ಸಾಗರ ಸಂರಕ್ಷಣೆ ನಮ್ಮೆಲ್ಲರ ಹೊಣೆ- ಪ್ರಮೋದ್ ಮಧ್ವರಾಜ್
ಉಡುಪಿ: ವಿವಿಧ ಕಾರಣಗಳಿಂದ ಇಂದು ಮಾಲಿನ್ಯಗಳು ಹೆಚ್ಚಾಗುತ್ತಿದ್ದು ಮಾಲಿನ್ಯದ ಬಿಸಿ ಸಮುದ್ರವನ್ನು ಇಂದು ಕಲುಷಿತಗೊಳಿಸಿದೆ. ಸಮುದ್ರ ಮಾಲಿನ್ಯದಿಂದ ಜೀವಜಾಲದ ಮೇಲೆ ಸಂಭವಿಸುವ ಅನಾಹುತಗಳನ್ನು ಗಮನದಲ್ಲಿರಿಸಿ ಸಮುದ್ರಕ್ಕೆ ಸೇರುವ ತ್ಯಾಜ್ಯಗಳನ್ನು ತಡೆಯುವ ಕಾರ್ಯ ಉಡುಪಿಯಿಂದಲೇ ಆರಂಭವಾಗಲಿ ಎಂದು ಮೀನುಗಾರಿಕೆ, ಯುವಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಹೇಳಿದರು.
ಉಡುಪಿ ಜಿಲ್ಲೆಯ ಪದವಿ ಕಾಲೇಜುಗಳ ಎನ್.ಎಸ್ಎಸ್, ಎನ್ಸಿಸಿ, ಇಕೋಕ್ಲಬ್, ರೆಡ್ಕ್ರಾಸ್, ಸ್ಕೌಟ್ಸ್ ಅಂಡ್ ಗೈಡ್ಸ್, ಬೋಧಕ ಸಂಚಾಲಕರುಗಳಿಗೆ ಡಾ.ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇಲ್ಲಿ ಏರ್ಪಡಿಸಲಾಗಿದ್ದ ಪರಿಸರ ಮನನ ಕಾರ್ಯಕ್ರಮ ಹಾಗೂ ಉಡುಪಿ ಕಡಲತೀರ ಸ್ವಚ್ಛತೆ 2018ರ ಪೂರ್ವಭಾವಿ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮುದ್ರದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ಕರಾವಳಿಗರ ಹೊಣೆ ಸ್ವಚ್ಛ ಸಮುದ್ರವನ್ನಾಗಿ ಸಂರಕ್ಷಿಸುವುದು; ಶೇ.70 ರಷ್ಟು ನೀರಿನಿಂದ ಆವೃತವಾದ ನಮ್ಮ ಭೂಮಿಯ ಕಡಲ ಕಿನಾರೆಯ ಸ್ವಚ್ಚತೆಯನ್ನು ಉಳಿಸಬೇಕಿದೆ. ಪ್ಲಾಸ್ಟಿಕ್ ಬಳಕೆ ಜೊತೆಗೆ ಭೂಮಿಯ ಮೇಲೆ ಉತ್ಪನ್ನವಾಗುವ ಹೆಚ್ಚಿನ ತ್ಯಾಜ್ಯಗಳು ಸಮುದ್ರದ ಒಡಲನ್ನು ಸೇರುತ್ತಿವೆ. ತ್ಯಾಜ್ಯಗಳ ಗಮ್ಯಸ್ಥಾನ ಕಡಲಾಗಿದೆ ಎಂಬುದನ್ನು ಸೂಕ್ಷ್ಮ ಪರಿಸರ ಅವಲೋಕನದಿಂದ ತಿಳಿದುಬರುತ್ತದೆ. ಹೀಗಾಗಿ ಸಮುದ್ರವನ್ನು ಸಂರಕ್ಷಿಸುವ ಈ ನಿಟ್ಟಿನಲ್ಲಿ ಆರಂಭಿಸಿರುವ ಅರಿವಿನ ಅಭಿಯಾನ ಯಶಸ್ವಿಯಾಗಲಿ ಎಂದು ಸಚಿವರು ಶುಭ ಹಾರೈಸಿದರು.
