ಸಾರ್ವಜನಿಕರು ಮಾಸ್ಕ್ ಧರಿಸುವುದನ್ನು ರೂಢಿ ಮಾಡಿಕೊಳ್ಳಬೇಕು- ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್
ಮಂಗಳೂರು: ಸಾರ್ವಜನಿಕರು ಮನೆಯಿಂದ ಹೊರೆಗೆ ಬರುವ ಸಮಯದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಅಗತ್ಯವಾಗಿದೆ. ಕೋವಿಡ್ ವೈರಸ್ ಮತ್ತೊಬ್ಬರಿಗೆ ಹರಡುವುದನ್ನು ತಪ್ಪಿಸಲು ಮಾಸ್ಕ್ ಅವಶ್ಯವಾಗಿದೆ ಎಂದು ಹಲವು ಸಂಶೋಧನೆಗಳಿಂದ ತಿಳಿದುಬಂದಿದ್ದು, ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದನ್ನು ರೂಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ತಿಳಿಸಿದರು.
ಅವರು ಗುರುವಾರ ಜಿಲ್ಲಾಡಳಿತದ ವತಿಯಿಂದ “ಮಾಸ್ಕ್ ಡೇ” ದಿನಾಚರಣೆಯನ್ನು ಕಾಲ್ನಡಿಗೆ ಜಾಗೃತ ಜಾಥಾದ ಮೂಲಕ ಆಚರಿಸಿ ಮಾತನಾಡಿದರು.
ದೇಶವ್ಯಾಪ್ತಿಯಲ್ಲಿ ಕೊರೊನಾ ರೋಗವು ತೀವ್ರವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರಲ್ಲಿ ಮಾರಕ ರೋಗದ ವಿರುದ್ಧ ಜಾಗೃತಿ ಮೂಡಿಸಲು ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಜನ ನಾಯಕರು ಒಂದಾಗಿ ಈ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಜನಸಾಮ್ಯಾನರು ಕಳೆದ ಮೂರು ತಿಂಗಳಿಂದ ತಮ್ಮನ್ನು ತಾವು ರಕ್ಷಿಸಲು ಯಾವ ರೀತಿ ಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದರೋ ಇನ್ನು ಮುಂದೆಯೂ ಹಾಗೆ ಇನ್ನೂ ಹೆಚ್ಚಿನ ಜಿವಾಬ್ದಾರಿ ಅರಿವು ಮೂಡಿಸಿಕೊಂಡು ಈ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಕಡ್ಡಾಯವಾಗಿ ಮಾಸ್ಕ್ ಧರಿಸುವುದನ್ನು ರೂಡೀಗತ ಮಾಡಿಕೊಳ್ಳಬೇಕು ಎಂದರು. ಜನರು ಮಾಸ್ಕ್ ಧರಿಸುವುದರಿಂದ ತಮ್ಮನ್ನಲ್ಲದೇ ತಮ್ಮವರನ್ನೂ, ಸಮಾಜವನ್ನು ರೋಗ ಹರಡದಂತೆ ರಕ್ಷಿಸಬಹುದು ಎಂದರು.
ಜಿಲ್ಲಾ ಆರೋಗ್ಯಧಿಕಾರಿ ರಾಮಚಂದ್ರ ಬಾಯಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಿಸುಮಾರು 610 ಮೆಡಿಕಲ್ ಶಾಪ್ಗಳಿದ್ದು ವೈದ್ಯರ ಚೀಟಿಯಿಲ್ಲದೇ ಜ್ವರ, ಕೆಮ್ಮು ,ಶೀತದ ಮಾತ್ರೆಗಳನ್ನು ತೆಗೆದುಕೊಂಡಿರುವವರ ಹೆಸರು, ವಿಳಾಸ, ದೂರವಾಣಿ ಸಂಖ್ಯೆಗಳನ್ನೊಳಗೊಂಡಿರುವ ಮಾಹಿತಿಯನ್ನು ಪ್ರತಿದಿನ ಮೆಡಿಕಲ್ಶಾಪ್ನವರು ಕಡ್ಡಾಯವಾಗಿ ದಾಖಲಿಸಿಕೊಂಡು, ಸಕಾರದಿಂದ ಬಿಡುಗಡೆ ಮಾಡಿರುವ ಆಪ್ನಲ್ಲಿ ಅಪ್ಲೋಡ್ ಮಾಡಿವರದಿ ನೀಡಬೇಕು. ಅಂತವರನ್ನು ಸರಕಾರ ಗುರಿತಿಸಿ ಅವರ ಗಂಟಲು ದ್ರವ ಪಡೆದು ಪರೀಕ್ಷೆ ನಡೆಸಲಾಗುವುದು ಎಂದರು.
ಮಾಸ್ಕ್ ಡೇ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿಯಿಂದ ಸ್ಟೇಟ್ ಬ್ಯಾಂಕ್ರವರೆಗೆ ಜಾಥಾ ಸಾಗಿತು. ಕಾರ್ಯಕ್ರಮದಲ್ಲಿ ಮೇಯರ್ ದಿವಾಕರ್ ಪಾಂಡೇಶ್ವರ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪಾ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.