ಸಾರ್ವಜನಿಕ ಹಿತದೃಷ್ಠಿ ಕಾಪಾಡುವುದು ಲೋಕಾಯುಕ್ತರ ಗುರಿ : ಲೋಕಾಯುಕ್ತ ನ್ಯಾಯಮೂರ್ತಿ
ಮಂಗಳೂರು: ಸರಕಾರದ ಆಡಳಿತ ವ್ಯವಸ್ಥೆಯನ್ನು ಉತ್ತಮಗೊಳಿಸುವುದರ ಜೊತೆಗೆ ದುರಾಡಳಿತವನ್ನು ಕೊನೆಗೊಳಿಸಿ ಸಾರ್ವಜನಿಕರಿಗೆ ತ್ವರಿತ ಪರಿಹಾರವನ್ನು ಒದಗಿಸಿ ಕೊಡುವುದು ಲೋಕಾಯುಕ್ತದ ಮುಖ್ಯ ಉದ್ದೇಶ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ ವಿಶ್ವನಾಥ ಶೆಟ್ಟಿ ಹೇಳಿದರು.
ನಗರದ ಪುರಭವನದಲ್ಲಿ ಕರ್ನಾಟಕ ಲೋಕಾಯುಕ್ತ ಮಂಗಳೂರು ಮತ್ತು ದ.ಕ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ ನಡೆದ ಸಾರ್ವಜನಿಕ ದೂರುಗಳ ವಿಚಾರಣೆ ಮತ್ತು ವಿಲೇವಾರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜನರಿಗೆ ಆಗಿರುವ ತೊಂದರೆಯನ್ನು ತಿಳಿದುಕೊಂಡು ಸೂಕ್ತ ಅಧಿಕಾರಿಗಳೊಂದಿಗೆ ಚರ್ಚಿಸಿ ಸಾಧ್ಯವಾದಷ್ಟರ ಮಟ್ಟಿಗೆ ಅದರ ನಿವಾರಣೆಯನ್ನು ಮಾಡುವುದಾಗಿ ಭರವಸೆಯಿತ್ತರು.
ಈಗಾಗಲೇ ತಾನು 20 ಜಿಲ್ಲೆಗೆ ಬೇಟಿ ನೀಡಿ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿರುವುದಾಗಿಯೂ ತಿಳಿಸಿದರು. ಅಲ್ಲದೇ ಸರಕಾರವು ಬಡಜನರಿಗೆ ಉಪಯುಕ್ತವಾಗುವ ಸೂಕ್ತ ಕಾರ್ಯಕ್ರಮವನ್ನು ನಡೆಸುತ್ತಿದೆ. ಅವುಗಳು ಸಾರ್ವಜನಿಕರಿಗೆ ತಲುಪುವಂತೆ ಮಾಡಲು ಅಧಿಕಾರಿಗಳು ಶ್ರಮವಹಿಸಬೇಕೆಂದು ಹೇಳಿದರು. ಅಧಿಕಾರಿಗಳು ಪಾರದರ್ಶಕತೆ ಇಟ್ಟುಕೊಂಡು ಕೆಲಸ ಮಾಡಬೇಕು ಹಾಗೂ ಸರಕಾರ ತಮಗೆ ನೀಡಿರುವ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಬೇಕೆಂದು ತಿಳಿಸಿದರು. ಅಧಿಕಾರಿಗಳು ಕರ್ತವ್ಯ ಭ್ರಷ್ಟರಾದರೆ ಲೋಕಾಯುಕ್ತ ಕಾಯಿದೆಯ ಮೂಲಕ ಸೂಕ್ತ ಕ್ರಮ ಜರಗಿಸುವುದಾಗಿ ಎಚ್ಚರಿಕೆಯಿತ್ತರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲನ್ನು ಸೀಕರಿಸಿ ಅವರಿಗೆ ಸೂಕ್ತ ಪರಿಹಾರವನ್ನು ಒದಗಿಸಲಾಯಿತು. ಇನ್ನುಳಿದ ದೂರುಗಳ ಕುರಿತು ಡಿಸೆಂಬರ್ ತಿಂಗಳಲ್ಲಿ ಕಾರ್ಯಕ್ರಮ ನಡೆಸಿ ವಿಚಾರಿಸುವುದಾಗಿ ತಿಳಿಸಿದರು. ಸಮಾರಂಭದಲ್ಲಿ ಲೋಕಾಯುಕ್ತ ಅಪಾರ ನಿಬಂಧಕ ಮೋಹನ್, ಲೋಕಾಯುಕ್ತ ಎಸ್ಪಿ ರಶ್ಮಿ, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಜಿ.ಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಮ್ ಆರ್ ರವಿ, ಅಪಾರ ಜಿಲ್ಲಾಧಿಕಾರಿ ಕುಮಾರ್ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.