ಸಿಎಎ ವಿರೋಧಿ ಸಭೆ ಉದ್ಘಾಟನೆಯಲ್ಲಿ ಭಾಗವಹಿಸಲ್ಲ- ಪದ್ಮಶ್ರೀ ಹಾಜಬ್ಬ ಸ್ಪಷ್ಟನೆ
ಮಂಗಳೂರು: ಕರ್ನಾಟಕ ಮುಸ್ಲಿಂ ಜಮಾತ್ ಗುರುವಾರ ಉಡುಪಿಯ ಲಿಗಾಡೋ ಹೋಟೆಲ್ ನಲ್ಲಿ ಆಯೋಜಿಸಿರುವ ಪೌರತ್ವ ಕಾಯ್ದೆ ವಿರುದ್ಧದ ಪ್ರಜಾ ಭಾರತ ಸಭೆಗೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಹಾಜಬ್ಬ ಅವರನ್ನು ಉದ್ಘಾಟಕರಾಗಿ ಆಹ್ವಾನಿಸಿದ್ದಕ್ಕೆ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹರೇಕಳ ಹಾಜಬ್ಬ ಅವರು ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತು ಮಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪದ್ಮಶ್ರೀ ಹಾಜಬ್ಬ ಅವರು ಉಡುಪಿಯಲ್ಲಿ ಸನ್ಮಾನ ಕಾರ್ಯಕ್ರಮ ಇದೆಯೆಂದು ಸ್ನೇಹಿತರು ಹೇಳಿದ್ದರು ಅದರಂತೆ ನಾನು ಕಾರ್ಯಕ್ರಮಕ್ಕೆ ಬರುತ್ತೇನೆಂದು ಒಪ್ಪಿಕೊಂಡಿದ್ದೆ ಆದರೆ ನಾಳೆಯ ಕಾರ್ಯಕ್ರಮಕ್ಕೆ ಹೋಗುವುದಕ್ಕೆ ಆಗುವುದಿಲ್ಲ. ನನ್ನ ಶಾಲೆಯಲ್ಲಿ ಎನ್.ಎಸ್.ಎಸ್ ಶಿಬಿರ ಆಗುತ್ತಿದೆ ಆದ್ದರಿಂದ ಪ್ರಜಾ ಭಾರತ ಕಾರ್ಯಕ್ರಮಕ್ಕೆ ತೆರಳಲು ಅನಾನುಕೂಲ ಆಗಿರುವುದರಿಂದ ಹೋಗುವುದಿಲ್ಲ ಎಂದರು.
ನನಗೆ ಶಾಲೆ ನಿರ್ಮಿಸಲು ದೇಶದ, ರಾಜ್ಯದ ಲಕ್ಷಾಂತರ ಜನ ಸಹಾಯ ಮಾಡಿದ್ದಾರೆ ಆದ್ದರಿಂದ ನನಗೆ ಎಲ್ಲರೂ ಒಂದೇ, ಯಾವುದೇ ಭೇದ ಭಾವ ಇಲ್ಲ ಆಯೋಜಕರಿಗೆ ಕರೆ ಮಾಡಿ ಬರುವುದಿಲ್ಲ ಎಂದು ಹೇಳಿದ್ದೇನೆ ಎಂದರು.
ಪೌರತ್ವ ಕಾಯ್ದೆ ವಿರುದ್ಧದ ಪ್ರಜಾ ಭಾರತ ಸಭೆಗೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಹಾಜಬ್ಬ ಅವರನ್ನು ಉದ್ಘಾಟಕರಾಗಿ ಆಹ್ವಾನಿಸಿದ್ದಕ್ಕೆ ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಅಹಮ್ಮದ್ ಸಹಿತ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಹರೇಕಳ ಹಾಜಬ್ಬ ಜಾತ್ಯಾತೀತವಾಗಿ ರಾಜಕೀಯವಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ವ್ಯಕ್ತಿಯಾಗಿದ್ದಾರೆ. ಅವರನ್ನು ರಾಜಕೀಯ ಹೋರಾಟಗಳಿಗೆ ಬಳಸಿಕೊಳ್ಳಬಾರದು ಎಂದು ಅನ್ಸಾರ್ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು. ಕಾರ್ಯಕ್ರಮದ ಬಗ್ಗೆ ಹಾಜಬ್ಬರಿಗೆ ಸ್ಪಷ್ಟ ಮಾಹಿತಿ ಇಲ್ಲ. ಪ್ರಜಾ ಭಾರತ ಕಾರ್ಯಕ್ರಮ ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆಯ ವಿರುದ್ಧ ನಡೆಯುತ್ತಿರುವ, ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸುವ ಕಾರ್ಯಕ್ರಮ ಆಗಿದೆ. ಇದರಲ್ಲಿ ಹರೇಕಳ ಹಾಜಬ್ಬ ಅವರು ಭಾಗವಹಿಸಿದರೆ ಅವರ ವಿರುದ್ಧ ಪೌರತ್ವ ಕಾಯ್ದೆ ಪರವಾಗಿರುವ ಜನರು ತಿರುಗಿ ಬೀಳುವ ಸಾಧ್ಯತೆ ಇದೆ ಎಂದು ಅನ್ಸಾರ್ ವಿರೋಧ ವ್ಯಕ್ತಪಡಿಸಿದ್ದರು.