ಸಾಂತೂರಿನಲ್ಲೊಂದು ಮನಕಲಕುವ ಘಟನೆ ; ಅಜ್ಜಿಯ ಆಸ್ತಿಯನ್ನೇ ಕೊಳ್ಳೆ ಹೊಡೆದು ಕತ್ತಲಲ್ಲಿ ಮಾಯವಾದ ರೋಶನಿ!
ಉಡುಪಿ: ತನ್ನ ಕುಟುಂಬದ ಸದಸ್ಯರಿಂದಲೇ ವಂಚನೆಗೊಳಗಾಗಿ ಆಘಾತಗೊಂಡಿರುವ ಉಡುಪಿ ಜಿಲ್ಲೆಯ ಸಾಂತೂರು ಗ್ರಾಮದ 84 ವರ್ಷದ ಸಿಲೆಸ್ತಿನ್ ಅಂದ್ರಾದೆ ಇದೀಗ ನ್ಯಾಯ ಯಾಚಿಸಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಟಾನವನ್ನು ಆಶ್ರಯಿಸಿದ್ದಾರೆ. ಸ್ವತಃ ದುಡಿದು ಗಳಿಸಿದ ಜಮೀನು ಹಾಗೂ ಮನೆಯನ್ನು ಲಪಟಾಯಿಸಿದ್ದು ತಾನೇ ಎತ್ತಿ ಮುದ್ದಾಡಿದ ಮೊಮ್ಮಗಳು ಎಂದು ತಿಳಿಯುತ್ತಲೇ ಪಾಶ್ರ್ವವಾಯುವಿಗೊಳಗಾಗಿರುವ ಈ ಹಿರಿಯ ಜೀವಕ್ಕೆ ಪೂರ್ಣ ಪ್ರಮಾಣದ ಕಾನೂನು ನೆರವು ನೀಡಲು ಪ್ರತಿಷ್ಟಾನವು ಬದ್ಧವಾಗಿದೆ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ, ಉಡುಪಿ ಇದರ ಅಧ್ಯಕ್ಷರಾದ ಡಾ| ರವೀಂದ್ರನಾಥ ಶಾನುಭಾಗ್ ಹೇಳಿದರು.
ಸಿಲೆಸ್ತಿನ್ ಅಂದ್ರಾದೆ
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೃಷಿ ಕೂಲಿ ಮಾಡಿ ಗಳಿಸಿದ ಹಣದಿಂದಲೇ 1967 ರಲ್ಲಿ ಸೆಲೆಸ್ಟಿನ್ ಎರಡು ಎಕ್ರೆ ಜಮೀನನ್ನು ಖರೀದಿಸಿದರು. ಕ್ರಮೇಣ ಗಂಡ ಗ್ರೆಗರಿ ಡಿಸೋಜರೊಂದಿಗೆ ಸೇರಿ ಮನೆಯನ್ನು ಕಟ್ಟಿದರು. ಬಾವಿಯನ್ನು ತೋಡಿದರು. ಕೃಷಿ ಆದಾಯದಿಂದಲೇ ನಾಲ್ಕೂ ಮಂದಿ ಮಕ್ಕಳನ್ನು ಸಾಕಿ ಬೆಳೆಸಿದರು. ಎಲ್ಲರಿಗೂ ಮದುವೆ ಮಾಡಿ ಸಂಸಾರ ಕಟ್ಟಿ ಕೊಟ್ಟದ್ದೂ ಆಯಿತು. ಕೆಲ ವರ್ಷದ ಹಿಂದೆ ಗಂಡ ಗ್ರೆಗರಿ ಸತ್ತಾಗ ಮುಂಬೈಯಲ್ಲಿ ದುಡಿಯುತ್ತಿದ್ದ ಹಿರಿಯ ಮಗ ರೋನಾಲ್ಡ್ರ ಸಂಸಾರವನ್ನು ಮನೆಗೆ ಕರೆಸಿಕೊಂಡರು.