ಅತ್ಯಂತ ಸ್ವಚ್ಚ ದ್ವೀಪದ ಹೆಗ್ಗೆಳಿಕೆಯ ಮಲ್ಪೆಯ ಸೇಂಟ್ ಮೇರಿಸ್ನ್ನು ‘ಝೀರೋ ವೇಸ್ಟ್ ‘ ದ್ವೀಪ ಎಂದು ತಾವೇ ಘೋಷಿಸಿದ್ದು ಹಲವು ದಿನಗಳ ಬಳಿಕ ಹೆಲಿಟೂರಿಸಮ್ ವೇಳೆ ಸೈಂಟ್ ಮೇರೀಸ್ನ್ನು ವೀಕ್ಷಿಸಿದಾಗ ತ್ಯಾಜ್ಯ ರಾಶಿ ಕಂಡು ಸಂಬಂಧಪಟ್ಟವರನ್ನು ಕೇಳಿದಾಗ ಅದು ಇಲ್ಲಿನ ಪ್ರವಾಸಿಗರ ಒಯ್ದ ತ್ಯಾಜ್ಯವಲ್ಲ; ಸಮುದ್ರ ತಂದು ಹಾಕಿದ ತ್ಯಾಜ್ಯ ಎಂಬುದನ್ನು ಗಮನಕ್ಕೆ ತಂದುದನ್ನು ಸ್ಮರಿಸಿದರು.
ಪರಿಸರ ನಾಶದಿಂದ ಇಡೀ ಜೀವ ಸಂಕುಲ ನಶಿಸುತ್ತಿದೆ. ಪ್ರತೀ ವರ್ಷ 1 ಲಕ್ಷ ಸಮುದ್ರ ಜೀವ ಸಂಪತ್ತು ನಾಶಹೊಂದುತ್ತಿದ್ದು, ಕಳೆದ ವರ್ಷ ಶೇ.23 ರಷ್ಟು ಜೀವ ಸಂಪತ್ತು ನಾಶಹೊಂದಿವೆ . ಪರಿಸರದ ಉಳಿವು ಬಹುಮುಖ್ಯ ಎಂದು ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಎಸ್.ಹೆಗಡೆ ಹೇಳಿದರು.
ಪರಿಸರಕ್ಕೆ ಹಾನಿ ಮಾಡುತ್ತಿರುವ ಪ್ಲಾಸ್ಟಿಕ್ ನ ಬಳಕೆ ಕಡಿಮೆ ಮಾಡಬೇಕು. ಪ್ಲಾಸ್ಟಿಕ್ ಕೈಚೀಲಗಳನ್ನು ಸಂಪೂರ್ಣವಾಗಿ ನಿಷೇಧಿಸಿದಾಗ ಮಾತ್ರ ಜೀವ ರಾಶಿ ಹಾಗೂ ಪರಿಸರ ಉಳಿವು ಸಾಧ್ಯ. ಸಮುದ್ರವು ಕರಾವಳಿ ಜನತೆಯ ಸಂಪದ್ಭರಿತ ಆಸ್ತಿ ಆಗಿದ್ದು, ಸ್ವಾಸ್ತ್ಯ ಸಮಾಜಕ್ಕೆ ಮಾಹಿತಿ ಹಾಗೂ ಜಾಗೃತಿ ಕಾರ್ಯಕ್ರಮ ಬಹಳ ಮುಖ್ಯ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿಯ ಪರಿಸರ ಅಧಿಕಾರಿ ಡಾ.ಲಕ್ಷ್ಮೀಕಾಂತ್ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪರಿಸರ, ನಿಸರ್ಗ ಸಂರಕ್ಷಣಾ ಸಂಸ್ಥೆಯ ಕಾರ್ಯದರ್ಶಿ ಈಶ್ವರ ಪ್ರಸಾದ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಕಾರ್ಯಕ್ರಮ ಆಯೋಜನೆಯ ಮಹತ್ವವನ್ನು ವಿವರಿಸಿದರು. ಅಜ್ಜರಕಾಡು ಡಾ.ಜಿ.ಶಂಕರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ, ಎಸ್ ಉಪಸ್ಥಿತರಿದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ಕುಮಾರ್ ಶೆಟ್ಟಿ ಸ್ವಾಗತಿಸಿದರು. ಡಾ.ಜಿ.ಶಂಕರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎನ್ಎಸ್ಎಸ್ ಅಧಿಕಾರಿ ಹಾಗೂ ಪ್ರಾಧ್ಯಾಪಕ ಪ್ರಕಾಶ್ ಕಮದಾರಿ ನಿರೂಪಿದರು. ರಾಮರಾಯ ಆಚಾರ್ಯ ವಂದಿಸಿದರು.