ಸಾಮಾನ್ಯ ಮಳೆ-ಆತಂಕ ಬೇಡ-ಶಾಲಾ ಕಾಲೇಜುಗಳಿಗೆ ನಾಳೆ ರಜೆ -ಜಿಲ್ಲಾಧಿಕಾರಿ ಸೆಂಥಿಲ್
ಮಂಗಳೂರು: ಜಿಲ್ಲಾದ್ಯಂತ ಇಂದು ಸುರಿಯುತ್ತಿರುವ ಮಳೆಯು ಮುಂಗಾರು ಮಳೆಯಾಗಿರುತ್ತದೆ. ಯಾವುದೇ ರೀತಿಯ ಬಿರುಗಾಳಿ ಅಥವಾ ಚಂಡಮಾರುತ ಉಂಟಾಗಿರುವುದಿಲ್ಲ. ಸಾರ್ವಜನಿಕರು ಯಾವುದೇ ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಈಗಾಗಲೇ ಮಳೆ ನೀರು ನುಗ್ಗಿ ಸಾರ್ವಜನಿಕರ ಜನಜೀವನಕ್ಕೆ ತುಂಬಾ ತೊಂದರೆಯಾಗಿರುವ ಪ್ರದೇಶಗಳಲ್ಲಿ ತುರ್ತು ಕ್ರಮವನ್ನು ಜಿಲ್ಲಾಡಳಿತ ಕೈಗೊಳ್ಳುತ್ತಿದೆ. ಸಾರ್ವಜನಿಕರು ಮಳೆಯಿಂದ ಯಾವುದೇ ಹಾನಿ ಅಥವಾ ಸಮಸ್ಯೆ ಉಂಟಾದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ಕಂಟ್ರೋಲ್ ರೂಂ ಸಂಖ್ಯೆ: 1077 ಇದಕ್ಕೆ ಕರೆ ಮಾಡಿ ತಮ್ಮ ಸಮಸ್ಯೆ ತಿಳಿಸಿದರೆ ಕೂಡಲೇ ಸ್ಪಂದಿಸಲಾಗುವುದು.
ಮೀನುಗಾರಿಕಾ ದೋಣಿಗಳು ಮತ್ತು ಬೋಟ್‍ಗಳು ಯಾವುದೇ ಕಾರಣಕ್ಕೂ ಸಮುದ್ರಕ್ಕಿಳಿಯಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಜಿಲ್ಲಾದ್ಯಂತ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಿಸಲಾಗಿದೆ. ಮಳೆ ಇನ್ನೂ ಮುಂದುವರಿಯುವ ಸಾಧ್ಯತೆ ಇರುವುದರಿಂದ ನದಿ ತೀರದಲ್ಲಿ ವಾಸಿಸುವವರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು, ಸಮುದ್ರ ತೀರಕ್ಕೆ ಪ್ರವಾಸಿಗರು ಮತ್ತು ಸಾರ್ವಜನಿಕರು ತೆರಳಬಾರದು ಹಾಗೂ ಇದೊಂದು ಸಾಮಾನ್ಯ ಮಳೆಯಾಗಿದ್ದು ಸಾರ್ವಜನಿಕರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.