ವೀಲುನಾಮೆ ಬರೆಯಿಸಿದರು
ತನ್ನ ಜೀವಿತಾವಧಿಯ ಅನಂತರ ಮಕ್ಕಳ ನಡುವೆ ಗೊಂದಲ ಉಂಟಾಗದಿರಲೆಂದು ತನ್ನ ಆಸ್ತಿಯಲ್ಲಿ ನಾಲ್ಕು ಮಕ್ಕಳಿಗೂ ಸಮಪಾಲು ನೀಡಿ ವೀಲುನಾಮೆ ಬರೆಯಿಸಿದರು. ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ನೋಂದಾಯಿಸಿದ್ದೂ ಆಯಿತು. ತಾಯಿ ಮಾಡಿದ ವ್ಯವಸ್ಥೆ ನಾಲ್ಕೂ ಮಕ್ಕಳಿಗೆ ತೃಪ್ತಿಯನ್ನು ತಂದಿತ್ತು.
ಕೃಷಿ ಸಮೀಕ್ಷೆಯಿಂದ ಬಯಲಾದ ಮೋಸ
ಇದೀಗ ಇಪ್ಪತ್ತು ದಿನಗಳ ಹಿಂದೆ ಪಂಚಾಯತ್ ಅಧಿಕಾರಿಗಳು ಸರಕಾರಿ ಯೋಜನೆಯೊಂzಕ್ಕಾಗಿ ಕೃಷಿ ಸಮೀಕ್ಷೆಗೆ ಬಂದಾಗ ಮನೆ ಮಂದಿಗೆಲ್ಲ ಆಶ್ಚರ್ಯವೊಂದು ಕಾದಿತ್ತು. ಮನೆ ಹಾಗೂ ಜಮೀನು ಹಿರಿಯ ಮಗ ರೋನಾಲ್ಡರ ಮಗಳು ರೋಶನಿಯ ಹೆಸರಿನಲ್ಲಿದೆ ಎಂದು ತಿಳಿದೊಡನೆಯೇ ಪಾಶ್ರ್ವವಾಯು ಪೀಡಿತರಾದ ಸೆಲೆಸ್ಟಿನ್ ಇನ್ನೂ ಚೇತರಿಸಿಕೊಂಡಿಲ್ಲ.
50 ವರ್ಷಗಳಿಂದಲೂ ಸೆಲೆಸ್ಟಿನ್ ಹೆಸರಿನಲ್ಲೇ ಇದ್ದ ಹಕ್ಕು ಪತ್ರದಲ್ಲಿ ರೋಶನಿ ಹೆಸರು ಸೇರಿದ್ದು ಹೇಗೆ? ಯಾವಾಗ? ಈ ಹೆಸರು ಬದಲಾವಣೆಗೆ ಮುನ್ನ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ನೋಂದಾವಣೆ ಆಗಲೇ ಬೇಕು. ಅನಂತರ ಮ್ಯುಟೇಶನ್ ರಿಜಿಸ್ಟರ್ನಲ್ಲಿ ಹೆಸರು ದಾಖಲಿಸಬೇಕು. ಅದಕ್ಕಾಗಿ ರೆವಿನ್ಯೂ ಇನ್ಸಪೆಕ್ಟರ್ರು ವಿಚಾರಿಸಬೇಕು. ಸಂಬಂಧ ಪಟ್ಟವರಿಗೆಲ್ಲ ನೋಟೀಸು ನೀಡಿ ಆಕ್ಷೇಪಣೆಗಳನ್ನು ಆಹ್ವಾನಿಸಬೇಕು. ಇವೆಲ್ಲದಕ್ಕೆ ಅರ್ಜಿಸಲ್ಲಿಸದವರಾರು? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಗೊತ್ತಿರುವುದು ರೋಶನಿಗೆ ಮಾತ್ರ ! ಆದರೆ ಆಕೆ ಎಲ್ಲಿದ್ದಾಳೆ ಎಂದು ಯಾರಿಗೂ ತಿಳಿದಿಲ್ಲ.
