ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ನಿಧನ
ತುಮಕೂರು : ಪದ್ಮಭೂಷಣ, ಕರ್ನಾಟಕ ರತ್ನ, ಕಾಯಕ ಯೋಗಿ, ಶತಾಯುಷಿ ಶ್ರೀ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ಸೋಮವಾರ ಬೆಳಗ್ಗೆ 11:44 ಗಂಟೆಗೆ ನಿಧನರಾಗಿದ್ದಾರೆ. ಅವರಿಗೆ 111 ವರ್ಷ ವಯಸ್ಸಾಗಿತ್ತು.
ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಸ್ವಾಮೀಜಿ ಇತ್ತೀಚೆಗೆ ಚೆನ್ನೈಯ ರೇಲಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಲ್ಲಿ ಒಂದಿಷ್ಟು ಚೇತರಿಸಿಕೊಂಡ ಬಳಿಕ ಸ್ವಾಮೀಜಿಯ ಇಚ್ಛೆಯಂತೆ ಅವರನ್ನು ಶ್ರೀ ಸಿದ್ಧಗಂಗಾ ಮಠಕ್ಕೆ ಕರೆತರಲಾಗಿತ್ತು. ರಾಜ್ಯ ಸರಕಾರ ಸ್ವಾಮೀಜಿ ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಮಠದಲ್ಲೇ ಸೂಕ್ತ ಚಿಕಿತ್ಸಾ ಸೌಲಭ್ಯ ಕಲ್ಪಿಸಿತ್ತು. ಆ ಬಳಿಕ ಸ್ವಾಮೀಜಿಯ ಆರೋಗ್ಯದಲ್ಲಿ ಆಗಾಗ್ಗೆ ಏರುಪೇರು ಕಾಣಿಸಿಕೊಳ್ಳುತ್ತಿದ್ದರೂ ಅವರು ಚೇತರಿಸಿಕೊಳ್ಳುತ್ತಿದ್ದರು. ಆದರೆ ರವಿವಾರ ರಾತ್ರಿಯಿಂದ ಅವರ ಆರೋಗ್ಯದಲ್ಲಿ ಭಾರೀ ಏರುಪೇರು ಕಾಣಿಸಿಕೊಂಡಿತ್ತು. ಉಸಿರಾಟ ಮತ್ತು ರಕ್ತದೊತ್ತಡದಲ್ಲಿ ತೀವ್ರ ಏರುಪೇರಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದ ಅವರಿಗೆ ಸಕಲ ಚಿಕಿತ್ಸೆ ವ್ಯವಸ್ಥೆ ನೀಡಿದರೂ ಫಲಪ್ರದವಾಗದೆ ಸ್ವಾಮೀಜಿ ಕೊನೆಯುಸಿರೆಳೆದಿದ್ದಾರೆ.
ಕರ್ನಾಟಕ ರತ್ನ, ಕಾಯಕ ಯೋಗಿ, ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ಕಳಕಳಿಯಿರುವ ಡಾ.ಶಿವಕುಮಾರ ಸ್ವಾಮೀಜಿ, ಮುಂದಿನ ಪೀಳಿಗೆಯ ಬೆಳವಣಿಗೆಗಾಗಿ ಪಣತೊಟ್ಟವರು. ಸಮಾಜದ ಎಷ್ಟೋ ಗಣ್ಯರ ಬಾಲ್ಯ ಜೀವನಗಳ ಪರಿವರ್ತನೆಗೆ ಕಾರಣರಾದವರು, ತಮ್ಮ ಮಠದಲ್ಲಿ ಸದಾ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಆಶ್ರಯವನ್ನಿತ್ತು ತ್ರಿವಿಧ ದಾಸೋಹವನ್ನು ಸತತವಾಗಿ ನಡೆಸುತ್ತಾ ಬಂದಿದ್ದವರು.
ಮಾಗಡಿ ತಾಲೂಕಿನ ವೀರಾಪುರದ ದಂಪತಿ ಹೊನ್ನೇಗೌಡ ಮತ್ತು ಗಂಗಮ್ಮ ದಂಪತಿಯ ಪುತ್ರನಾಗಿ ಎಪ್ರಿಲ್ 1, 1908ರಲ್ಲಿ 13ನೇ ಮಗನಾಗಿ ಜನಿಸಿದ ಶಿವಕುಮಾರ ಸ್ವಾಮೀಜಿ ಇವರು ಎಲ್ಲರಿಗಿಂತಲೂ ಕಿರಿಯರಾಗಿದ್ದರು. ವೀರಾಪುರದಲ್ಲಿಯೇ ಇದ್ದ ಕೂಲಿಮಠದಲ್ಲಿ ಮರಳಿನ ಮೇಲೆ ಅಕ್ಷರ ತಿದ್ದುವ ಮೂಲಕ ಶಿವಣ್ಣನ ಶೈಕ್ಷಣಿಕ ಜೀವನ ಆರಂಭವಾಯಿತು.
