ಸಾವಿರಾರು ಜನ ಸಾಕ್ಷಿಯಾದ ಉಡುಪಿ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ

Spread the love

ಸಾವಿರಾರು ಜನ ಸಾಕ್ಷಿಯಾದ ಉಡುಪಿ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ

ಉಡುಪಿ: ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ ಹಾಗೂ ಕ್ರಿಸ್ತರಾಜರ ಮಹೋತ್ಸವ ಭಾನುವಾರ ಕಲ್ಯಾಣಪುರದಲ್ಲಿ ಜರುಗಿತು.

ಪರಮಪ್ರಸಾದ ಮೆರವಣಿಗೆ ಹಾಗೂ ಸಂತೆಕಟ್ಟೆ ಮೌಂಟ್ ರೋಸರಿ ಚರ್ಚಿನಲ್ಲಿ ನಡೆದ ಕ್ರಿಸ್ತರಾಜರ ಮಹೋತ್ಸವದ ಪ್ರಧಾನ ಬಲಿಪೂಜೆಯ ನೇತೃತ್ವವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ.ವಂ.ಡಾ. ಜೆರಾಲ್ಡ್‌ ಐಸಾಕ್‌ ಲೋಬೊ ವಹಿಸಿ ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು.

ಪವಿತ್ರ ಬಲಿಪೂಜೆಯ ಬಳಿಕ ಪರಮಪ್ರಸಾದವನ್ನು ವಿಶೇಷವಾಗಿ ಅಲಂಕರಿಸಲ್ಪಟ್ಟ ತೆರೆದ ವಾಹನದಲ್ಲಿ ಸಂತೆಕಟ್ಟೆ ಮೌಂಟ್ ರೋಸರಿ ಚರ್ಚಿನಿಂದ ಮಿಲಾಗ್ರಿಸ್ ಕ್ಯಾಥೆಡ್ರಲ್ ತನಕ ರಾಜಬೀದಿಯಲ್ಲಿ ಮೆರವಣಿಗೆಯ ಮೂಲಕ ಕೊಂಡೊಯ್ದು ಬಹಿರಂಗ ಗೌರವ ಸಲ್ಲಿಸಲಾಯಿತು.

ಮಿಲಾಗ್ರಿಸ್ ಕ್ಯಾಥೆಡ್ರಲಿಗೆ ತಲುಪಿದ ಬಳಿಕ ಪಾಂಗಾಳ ಸಂತ ಜೋನರ ದೇವಾಲಯದ ಸಹಾಯಕ ಧರ್ಮಗುರು ಹಾಗೂ ಧರ್ಮಪ್ರಾಂತ್ಯದ ಉಜ್ವಾಡ್ ಪತ್ರಿಕೆಯ ನಿಯೋಜಿತ ಸಂಪಾದಕರಾದ ವಂದನೀಯ ರೋಯ್ಸನ್ ಫೆರ್ನಾಂಡಿಸ್ ಅವರು ಪರಮ ಪ್ರಸಾದ ಆರಾಧನೆಯನ್ನು ನೆರವೇರಿಸಿದರು.

ತಮ್ಮ ಪ್ರವಚನದಲ್ಲಿ ವಂದನೀಯ ರೋಯ್ಸನ್ ಫೆರ್ನಾಂಡಿಸ್ ಪರಮ ಪ್ರಸಾದವು ಏಕತೆ, ತ್ಯಾಗ ಹಾಗೂ ಕ್ಷಮೆಯ ಸಂಕೇತವಾಗಿದ್ದು, ನಿಜವಾದ ಪ್ರೀತಿಯು ನಮ್ಮ ನೆರೆಹೊರೆಯವರಲ್ಲಿ ತೋರಿಸುವುದರಲ್ಲಿ ಅಡಗಿದ್ದು, ಯೇಸು ಸ್ವಾಮಿಯು ಶಿಲುಬೆಗೇರಿ ಅದನ್ನು ನಮಗೆ ತೋರಿಸಿಕೊಟ್ಟಿರುತ್ತಾರೆ. ಪರಮ ಪ್ರಸಾದವು ನಮ್ಮೆಲ್ಲರ ಭರವಸೆಯ ಬೆಳಕಾಗಿದ್ದು ಅದರ ಮೇಲೆ ನಮ್ಮ ನಂಬಿಕೆ ಇಟ್ಟವರನ್ನು ಎಂದಿಗೂ ಕೂಡ ಕೈ ಬಿಡಲ್ಲ.

ನಾವು ತೋರಿಸುವ ಪ್ರೀತಿ ಕೇವಲ ತೋರ್ಪಡಿಕೆಯ ಪ್ರೀತಿಯಾಗಿರದೆ ಅದನ್ನು ಕಾರ್ಯಕ್ರಮದ ಮೂಲಕ ಮಾಡಿ ತೋರಿಸುವಂತಿರಬೇಕು. ಪ್ರೀತಿ ಸೇವೆ ಕ್ರೈಸ್ತ ಧರ್ಮದ ಮೂಲ ತತ್ತ್ವವಾಗಿದ್ದು, ಅದನ್ನು ನಮ್ಮ ನೆರೆಹೊರೆಯವರಲ್ಲಿ ತೋರ್ಪಡಿಸಲು ಹಿಂಜರಿಯಬಾರದು. ಪರಮ ಪ್ರಸಾದ ಮೂಲಕ ಯೇಸುವು ನಮ್ಮೊಂದಿಗಿದ್ದಾರೆ ಎಂಬ ನಂಬಿಕೆಯೊಂದಿಗೆ ಬದುಕುವ ನಾವು ನಮ್ಮ ಜೀವನದಲ್ಲಿ ಕ್ಷಮೆ ಪ್ರೀತಿ, ಸೇವೆಯ ಮೂಲಕ ದೈವ ಸಾಮ್ರಾಜ್ಯವನ್ನು ಕಟ್ಟುವಲ್ಲಿ ಪಣತೊಡುವಂತಾಗುವಂತೆ ತಮ್ಮ ಪ್ರವಚನದಲ್ಲಿ ಕರೆ ನೀಡಿದರು.

ಉಡುಪಿ ಧರ್ಮಪ್ರಾಂತ್ಯವ್ಯಾಪ್ತಿಯ 52 ಚರ್ಚ್‌ಗಳಿಂದ ಸುಮಾರು 3000 ಕ್ಕೂ ಅಧಿಕ ಮಂದಿ ಭಕ್ತಾದಿಗಳು, 50ಕ್ಕೂ ಅಧಿಕ ಧರ್ಮಗುರುಗಳು, 100ಕ್ಕೂ ಅಧಿಧಕ ಧರ್ಮಭಗಿನಿಯರು ಭಾಗವಹಿಸಿದ್ದರು.

ಉಡುಪಿ ಧರ್ಮಪ್ರಾಂತ್ಯದ ವಿಕಾರ್‌ ಜನರಲ್‌ ಮೊನ್ಸಿಂಜ್ಞೋರ್‌ ಬ್ಯಾಪ್ಟಿಸ್ಟ್‌ ಮಿನೇಜಸ್‌, ಕುಲಪತಿಗಳಾದ ವಂ|ಸ್ಟ್ಯಾನಿ ಬಿ ಲೋಬೊ, ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಇದರ ರೆಕ್ಟರ್ ವಂ| ಡಾ|ಲೊರೇನ್ಸ್ ಡಿಸೋಜಾ, ಶಿರ್ವ ವಲಯ ಪ್ರಧಾನ ಧರ್ಮಗುರು ವಂ|ಡೆನಿಸ್ ಡೆಸಾ, ಕಾರ್ಕಳ ವಲಯ ಪ್ರಧಾನ ಧರ್ಮಗುರು ವಂ| ಜೊಸ್ವಿ ಫೆರ್ನಾಂಡಿಸ್, ಉಡುಪಿ ವಲಯ ಪ್ರಧಾನ ಧರ್ಮಗುರು ವಂ| ವಲೇರಿಯನ್ ಮೆಂಡೊನ್ಸಾ, ಸಂತೆಕಟ್ಟೆ ಮೌಂಟ್ ರೋಸರಿ ಚರ್ಚಿನ ಪ್ರಧಾನ ಧರ್ಮಗುರು ವಂ|ಡಾ|ಲೆಸ್ಲಿ ಡಿಸೋಜ, ಮಿಲಾಗ್ರಿಸ್ ಕ್ಯಾಥೆಡ್ರಲ್ ಇದರ ಸಹಾಯಕ ಧರ್ಮಗುರು ವಂ|ಕೆನ್ಯೂಟ್ ನೊರೊನ್ಹಾ, ಅತ್ತೂರು ಸಂತ ಲಾರೆನ್ಸ್ ಬಾಸಿಲಿಕದ ವಂ | ಜೋರ್ಜ್ ಡಿ’ಸೋಜಾ ಹಾಗೂ ಇತರರು ಉಪಸ್ಥಿತರಿದ್ದರು.


Spread the love