ಕಾಣದಂತೆ ಮಾಯವಾದ ರೋಶನಿ
ಹತ್ತು ವರ್ಷದ ಹಿಂದೆಯೇ ರೋಶನಿ ಮದುವೆಯಾಗಿ ಗಂಡನ ಮನೆಗೆ ಹೋಗಿದ್ದಳು. ಗಂಡ ದುಬಾಯಿ ಉದ್ಯೋಗದಲ್ಲಿದ್ದರೂ ಅವಳು ಮಾತ್ರ ಊರಿನಲ್ಲಿದ್ದ ಅತ್ತೆಯ ಮನೆಯಲ್ಲಿಯೇ ಇದ್ದಳು. ಆಗಾಗ ಅಜ್ಜಿಯ ಮನೆಗೆ ಬಂದು ಹೋಗುತ್ತಿದ್ದಳು. ಚಿಕ್ಕಂದಿನಿಂದಲೇ ಅಜ್ಜಿಗೆ ರೋಶನಿ ಪ್ರೀತಿಯ ಮೊಮ್ಮಗಳು. ಕೆಲಸಮಯದಿಂದ ಇದ್ದಕ್ಕಿಂತೆಯೇ ರೋಶನಿ ಕತ್ತಲಲ್ಲಿ ಮಾಯವಾಗಿದ್ದಳು. ಮೊದಮೊದಲು ಸಂಪರ್ಕಕ್ಕೆ ಸಿಗುತ್ತಿದ್ದ ರೋಶನಿಯ ಮೊಬೈಲ್ ಇದೀಗ ಸಂಪೂರ್ಣ ಸ್ತಬ್ದವಾಗಿದೆ !
ಸಮೀಕ್ಷಾ ಆಧಿಕಾರಿಗಳ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ಆಸ್ತಿಗೆ ಸಂಬಂಧ ಪಟ್ಟ ಎಲ್ಲಾ ದಾಖಲೆಗಳ ಪ್ರತಿಗಳನ್ನು ಸಬ್ ರಿಜಿಸ್ಟ್ರಾರ್ ಕಛೇರಿಗಳಿಂದ ಪಡೆದುಕೊಂಡರು.
ಎಲ್ಲದರಲ್ಲೂ ರೋಶನಿಯದ್ದೇ ಹೆಸರು!
ಮನೆಯವರೆಲ್ಲ ಸೇರಿ ಮೆಲುಕು ಹಾಕಿದಾಗ ರೋನಾಲ್ಡ್ರಿಗೆ ನಡೆದ ಘಟನೆಗಳೆಲ್ಲಾ ಒಂದೊಂದಾಗಿ ನೆನಪಿಗೆ ಬಂದವು. 2019 ರ ಜನವರಿ ತಿಂಗಳಲ್ಲಿ ಸಾಂತೂರಿನ ಮನೆಗೆ ಬಂದ ರೋಶನಿ ತಂದೆ ರೋನಾಲ್ಡರನ್ನೂ ಅಜ್ಜಿಯನ್ನೂ ಮೂಲ್ಕಿಯ ಯಾವುದೋ ಕಛೇರಿಗೆ ಕರೆದೊಯ್ದು ಕೆಲವು ಕಾಗದ ಪತ್ರಗಳಿಗೆ ಇಬ್ಬರ ಹೆಬ್ಬೆಟ್ಟು ಗುರುತು ಹಾಗೂ ಸಹಿಗಳನ್ನು ಪಡೆದಿದ್ದಳು. ಇಬ್ಬರೂ ಅವಿದ್ಯಾವಂತರಾದುದರಿಂದ ಅವೆಲ್ಲ ಏನೆಂದು ತಿಳಿಯಲಿಲ್ಲ. ಪುನಃ ಪುನಃ ವಿಚಾರಿಸಲಾಗಿ “ರೈತರಿಗೆ ಸಾಲ ನೀಡುವ ಯೋಜನೆಯೊಂದು ಬಂದಿದೆ. ಅದಕ್ಕಾಗಿ ನೋಂದಣಿ ಮಾಡಲು ಬಂದಿದ್ದೇವೆ” ಎಂದಿದ್ದಳು ರೋಶನಿ.