ಆನಂತರ ಪ್ರಾಥಮಿಕ ವಿದ್ಯಾಭ್ಯಾಸಕ್ಕಾಗಿ ಪಕ್ಕದಲ್ಲಿಯೇ ಇರುವ ಪಾಲನಹಳ್ಳಿಯ ಶಾಲೆಗೆ ದಾಖಲಾದರು. ತಮ್ಮ ಪ್ರಾಥಮಿಕ ಶಾಲಾ ದಿನಗಳಲ್ಲೇ ತಾಯಿಯನ್ನು ಕಳೆದುಕೊಡ ಶಿವಕುಮಾರ ಆನಂತರ ಬೆಳೆದಿದ್ದು ಅಕ್ಕನ ಆಸರೆಯಲ್ಲಿ. ತುಮಕೂರು ಬಳಿ ಇರುವ ನಾಗವಲ್ಲಿಯಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿದ ಶಿವಕುಮಾರ 1922ರಿಂದ ತುಮಕೂರಿನ ಸರಕಾರಿ ಪ್ರೌಢಶಾಲೆಯಲ್ಲಿ ಕಲಿತು 1926ರಲ್ಲಿ ಮೆಟ್ರಿಕ್ಯುಲೇಶನ್ ಪಡೆದಿದ್ದರು. ಶಿವಕುಮಾರ ಅವರಿಗೆ 1927ರಲ್ಲಿ ಆಗಿನ ಸಿದ್ದಗಂಗಾ ಮಠಾಧಿಪತಿ ಶ್ರೀ ಉದ್ದಾನ ಶಿವಯೋಗಿಗಳ ಒಡನಾಟ ಆಯಿತು. ಅದೇ ವರ್ಷ ಅವರು ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿದರು. ಬೆಂಗಳೂರಿನಲ್ಲಿ ‘ರಾವ್ ಬಹದ್ದೂರ್ ಧರ್ಮಪ್ರವರ್ತಕ ಶ್ರೀ ಗುಬ್ಬಿ ತೋಟದಪ್ಪಧರ್ಮ ಛತ್ರ’ದಲ್ಲಿ ಉಳಿದುಕೊಂಡು, ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ್ದರು. ವಿದ್ಯಾಭ್ಯಾಸದೊಂದಿಗೆ ಸಿದ್ದಗಂಗಾ ಮಠದ ಒಡನಾಟವಂತೂ ಮುಂದುವರಿದೇ ಇತ್ತು. ಮಠಾಧಿಪತಿಯಾಗಿ ಶಿವಕುಮಾರ ಶ್ರೀ ಈ ನಡುವೆ ಸಿದ್ದಗಂಗಾ ಮಠದ ಉದ್ಧಾನ ಶಿವಯೋಗಿಗಳ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರು 1930ರ ಜ.16ರಂದು ಆಕಸ್ಮಿಕವಾಗಿ ನಿಧನರಾದರು. ಆಗ ಶ್ರೀ ಉದ್ಧಾನ ಶಿವಯೋಗಿ ಮಠದ ಉತ್ತರಾಧಿಕಾರಿಯಾಗಿ ಯಾರನ್ನು ಆಯ್ಕೆ ಮಾಡುವುದೆಂಬ ಚಿಂತನೆ ನಡೆಸಿದಾಗ ಭಕ್ತರ ವಲಯದಲ್ಲಿ ಶಿವಕುಮಾರ ಅವರ ಹೆಸರು ಕೇಳಿಬಂದಿತ್ತು. ಅಷ್ಟರಲ್ಲಾಗಲೇ ಶಿವಕುಮಾರ ಅವರ ಹಿನ್ನೆಲೆಯ ಅರಿವಿದ್ದ ಉದ್ಧಾನ ಶ್ರೀ ಅವರು ಶಿವಕುಮರ ಅವರನ್ನೇ ಈ ಮಠದ ಉತ್ತರಾಧಿಕಾರಿ ಎಂದು ಘೋಷಿಸಿ ಮಾರ್ಚ್ 30ರಂದು ಶ್ರೀಮಠದ ಜವಬ್ದಾರಿ ವಹಿಸಿಕೊಟ್ಟಿದ್ದರು.
