ಸಾರ್ವಜನಿಕ ಸ್ಥಳಗಳಲ್ಲಿ ಯುವಕರ ಪುಂಡಾಟಕ್ಕೆ ಬ್ರೇಕ್: ಎಸ್ಪಿ ಲಕ್ಷ್ಮಣ ನಿಂಬರಗಿ ಭರವಸೆ

Spread the love

ಸಾರ್ವಜನಿಕ ಸ್ಥಳಗಳಲ್ಲಿ ಯುವಕರ ಪುಂಡಾಟಕ್ಕೆ ಬ್ರೇಕ್: ಎಸ್ಪಿ ಲಕ್ಷ್ಮಣ ನಿಂಬರಗಿ ಭರವಸೆ

ಉಡುಪಿ: ಜಿಲ್ಲೆಯ ಹಲವೆಡೇ ಸಾರ್ವಜನಿಕ ಸ್ಥಳದಲ್ಲಿ ಯುವಕರ ಪುಂಡಾಟ ಮಿತಿ ಮೀರಿದ್ದು ಇದರಿಂದ ತೀವ್ರ ಸಮಸ್ಯೆಯಾಗುತ್ತಿದೆ ಎಂದು ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ದೂರಿದರು. ಶುಕ್ರವಾರ ಜಿಲ್ಲಾ ಪೋಲಿಸ್ ಅಧೀಕ್ಷಕರ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಎಸ್ಪಿ ಲಕ್ಷ್ಮಣ ನಿಂಬರಗಿ ಸಾರ್ವಜನಿಕರ ದೂರನ್ನು ಆಲಿಸಿದರು. ಬ್ರಹ್ಮಾವರ, ಉಡುಪಿ, ಕೋಟ, ಕೊಕ್ಕರ್ಣೆ, ಅಂಬಾಗಿಲು ಭಾಗಗಳಿಂದ ಯುವಕರ ಪುಂಡಾಟದ ಬಗ್ಗೆ ದೂರು ಕೇಳಿ ಬಂದಿತು.

ಅಂಬಾಗಿಲು ಪರಿಸರದಲ್ಲಿ ಯುವಕರು ಗುಂಪುಸೇರಿ ಬೊಬ್ಬೆ ಹೊಡೆಯುವುದು, ಸಿಗರೇಟು ಸೇದುವುದು ಮಾಡುತ್ತಾರೆ ಇದರಿಂದ ಸ್ಥಳೀಯ ಪರಿಸರದಲ್ಲಿ ಸಮಸ್ಯೆಯಾಗುತ್ತಿದೆ ಎಂದು ಎಸ್ಪಿ ಬಳಿ ಮಹಿಳೆಯೊಬ್ಬರು ದೂರಿದರು. ಕೊಕ್ಕರ್ಣೆಯಲ್ಲಿ ಕಿರಾಣಿ ಅಂಗಡಿಯ ಬಳಿಯೇ ವೈಶನ್ ಶಾಪೊಂದಿದೆ, ಅದರ ಮುಂದೆ ಸಂಜೆ ಹೊತ್ತು ಯುವಕರು ಗುಂಪು ಸೇರಿ ಹರಟೆ ಹೊಡೆಯುತ್ತಿರುತ್ತಾರೆ. ಇದರಿಂದ ಹೋಗಿ ಬರುವ ಜನರಿಗೆ ತೊಂದರೆಯಾಗುತ್ತಿದೆ ಎಂದು ಒಬ್ಬರು ದೂರಿದರು. ಮಂದಾರ್ತಿಯ ದುರ್ಗಿಕಟ್ಟೆ ಎಂಬಲ್ಲಿನ ಅಶ್ವತ್ಥ ಮರದ ಕಟ್ಟೆಯ ಮೇಲೆ ಕೆಲಸ ಇಲ್ಲದ ಯುವಕರು ಕುಳಿತುಕೊಂಡಿರುತ್ತಾರೆ. ಇದರಿಂದ ಮರಕ್ಕೆ ಪ್ರದಕ್ಷಿಣೆ ಮಾಡಲು ಬರುವ ಮಹಿಳೆಯರಿಗೆ ಮುಜುಗರ ಮಾಡುತ್ತಿದೆ ಎಂದು ಮಹಿಳೆಯೊಬ್ಬರು ತಮ್ಮ ಅಳಲು ತೋಡಿಕೊಂಡರು.

ಸಾಲಿಗ್ರಾಮ ಪಟ್ಟಣ ಪಂಚಾಯತ್ ನ ಹಳೆಕೋಟೆ ಎಂಬಲ್ಲಿನ ಮೈದಾನದ ಬಳಿ ಯುವಕರು ಸಂಜೆ 6 – 7 ಗಂಟೆಗೆ ಗುಂಪು ಕೂಡಿ ಕುಳಿತಿರುತ್ತಾರೆ. ವಾಕಿಂಗ್ ಹೋಗುವ ಹೆಂಗಸರಿಗೆ ಭಯವಾಗುತ್ತದೆ ಎಂದು ಒಬ್ಬರು ದೂರು ನೀಡಿದರು. ಕುಂದಾಪುರ ನೆಹರೂ ಮೈದಾನದಲ್ಲಿ ಕೆಲವು ಯುವಕರು ಮದ್ಯಪಾನ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಾರೆ ಎಂದು ಇನ್ನೊಂಬ್ಬರು ದೂರಿದರು.

ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಯುವಕರು ಗುಂಪು ಸೇರಿ ಸಾರ್ವಜನಿಕರಿಗೆ ಸಮಸ್ಯೆಯಾಗುವಂತೆ ವರ್ತಿಸಬಾರದು, ಇದು ಮುಂದುವರೆದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಸ್ಪಿ ಎಚ್ಚರಿಕೆ ನೀಡಿದರು. ಬೀಟ್ ಸಿಬ್ಬಂದಿಗಳು ಈ ರೀತಿ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಿ ಕಾರ್ಯನಿರ್ವಹಿಸುವಂತೆ ಹಿರಿಯ ಪೆÇಲೀಸ್ ಅಧಿಕಾರಿಗಳಿಗೆ ಎಸ್ಪಿ ಸೂಚನೆ ನೀಡಿದರು.

ಉಡುಪಿಯ ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿಯೊಬ್ಬರು ಜನರಿಗೆ ಅನಗತ್ಯ ತೊಂದರೆ ನೀಡುತ್ತಾರೆ, ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ಪ್ರೊಫೆಸರ್ ಒಬ್ಬರು ದೂರು ನೀಡಿದರು. ಈ ಬಗ್ಗೆ ಜಿಲ್ಲಾಧಿಕಾರಿ ಅವರ ಗಮನಕ್ಕೆ ತರುವುದಾಗಿ ಎಸ್ಪಿ ಭರವಸೆ ನೀಡಿದರು.

ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಸರ್ವೀಸ್ ರಸ್ತೆಯಲ್ಲಿ ಬಸ್ಸುಗಳನ್ನು ಓಡಿಸುವ, ಸಿಟಿ ಬಸ್ ನಿಲ್ದಾಣದಲ್ಲಿ ಟ್ರಾನ್ಸ್ ಫಾರಂಗೆ ಟೆಂಟ್ ಕಟ್ಟಿ ತರಕಾರಿ ವ್ಯಾಪಾರ ಮಾಡುವ, ಮಣಿಪಾಲದಲ್ಲಿ ವಾಹನಗಳಿಗೆ ಹೈಬೀಮ್ ಬಲ್ಬ್ ಅಳವಡಿಸಿ ಸಂಚರಿಸುವವರ, ಮಲ್ಪೆ ಪಡುಕರೆ ಬ್ರಡ್ಜ್ ಮೇಲೆ ವಾಹನಗಳನ್ನು ಪಾರ್ಕಿಂಗ್ ಮಾಡುವವರ ಬಗ್ಗೆ, ಅಕ್ರಮವಾಗಿ ಕಲ್ಲು ಸಾಗಣೆ ಮಾಡುವವರ, ಬೆಳಿಗ್ಗೆ 6 ಗಂಟೆಗೆ ಬಾರ್ ತೆರೆದಿರುವ, ಬಾರ್ಕೂರು ಕಾಲೇಜಿನ ಬಳಿಯ ಅಂಗಡಿಯಲ್ಲಿ ಅಕ್ರಮವಾಗಿ ಸಿಗರೇಟು, ಗುಚ್ಕಾ ಮಾರಾಟ ಮಾಡುವ ಬಗ್ಗೆ ದೂರುಗಳು ದಾಖಲಾದವು.

ಮಂದಾರ್ತಿಯಲ್ಲಿ ಅಕ್ರಮ ಮದ್ಯ ಮಾರಾಟ, ಪಡಬಿದ್ರಿಯಲ್ಲಿ ದನ ಸಗಾಟ ಮಾಡುವುದು, ಅಂಬಲಪಾಡಿಯಲ್ಲಿ ಮಂಗಳಮುಖಿಯರು ಬಿಕ್ಷೆ ಬೇಡುವುದು ಸೇರಿದಂತೆ ಮೊದಲಾದ ದೂರುಗಳು ಕೇಳಿ ಬಂದಿತು. ರಾತ್ರಿ ವೇಳೆ ವಾಹನಗಳ ಹೈಬೀಮ್ ಲೈಟ್ ಸಮಸ್ಯೆ, ಮಲ್ಪೆ ಪಡುಕೆರೆ ಸೇತುವೆ ಮೇಲೆ ವಾಹನಗಳ ಪಾರ್ಕಿಂಗ್, ಹೆದ್ದಾರಿ ಸರ್ವಿಸ್ ರಸ್ತೆಗಳಲ್ಲಿ ವಿರುದ್ದ ದಿಕ್ಕಿನಿಂದ ವಾಹನ ಬರುವುದು, ಪಾರ್ಕಿಂಗ್ ಮಾಡುವುದು, ಬಸ್ಗಳು ಸಂಚರಿಸುವ ಬಗ್ಗೆ ದೂರು ಕೇಳಿ ಬಂದಿತು. ಬ್ರಹ್ಮಾವರದಲ್ಲಿ ವೈಟ್ ಬೋರ್ಡ್ನಲ್ಲಿ ಬಾಡಿಗೆ ಮಾಡುವುದು ದೂರು ಕೇಳಿ ಬಂದಿತು, ಈ ಬಗ್ಗೆ ಸ್ಪಂದಿಸಿದ ಎಸ್ಪಿ ಸಂಬಂಧಪಟ್ಟ ಅಧಿಕಾರಿಗಳಿಗೆ ತುರ್ತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಕಳೆದ ಫೋನ್ ಇನ್ ಆದರಿಸಿ 15 ದಿನ ನಡೆಸಿದ ವಿಶೇಷ ಕಾರ್ಯಚರಣೆಯಲ್ಲಿ 3 ಲಕ್ಷ ರೂ. ದಂಡ ವಸೂಲಿಯಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು. ಟಿಂಟ್ ಗ್ಲಾಸ್-253 ಕೇಸು, ಸೀಟ್ಬೆಲ್ಟ್ ಧರಿಸದೇ ಇರುವುದು 220 ಕೇಸು, ನಾಮಫಲಕ 359 ಕೇಸು ದಾಖಲಾಗಿದೆ ಎಂದರು.


Spread the love