ಆದಾಗಿ ಮೂರನೇ ತಿಂಗಳಲ್ಲಿ ತಂದೆ ರೋನಾಲ್ಡ್ರನ್ನು ಪುನಃ ಅದೇ ಕಛೇರಿಗೆ ಕರೆದೊಯ್ದು ಅದೇ ತರಹದ ಸಹಿಗಳನ್ನು ಪಡೆದಿದ್ದಳು !
ಅರ್ಥಾತ್, ರೋಶನಿಯು ಕೇವಲ ಮೂರೇ ತಿಂಗಳಲ್ಲಿ ಮೋಸದಿಂದ ಅಜ್ಜಿಯಿಂದ ಆಸ್ತಿಯನ್ನು ತಂದೆ ಹೆಸರಿಗೂ ಅಲ್ಲಿಂದ ಪುನಃ ಯಾರಿಗೂ ತಿಳಿಯದಂತೇ ತನ್ನ ಹೆಸರಿಗೂ ಮಾಡಿಕೊಂಡಿದ್ದಳು. ಇದೀಗ ಗುಟ್ಟು ರಟ್ಟಾಗಿರುವುದರಿಂದ ಪಂಚಾಯತ್ ದಾಖಲೆಗಳಲ್ಲಿ ಹಾಗೂ ಮೆಸ್ಕಾಂ ದಾಖಲೆಗಳಲ್ಲಿ ಹೆಸರು ಬದಲಾಯಿಸಲು ಆಕೆಗೆ ಸಾಧ್ಯವಾಗಿಲ್ಲ. ಇತ್ತ ತಂದೆ ರೋನಾಲ್ಡ್ ಡಿಸೋಜರಿಗೆ ಆಸ್ತಿ ತನ್ನ ಹೆಸರಿಗೆ ಬಂದದ್ದೂ ಗೊತ್ತಿಲ್ಲ. ಹೋದದ್ದೂ ಗೊತ್ತಿಲ್ಲ!
ಪ್ರತಿಷ್ಟಾನದ ಕಾನೂನು ನೆರವು
ಈ ಕುಟುಂಬದ ಹಿತೈಷಿ, ನಿವೃತ್ತ ಸೈನಿಕ ಲಾರೆನ್ಸ್ ಡಿಸೋಜರು ಈ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ಪ್ರತಿಷ್ಠಾನಕ್ಕೆ ನೀಡಿದ್ದಾರೆ. ಪ್ರತಿಷ್ಟಾನದ ಕಾನೂನು ಸಲಹೆಗಾರರು ಈಗಾಗಲೇ ಪಂಚಾಯತ್ ಹಾಗೂ ಮೆಸ್ಕಾಂ ಕಛೇರಿಗೆ ನೋಟೀಸು ನೀಡಿ ನ್ಯಾಯಾಲಯದಲ್ಲಿ ತೀರ್ಮಾನವಾಗುವವರೆಗೂ ಈ ಆಸ್ತಿಯ ದಾಖಲೆಗಳಿಂದ ಸೆಲೆಸ್ಟಿನ್ ಅವರ ಹೆಸರು ತೆಗೆಯದಂತೆ ಸೂಚಿಸಿದ್ದಾರೆ. ಅಂತೆಯೇ ಹಿರಿಯ ನಾಗರೀಕರ ನ್ಯಾಯಾಲಯಕ್ಕೆ ದೂರು ನೀಡಲು ನೆರವು ನೀಡಿದ್ದಾರೆ ಎಂದು ಅವರು ಹೇಳಿದರು.