ಸನ್ಯಾಸತ್ವ ಸ್ವೀಕಾರದ ನಂತರವೂ ವಿದ್ಯಾಭ್ಯಾಸ ಮುಂದುವರಿಸಿದ ಶಿವಣ್ಣನವರು ಮತ್ತೆ ಬೆಂಗಳೂರಿಗೆ ಬಂದು ಸನ್ಯಾಸತ್ವದ ರೀತಿ ರಿವಾಜುಗಳನ್ನು ಸಂಪ್ರದಾಯಬದ್ಧವಾಗಿ ಪಾಲಿಸುತ್ತ ಶಿಸ್ತುಬದ್ಧ ವಿದ್ಯಾರ್ಥಿಯಾಗಿ ತಮ್ಮ ಒಡನಾಡಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಮುಂದೆ ಶ್ರೀ ಉದ್ಧಾನ ಶಿವಯೋಗಿ ನಿಧನರಾದಾಗ ಮಠದ ಸಕಲ ಆಡಳಿತವೂ, ಮಠದ ವಿದ್ಯಾರ್ಥಿಗಳ, ಶಿಕ್ಷಣ ಸಂಸ್ಥೆಗಳ ಯೋಗಕ್ಷೇಮದ ಜವಾಬ್ದಾರಿಯೂ ಶಿವಕುಮಾರ ಸ್ವಾಮೀಜಿಗೆ ಹಸ್ತಾಂತರವಾಯಿತು.
ಜಾತ್ಯತೀತ, ಧರ್ಮಾತೀತ ಶಿಕ್ಷಣ ಸೇವೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯವು ಶಿವಕುಮಾರ ಶ್ರೀಗಳಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. 100ನೇ ವರ್ಷದ ಹುಟ್ಟು ಹಬ್ಬ ಮತ್ತು ಕರ್ನಾಟಕ ಸುವರ್ಣ ಮಹೋತ್ಸವ ಸಮಯದಲ್ಲಿ ಅವರ ಜೀವಮಾನ ಸಮಾಜ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರಕಾರ ರಾಜ್ಯದ ಮಹೋನ್ನತ ಪ್ರಶಸ್ತಿಯಾದ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಶ್ರೀಗಳಿಗೆ ನೀಡಿ ಗೌರವಿಸಿದೆ. 2015ರಲ್ಲಿ ಭಾರತ ಸರಕಾರ ‘ಪದ್ಮಭೂಷಣ’ ಪ್ರಶಸ್ತಿ ನೀಡಿ ಗೌರವಿಸಿದೆ.
ಸಿದ್ಧಗಂಗಾ ಮಠದಲ್ಲಿ ಸೋಮವಾರ ಬೆಳಗ್ಗೆ ನಿಧನರಾದ ಕರ್ನಾಟಕ ರತ್ನ ಡಾ. ಶಿವಕುಮಾರ ಶ್ರೀಗಳ ಪಾರ್ಥಿವ ಶರೀರದ ಕ್ರೀಯಾ ಸಮಾಧಿ ಮಂಗಳವಾರ ಸಂಜೆ 4:30ಕ್ಕೆ ನಡೆಯಲಿದೆ.
ಶ್ರೀಗಳ ನಿಧನದಿಂದ ಧಾರ್ಮಿಕ ಕ್ಷೇತ್ರಕ್ಕೆ ಭರಿಸಲಾರದ ನಷ್ಟ ಉಂಟಾಗಿದೆ ಎಂದು ಬಣ್ಣಿಸಿರುವ ಮುಖ್ಯ ಎಚ್ ಡಿ ಕುಮಾರಸ್ವಾಮಿ ಅವರು ಶ್ರೀಗಳ ಗೌರವಾರ್ಥ ಮಂಗಳವಾರ ರಾಜ್ಯಾದ್ಯಂತ ಸರಕಾರಿ ರಜೆ ಘೋಷಿಸಲಾಗಿದೆ. ನಾಳೆ ರಾಜ್ಯಾದ್ಯಂತ ಶಾಲೆ, ಕಾಲೇಜುಗಳು, ಸರಕಾರಿ ಕಚೇರಿಗಳು ತೆರೆದಿರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ. 3 ದಿನಗಳ ಕಾಲ ರಾಜ್ಯಾದ್ಯಂತ ಶೋಕಾಚರಣೆ ನಡೆಯಲಿದೆ.
ತುಮಕೂರು ನಗರದ ಎಲ್ಲಾ ಶಾಲಾ ಕಾಲೇಜುಗಳಿಗೆ ಸೋಮವಾರ ಮಧ್ಯಾಹ್ನದಿಂದಲೇ ರಜೆ ಘೋಷಿಸಲಾಗಿದೆ . ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ತುಮಕೂರು ಜಿಲ್ಲೆಯ ಎಲ್ಲ ಗ್ರಾಮಗಳಿಂದಲೂ ಉಚಿತ ಸರಕಾರಿ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಸಿಎಂ ಹೇಳಿದ್ದಾರೆ.