ಸಾಂತ್ವನ ಕೇಂದ್ರಕ್ಕಿದೆ ಸಂಪೂರ್ಣ ರಕ್ಷಣೆ- ಎಸ್ ಪಿ ಸಂಜೀವ್ ಎಂ ಪಾಟೀಲ್

Spread the love

ಸಾಂತ್ವನ ಕೇಂದ್ರಕ್ಕಿದೆ ಸಂಪೂರ್ಣ ರಕ್ಷಣೆ- ಎಸ್ ಪಿ ಸಂಜೀವ್ ಎಂ ಪಾಟೀಲ್

ಉಡುಪಿ: ಜಿಲ್ಲೆಯಲ್ಲಿನ ಸಾಂತ್ವನ ಕೇಂದ್ರಗಳ ಕರ್ತವ್ಯ ನಿರ್ವಹಣೆಗೆ ಪೂರಕವಾಗುವಂತೆ ಪೊಲೀಸ್ ಇಲಾಖೆ ನೆರವು ನೀಡಲಿದೆ. ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಇಲಾಖೆಯ ಆದ್ಯತೆಗಳಲ್ಲೊಂದಾಗಿದ್ದು ಇಲಾಖೆ ನೊಂದವರಿಗೆ ತುರ್ತು ಸ್ಪಂದನೆ ನೀಡುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಎಂ ಪಾಟೀಲ್ ಹೇಳಿದರು.

ಇಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಂತ್ವನ ಯೋಜನೆಯ ಸಮನ್ವಯ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ನೊಂದವರು ಮಹಿಳಾ ಪೊಲೀಸ್ ಠಾಣೆಗೆ ಬಂದು ದೂರು ನೀಡುವ ಅಗತ್ಯವಿಲ್ಲ; ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿ. ಈ ಸಂಬಂಧ ಎಲ್ಲ ಠಾಣೆಗಳಿಗೂ ಸುತ್ತೋಲೆಯನ್ನು ಕಳುಹಿಸಲಾಗುವುದು ಎಂದ ಎಸ್ ಪಿ, ದೂರು ಪಡೆಯಲು ನಿರಾಕರಿಸಿದರೆ ತಕ್ಷಣ 100ಕ್ಕೆ ಫೋನ್ ಮಾಡಿ ಎಂದರು.

ರಾತ್ರಿ ವೇಳೆ ಸಾಂತ್ವನ ಕೇಂದ್ರ ವ್ಯಾಪ್ತಿಯಲ್ಲಿ ಬೀಟ್ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ಕ್ರಮಕೈಗೊಳ್ಳಲಾಗುವುದೆಂದ ಅವರು, ಆರೋಪಿಗಳನ್ನು ಇಲಾಖೆಯವರು ಬೆಂಬಲಿಸುತ್ತಾರೆಂ¨ ದೂರು ಬಂದರೆ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನೂ ನೀಡಿದರು.

ಸಾಂತ್ವನ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸುವಂತೆ ಸಲಹೆ ಮಾಡಿದ ಅವರು, ಇದರಿಂದ ತನಿಖೆಗೆ ನೆರವಾಗಲಿದೆ ಎಂದರು. ಸ್ಥೈರ್ಯನಿಧಿ ನೀಡಲು ಪೂರಕವಾಗುವಂತೆ ಎಫ್ ಐ ಆರ್ ಪ್ರತಿ ಮತ್ತು ಮೆಡಿಕಲ್ ವರದಿಯ ಪ್ರಥಮ ಮಾಹಿತಿ ವರದಿಯನ್ನು ಮಹಿಳಾ ಚಿಕಿತ್ಸಾ ಘಟಕಗಳಿಗೆ ಶೀಘ್ರವಾಗಿ ತಲುಪಿಸಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿಯೂ ಅವರು ಈ ಸಂದರ್ಭದಲ್ಲಿ ಮಹಿಳಾ ಚಿಕಿತ್ಸಾ ಘಟಕದ ಪ್ರತಿನಿಧಿಗಳಿಗೆ ಉತ್ತರಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಇಲಾಖೆಯ ವಿರುದ್ದ ಹೇಳಿಕೆಗಳನ್ನು ನೀಡದೆ ನಿಗದಿತ ದೂರನ್ನು ನೀಡಿದರೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದರು.

ಸಭೆಯ ಆರಂಭದಲ್ಲಿ ಮಾತನಾಡಿದ ಅಡಿಷನಲ್ ಎಸ್ ಪಿ ಕುಮಾರಚಂದ್ರ ಅವರು, ಮಹಿಳೆಯರ ರಕ್ಷಣೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಮಹಿಳಾ ರಕ್ಷಣಾಧಿಕಾರಿಗಳಿದ್ದು ಅವರ ಬಳಿ ಪ್ರಥಮವಾಗಿ ವರದಿ ಮಾಡಿದರೆ ಶೀಘ್ರ ನ್ಯಾಯ ದೊರೆಯುತ್ತದೆ; ಇಲಾಖೆಗಳು ಪರಸ್ಪರ ಸಮನ್ವಯದಿಂದ ಕರ್ತವ್ಯ ನಿರ್ವಹಿಸಿದರೆ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ ಎಂದರು. ಮಹಿಳಾ ಠಾಣೆಯ ಎ ಎಸ್ ಐ ಮುಕ್ತಾ ಅವರು, ಸಾಂತ್ವನ ಕೇಂದ್ರದವರು ಪ್ರಸ್ತಾಪಿಸಿದ ಪ್ರತಿಯೊಂದು ಪ್ರಕರಣದ ಬಗ್ಗೆಯೂ ಸವಿವರ ಮಾಹಿತಿ ನೀಡಿದರು.

ಮಹಿಳಾ ಒಕ್ಕೂಟದ ಅಧ್ಯಕ್ಷರು ಬೈಂದೂರು ವ್ಯಾಪ್ತಿಗೊಂದು ಮಹಿಳಾ ಪೊಲೀಸ್ ಠಾಣಾ ಬೇಡಿಕೆಯನ್ನೂ ಇಂದೂ ಸಹ ಸಭೆಯ ಮುಂದಿಟ್ಟರು. ಜಿಲ್ಲಾಧಿಕಾರಿಗಳು ಸಭಾ ನಿರ್ಣಯದಲ್ಲಿ ಬೇಡಿಕೆಯನ್ನು ಸೇರಿಸಿ ಸರ್ಕಾರಕ್ಕೆ ಕಳುಹಿಸುವ ಭರವಸೆಯನ್ನು ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವೀಣಾ, ಮೂರು ಸಾಂತ್ವನ ಕೇಂದ್ರÀದ ಸದಸ್ಯರು, ಪದಾಧಿಕಾರಿಗಳು, ಕಾನೂನು ಸೇವಾ ಪ್ರಾಧಿಕಾರದ ಸದಸ್ಯರು ಉಪಸ್ಥಿತರಿದ್ದರು.


Spread the love