರ ರಸಿಕಪ್ರಿಯ ರಾಗ ಆದಿತಾಳದಲ್ಲಿ ವಯಲಿನ್ ಪಂಡಿತ ಲಾಲ್ಗುಡಿ ಜಯರಾಮನ್ ಅವರ ಸಂಯೋಜನೆಯ ಜತಿಸ್ವರವನ್ನು ಪ್ರಸ್ತುತ ಪಡಿಸಿದರು. ಈ ಎರಡೂ ನೃತ್ಯಗಳು ಸಹನಾ ಅವರ ಪರಿಣತಿ ಮತ್ತು ಹೆಜ್ಜೆಗಳ ನಿಖರತೆಗೆ ಸಾಕ್ಷಿ ಎಂಬಂತೆ ಅತ್ಯುತ್ತಮವಾಗಿ ಮೂಡಿಬಂದವು.
ಭರತನಾಟ್ಯ ರಂಗಪ್ರವೇಶದ ಬಹುಮುಖ್ಯ ಪ್ರಸ್ತುತಿ ಪದವರ್ಣ.ಸಹನಾ ತನ್ನ ರಂಗಪ್ರವೇಶಕ್ಕೆ ಅಮೃತವರ್ಷಿಣಿ ರಾಗ, ಆದಿತಾಳದ “ಸ್ವಾಮಿಯ ಕರೆತಾರೆ” ಎಂಬ ಉತ್ತಮ ಸಾಹಿತ್ಯಕ್ಕೆ ಹೆಜ್ಜೆ ಹಾಕಿದಾಗ, ಸಹನಾರ ನೃತ್ಯ ಕೌಶಲ ಮತ್ತು ಗುರುವಿನ ಧಾರೆಯೆರೆದ ವಿದ್ಯೆಗಳಿಗೆ ಸಾರ್ಥಕ್ಯದ ಭಾವ. ಶ್ರೀಕೃಷ್ಣನ ಜೀವನದ ವಿವಿಧ ಸನ್ನಿವೇಶಗಳ ಪ್ರಸ್ತುತಿ, ಸಹನಾ ಎಂಬ ನೃತ್ಯಕಲಾವಿದೆ ಸಾಗಲಿರುವ ಬಹುದೂರ ದಾರಿಯಲ್ಲಿ ಯಶಸ್ಸನ್ನು ಪಡೆಯಲಿರುವ ಎಲ್ಲಾ ಲಕ್ಷಣಗಳೊಂದಿಗೆ ಮೂಡಿಬಂದು, ನೆರೆದಿದ್ದ ಜನರಲ್ಲಿ ಅಪೂರ್ವ ಕಲಾಸ್ವಾದನೆಗೆ ಕಾರಣವಾಯಿತು.
ಪದವರ್ಣದ ಸಮರ್ಥ ಪ್ರಸ್ತುತಿಯ ನಂತರ ಸಹನಾ ಹೆಜ್ಜೆ ಹಾಕಿದ್ದು, ತಂಜಾವೂರು ಶಂಕರ್ ಅಯ್ಯರ್ ಅವರ ಬಹುಪ್ರಸಿದ್ಧ ಸಂಯೋಜನೆಯ ಅರ್ಥಗರ್ಭಿತ “ರಂಜಿನಿ ಮೃದು ಪಂಕಜ ಲೋಚನಿ” ಗೆ. ಇದನ್ನು ಹಿಂಬಾಲಿಸಿ ಪ್ರದರ್ಶನಗೊಂಡದ್ದು, ಮುತ್ತುಸ್ವಾಮಿ ದೀಕ್ಷಿತರ ರಚನೆಯ ಅರ್ಧನಾರೀಶ್ವರ ಈ ಎರಡೂ ಪ್ರದರ್ಶನಗಳು ಸಹನಾ ತನ್ನ ಅಭ್ಯಾಸದ ಮೂಲಕ ಭರತನಾಟ್ಯ ಕ್ಷೇತ್ರದ ಅತ್ಯಂತ ಶಾಸ್ತ್ರೀಯ ಮತ್ತು ಸುಂದರ ಪ್ರಸ್ತುತಿಯಲ್ಲಿ ಸಾಧಿಸಿದ ಪರಿಣತಿಗೆ ಸಾಕ್ಷಿ ಎಂಬಂತೆ ಮೂಡಿಬಂದವು.
ಮುಂದೆ ಸೂರ್ಯ ರಾಗ, ಆದಿತಾಳದ ಅಷ್ಟಪದಿ ನೃತ್ಯದ ಸಂಗೀತ ಅತ್ಯಂತ ಸುಶ್ರಾವ್ಯವಾಗಿತ್ತಾದರೂ, ಅಭಿನಯದಲ್ಲಿ ಸಹನಾ ಇನ್ನೂ ಸ್ವಲ್ಪ ಪರಿಶ್ರಮ ವಹಿಸಬೇಕಿತ್ತು ಅನಿಸಿತು. ಸಹನಾ ಅವರು ಈ ವಿಭಾಗದಲ್ಲಿ ಇನ್ನಷ್ಟು ಅಧ್ಯಯನ ಮಾಡಿದರೆ,ಅವರ ಒಟ್ಟಾರೆ ನೃತ್ಯ ಅಭಿವ್ಯಕ್ತಿಯಲ್ಲಿ ಸಮಗ್ರತೆ ಕಾಯ್ದುಕೊಳ್ಳುವಲ್ಲಿ ಸಹಕಾರಿಯಾದೀತೆಸಿತು. ರಂಗಪ್ರವೇಶದ ಕೊನೆಯಲ್ಲಿ ಲಾಲ್ಗುಡಿ ಜಯರಾಮನ್ ಅವರ ಮತ್ತೊಂದು ಸಂಯೋಜನೆಯ ತಿಲ್ಲಾನವನ್ನು ಮಿಶ್ರಛಾಪು ತಾಳ, ರೇವತಿ ರಾಗದೊಂದಿಗೆ ಮುಗಿಸಿದಾಗ, ನೆರೆದಿದ್ದ ಪ್ರೇಕ್ಷಕರಿಗೆ ಒಂದು ಅತ್ಯಂತ ಉತ್ತಮ ರಂಗಪ್ರವೇಶಕ್ಕೆ ಸಾಕ್ಷಿಯಾದ ಭಾವ.
ಸಹನಾ ಅವರೊಳಗಿನ ನೃತ್ಯ ಸಂಪತ್ತನ್ನು ಹೊರ ತರುವಲ್ಲಿ, ಹಿಮ್ಮೇಳದಲ್ಲಿ ನಟುವಾಂಗದಲ್ಲಿ ಗುರು ವಿದುಷಿ ಭಾರತಿ ಸುರೇಶ್, ವಿದುಷಿ ಶೀಲಾ ದಿವಾಕರ್ ಹಾಡುಗಾರಿಕೆ, ಉಡುಪಿಯ ವಿದ್ವಾನ್ ಶ್ರೀ ಬಾಲಚಂದ್ರ ಭಾಗವತ್ ಮೃದಂಗದಲ್ಲಿ, ವೇಣುವಾದನದಲ್ಲಿ ಹಾಗೂ ಕೀಬೋರ್ಡ್ ನಲ್ಲಿ ವಿದ್ವಾನ್ ಶ್ರೀ ಮುರಳೀಧರ ಕೆ.ಉಡುಪಿ, ರಿದಂ ಪ್ಯಾಡ್ ನಲ್ಲಿ ಶ್ರೀ ರಾಘವೆಂದ್ರ ರಂಗಧೋಳ್ ರಂಗಪ್ರವೇಶದ ಯಶಸ್ಸಿಗೆ ಕಾರಣರಾದರು. ಒಟ್ಟಾರೆಯಾಗಿ ರಂಗಪ್ರವೇಶದ ಮೂಲಕ ಸಹನಾ ಕುಳಾಯಿ ಭರತನಾಟ್ಯ ಕ್ಷೇತ್ರದ ಪ್ರಬುದ್ಧ ಕಲಾವಿದೆಯಾಗುವ ಎಲ್ಲಾ ಭರವಸೆ ಮೂಡಿಸಿದರು.