ಸಾರಿಗೆ ಸಚಿವರ ಕೈಯ್ಯಲ್ಲಿ ‘ಬಗ್ವಾಡಿಯ ಐರಾವತ’! ಶಹಬ್ಬಾಸ್ ಗಿರಿ ಪಡೆದ ಹೆಮ್ಮಾಡಿಯ ಹುಡುಗ
ಕುಂದಾಪುರ: ಲಾಕ್ ಡೌನ್ ಸಮಯದಲ್ಲಿ ಫಾಮ್ ಶೀಟ್ ಬಳಸಿ ತದ್ರೂಪಿ ಕೆಎಸ್ಆರ್ಟಿಸಿ ಬಸ್ ನ ಪ್ರತಿಕೃತಿ ತಯಾರಿಸಿ ಎಲ್ಲರ ಮನಗೆದ್ದ ಹೆಮ್ಮಾಡಿಯ ಬಗ್ವಾಡಿ ನಿವಾಸಿ ಪ್ರಶಾಂತ್ ಆಚಾರ್ ಬುಧವಾರ ರಾಜ್ಯ ಸಾರಿಗೆ ಸಚಿವರನ್ನು ಭೇಟಿ ಮಾಡಿ ಐರಾವತ ಬಸ್ ಮಾದರಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಬುಧವಾರ ಬೆಳಿಗ್ಗೆ ಬೆಂಗಳೂರಿನ ವಿಧಾನಸೌಧದಲ್ಲಿ ರಾಜ್ಯ ಸಾರಿಗೆ ಸಚಿವ ಲಕ್ಷ್ಮಣ ಸವದಿಯವರನ್ನು ಭೇಟಿಯಾಗಿ ಸಚಿವರಿಗಾಗಿಯೇ ವಿಶೇಷವಾಗಿ ತಯಾರಿಸಿದ ಐರವಾತ ಬಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
ಬಸ್ ಮಾದರಿಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಪ್ರಶಾಂತ್ ಆಚಾರ್ ಕೈಚಳಕಕ್ಕೆ ಶಹಬ್ಬಾಸ್ ಎಂದಿದ್ದಾರೆ. “ಈಗಾಗಲೇ ಬಸ್ ಮಾದರಿಯನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಬಸ್ ನ ಒಂದೊಂದು ಭಾಗಗಳನ್ನು ನಾಜೂಕಾಗಿ ತಯಾರಿಸಿದ್ದೀರಿ. ಸರ್ಕಾರಿ ಬಸ್ ಮೇಲಿರುವ ನಿಮ್ಮ ಅಭಿಮಾನವನ್ನು ಮೆಚ್ಚಲೇಬೇಕು” ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಶತಮಾನದ ಹೊಸ್ತಿಲಲ್ಲಿರುವ ಪ್ರಶಾಂತ್ ಆಚಾರ್ ಅವರ ಹುಟ್ಟೂರ ಬಗ್ವಾಡಿ ಶಾಲೆಯ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆಗೊಳಿಸಲು ಸಚಿವರಿಗೆ ಮನವಿ ನೀಡಿದರು. ಮನವಿ ಸ್ವೀಕರಿಸಿದ ಸಚಿವರು ಶಾಲೆಯ ಹೊಸ ಕಟ್ಟಡಕ್ಕೆ ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿದರು. ಅಲ್ಲದೇ ಈಗಾಗಲೇ ಬಗ್ವಾಡಿ ಶಾಲೆಯಲ್ಲಿ ಎಲ್.ಕೆ.ಜಿ, ಯುಕೆಜಿ ಮಕ್ಕಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಗುಜರಿ ಸೇರಲಿರುವ ಕೆಎಸ್ಆರ್ಟಿಸಿ ಬಸ್ ಅನ್ನು ವಿನ್ಯಾಸಗೊಳಿಸಿ ಅದರಲ್ಲೇ ತರಗತಿ ಆರಂಭಕ್ಕೆ ಚಿಂತನೆ ನಡೆಸಿರುವ ಪ್ರಶಾಂತ್ ಆಚಾರ್ ಹೊಸ ಸಾಹಸಕ್ಕೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಸ್ ಒಳಗೆ ತರಗತಿ ಮಡೆಸುವ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವರು ಇನ್ನು ಹದಿನೈದು ದಿನಗಳೊಳಗೆ ಬಸ್ ಅನ್ನು ಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಶೇಷ ಅತಿಥಿಗಳಿಗೆ ಆಚಾರ್ ಆಟಿಕೆ ಬಸ್:
ಕೆಎಸ್ಆರ್ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ ಕಳಸದ ಪ್ರಶಾಂತ್ ಆಚಾರ್ ಅವರಲ್ಲಿ ಹತ್ತು ಐರಾವತ ಮಾದರಿಯ ಬಸ್ ಅನ್ನು ತಯಾರಿಸಿ ಕೊಡಲು ಬೇಡಿಕೆ ಇಟ್ಟಿದ್ದಾರೆ. ಈ ಬಸ್ ಕೇಂದ್ರ ಕಚೇರಿಗೆ ಬರುವ ಅತಿಥಿಗಳಿಗೆ ಸ್ಮರಣಿಕೆಯಾಗಿ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ.