ಸಾಸ್ತಾನ ಸಿಎ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಿಗೆ ಜಯ
ಉಡುಪಿ: ಅಧಿಕಾರ ಹಂಚಿಕೆಯ ಸೂತ್ರದ ವಿಚಾರದಲ್ಲಿ ನಿರ್ದೇಶಕರುಗಳ ನಡುವೆ ಉಂಟಾದ ಗೊಂದಲಗಳಿಂದ ಮಧ್ಯಂತರ ಚುನಾವಣೆಗೆ ಕಾರಣವಾಗಿ ಬಹು ನಿರೀಕ್ಷೆ ಹಾಗೂ ಜಿದ್ದಾಜಿದ್ದಿಯ ಕಣವಾದ ಸಾಸ್ತಾವ ಸಹಕಾರಿ ವ್ಯವಸಾಯಿಕ ಸಂಘದ ಚುನಾವಣೆ ಭಾನುವಾರ ನಡೆದಿದ್ದು, 13 ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ ಬೆಂಬಲಿತ ಏಳು ಅಭ್ಯರ್ಥಿಗಳು ಗೆಲ್ಲುವ ಮೂಲಕ ಅಧಿಕಾರವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಹಿಂದಿನ ಆಡಳಿತ ಮಂಡಳಿಯಲ್ಲಿ ಅಧಿಕಾರ ಹಂಚಿಕೆಯ ಕುರಿತು ನಿರ್ದೇಶಕರುಗಳ ನಡುವೆ ಗೊಂದಲ ಉಂಟಾಗಿ ಸಹಕಾರ ಇಲಾಖೆಯ ನಿರ್ದೇಶನದಂತೆ ಆಡಳಿತ ಮಂಡಳಿ ಬರ್ಖಾಸ್ತುಗೊಂಡು, ವಿಶೇಷ ಅಧಿಕಾರಿ ನೇಮಕವಾಗಿತ್ತು. ಅದರಂತೆ ಭಾನುವಾರ ನೂತನ ಆಡಳಿತ ಮಂಡಳಿ ರಚನೆಗೆ ಚುನಾವಣೆ ನಡೆದಿತ್ತು.
ಈ ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ಪ್ರತಾಪ್ ಶೆಟ್ಟಿಯವರು ಇತ್ತೀಚೆಗೆ ಬಿಜೆಪಿ ಪಕ್ಷವನ್ನು ಸೇರಿದ್ದು ಅವರ ನೇತೃತ್ವದ 13 ಮಂದಿಯ ತಂಡ ಹಾಗೂ ಹಿಂದಿನ ನಿರ್ದೇಶಕರಾಗಿದ್ದ ಶ್ರೀಧರ ಪಿ ಎಸ್ ಅವರ ಕಾಂಗ್ರೆಸ್ ನೇತೃತ್ವದ ತಂಡದ ನಡುವೆ ತೀವ್ರ ಪೈಪೋಟಿ ಇತ್ತು.
ಚುನಾವಣೆಯು ಸಾಸ್ತಾನ ಗುಂಡ್ಮಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, ಸಂಜೆ ವೇಳೆಗೆ ಚುನಾವಣಾಧಿಕಾರಿಗಳು ಫಲಿತಾಂಶವನ್ನು ಘೋಷಣೆ ಮಾಡಿದರು.
ಕಾಂಗ್ರೆಸ್ ಬೆಂಬಲಿತ ರಾಜಶೇಖರ, ಶ್ರೀಧರ ಪಿ ಎಸ್ (ಪಾಂಡೇಶ್ವರ ಸಾಮಾನ್ಯ ಕ್ಷೇತ್ರ), ಆನಂದ ಗಾಣಿಗ (ಐರೋಡಿ ಸಾಮಾನ್ಯ ಕ್ಷೇತ್ರ), ಸುರೇಶ್ ಅಡಿಗ (ಬಾಳೆಕುದ್ರು ಸಾಮಾನ್ಯ ಕ್ಷೇತ್ರ) ಡೆರಿಕ್ ಡಿಸೋಜ (ಹಿಂದುಳಿದ ವರ್ಗ ಮೀಸಲು ಕ್ಷೇತ್ರ), ಕಮಲ ಆಚಾರ್ ಮತ್ತು ಗೀತಾ ಶ್ರೀಪತಿ ಅಧಿಕಾರಿ (ಮಹಿಳಾ ಮೀಸಲು ಕ್ಷೇತ್ರದ ಅಭ್ಯರ್ಥಿಗಳು) ಜಯಶಾಲಿಯಾಗಿದ್ದಾರೆ.
ಬಿಜೆಪಿ ಬೆಂಬಲಿತ ಗೋವಿಂದ ಪೂಜಾರಿ, ರಮೇಶ್ ಕಾರಂತ, ಸಂತೋಷ ಪೂಜಾರಿ, ಉದಯ ಮರಕಾಲ, ಶೇಖರ್ ಗದ್ದೆ ಮನೆ ಚಂದ್ರ ಹಾಸ ನಾಯಕ್ ಜಯಶಾಲಿಯಾಗಿದ್ದಾರೆ.
ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರತಾಪ್ ಶೆಟ್ಟಿ ಮತ್ತು ತಾಲೂಕು ಪಂಚಾಯತ್ ಸದಸ್ಯೆ ಜ್ಯೋತಿ ಉದಯ್ ಕುಮಾರ್ ಕೂಡ ಸೋಲನ್ನು ಅನುಭವಿಸಿದ್ದಾರೆ.
ಸತತ ಸೋಲುಗಳಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಚುನಾವಣಾ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಸಂಚಾಲಕಿ ರೋಶನಿ ಒಲಿವರ್, ವೈಬಿ ರಾಘವೇಂದ್ರ ಹಾಗೂ ಇತರರ ನೇತೃತ್ವದಲ್ಲಿ ಸಂಭ್ರಮಾಚರಣೆ ಮಾಡಿದರು.