ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಾಗೂ ಅಪಪ್ರಚಾರ – ಪ್ರಸಾದ್ ರಾಜ್ ಕಾಂಚನ್ ಸ್ಪಷ್ಟನೆ
ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಾಗೂ ಅಪಪ್ರಚಾರ ಮಾಡುತ್ತಿರುವ ಬಗ್ಗೆ ಕಾಂಗ್ರೆಸ್ ಮುಖಂಡ ಪ್ರಸಾದ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಅವರು ಉಡುಪಿ- ಉಚ್ಚಿಲ ದಸರಾಕ್ಕೆ ಎಕೆಎಂಎಸ್ ಸಂಸ್ಥೆಯವರು ಉಚಿತ ಬಸ್ ಸೇವೆ ಕಲ್ಪಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳನ್ನು ದಸರಾ ಕಮಿಟಿಯವರು ಸನ್ಮಾನಿಸಿದ್ದರು. ಆದರೆ, ಇದಕ್ಕೆ ನನ್ನನ್ನು ಲಿಂಕ್ ಮಾಡಿ, ನನ್ನ ರಾಜಕೀಯ ಭವಿಷ್ಯವನ್ನು ಕುಗ್ಗಿಸುವ ಕೆಲಸ ಮಾಡಿದ್ದಾರೆ. ನನ್ನ ಪೋಟೊವನ್ನು ಎಡಿಟ್ ಮಾಡಿ, ನನ್ನನ್ನು ಮೊಗವೀರ ಸಮುದಾಯದಿಂದ ದೂರ ಇಡಬೇಕೆಂಬ ಪೋಸ್ಟ್ ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ತೇಜೋವಧೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನ ಫೋಟೋವನ್ನು ಎಡಿಟ್ ಮಾಡಿ ನಾನು ಬೇರೆ ಧರ್ಮದವರೊಂದಿಗೆ ಸೇರಿಕೊಂಡು ಶ್ರೀ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಜರುಗಿದ ನವರಾತ್ರಿ ಉತ್ಸವದ ವೇದಿಕೆಯಲ್ಲಿ ಇತರ ಸಮುದಾಯದ ವ್ಯಕ್ತಿಗೆ ಸನ್ಮಾನ ಮಾಡಿ, ಹಿಂದೂ ಧರ್ಮದ ನೀತಿಗೆ ವಿರುದ್ಧವಾಗಿ ವರ್ತಿಸಿದ್ದೇನೆಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುತ್ತದೆ. ನನಗೆ ನನ್ನ ಸಮುದಾಯದ ಹಲವು ವ್ಯಕ್ತಿಗಳಿಂದ ದೂರವಾಣಿ ಕರೆ ಬಂದು, ಈ ವಿಚಾರದಲ್ಲಿ ಮಾತುಕತೆ ನಡೆಸಿದ್ದಾರೆ ಎಂದರು
ನಾನು ಕಳೆದ ವಿಧಾನಸಭಾ ಚುನಾವಣೆ(2023)ಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದು, ಆ ಸಮಯದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಉಡುಪಿಯ ಮಸೀದಿಗೆ ಹೋಗಿರುತ್ತೇನೆ. ಆ ಸಮಯದಲ್ಲಿ ಕೆಲವು ದುಷ್ಕರ್ಮಿಗಳು ನನ್ನ ಫೋಟೋವನ್ನು ಎಡಿಟ್ ಮಾಡಿ ಮುಸ್ಲಿಂ ಸಮಾಜದ ಟೋಪಿಯನ್ನು ನನ್ನ ತಲೆಗೆ ಇರಿಸಿ, ಸಾಮಾಜಿಕ ಜಾಲತಾಣದಲ್ಲಿ ನಾನು ಹಿಂದೂ ವಿರೋಧಿ ಎಂದು ಪ್ರಚಾರ ಮಾಡಿ, ನನ್ನ ಸೋಲಿಗೆ ಕಾರಣೀಕರ್ತರಾಗಿರುತ್ತಾರೆ. ಅದೇ ಎಡಿಟ್ ಮಾಡಿದ ಫೋಟೋವನ್ನು ದುಷ್ಕರ್ಮಿಗಳು ಸಾಮಾಜಿಕ ಜಾಲತಾಣದಲ್ಲಿ ಇಂದು ಶ್ರೀ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ದಸರಾ ಜಾತ್ರೆಯಲ್ಲಿ ಬಳಸಿ, ಮುಸ್ಲಿಂ ಸಮುದಾಯದ ವ್ಯಕ್ತಿಗೆ ಸನ್ಮಾನ ಮಾಡಿದ ಬಗ್ಗೆ ನಾನು ಕಾರಣೀಕರ್ತನಾಗಿದ್ದೇನೆಂದು ಸುಳ್ಳು ಪ್ರಚಾರ ಮಾಡುವುದರ ಮೂಲಕ ನನ್ನನ್ನು ರಾಜಕೀಯವಾಗಿ ಕುಂಠಿತಗೊಳಿಸಲು ಕೆಲವು ದುಷ್ಕರ್ಮಿಗಳು ಸಂಚು ನಡೆಸಿರುತ್ತಾರೆ ಎಂದರು.
ನಾನು ಈಗಾಗಲೇ ಮೊಗವೀರ ಮಹಾಜನ ಸಂಘದ ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ. ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತೇನೆ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗುವವರೆಗೆ ನಾನು ಹೋರಾಟ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.