ಸಿದ್ಧರಾಮಯ್ಯನವರೇ ನಿಮಗೆ ಬೇಡವಾದರೆ ಕಣ್ಣು ಮುಚ್ಚಿಕೊಳ್ಳಿ. ತಡೆಯುವ ವ್ಯರ್ಥ ಪ್ರಯತ್ನ ಬೇಡ: ಡಿ.ವೇದವ್ಯಾಸ ಕಾಮತ್
ಮಂಗಳೂರು: ಸಾಲು ಸಾಲು ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಿದ್ದಾಗ ರಾಜ್ಯ ಸರ್ಕಾರಕ್ಕೆ ಬೇಡವಾಗಿದ್ದ ಶಾಂತಿ ಈಗ ಬಿಜೆಪಿ ಯುವ ಮೋರ್ಚಾ ಬೈಕ್ ರ್ಯಾಲಿ ಮಾಡಬೇಕೆನ್ನುವಾಗ ಧಿಡೀರನೇ ಬೇಕಾಯಿತೇ? ಅಷ್ಟಕ್ಕೂ ಈ ರ್ಯಾಲಿ ರಾಜ್ಯಾದ್ಯಂತ ಶಾಂತಿ ಸ್ಥಾಪನೆಗಾಗಿಯೇ ನಡೆಸಲ್ಪಡುತ್ತಿರುವುದರಿಂದ ಸಿದ್ಧರಾಮಯ್ಯನವರಿಗೆ ಇದರಲ್ಲಿ ಅಶಾಂತಿಯ ಭಯ ಮೂಡಲು ಕಾರಣವೇನು? ಎಂದು ಮಂಗಳೂರು ಚಲೋ ಬೈಕ್ ರ್ಯಾಲಿ ತಡೆಯಲು ಇನ್ನಿಲ್ಲದಂತೆ ಯತ್ನಿಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯವರ ವಿರುದ್ಧ ಭಾರತೀಯ ಜನತಾ ಪಾರ್ಟಿ ಮಂಗಳೂರು ದಕ್ಷಿಣ ಮಂಡಲದ ಅಧ್ಯಕ್ಷ ಡಿ.ವೇದವ್ಯಾಸ ಕಾಮತ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ಈ ದೇಶದ ಜನರ ಸಂವಿಧಾನಬದ್ಧ ಹಕ್ಕು. ಅದನ್ನು ಹತ್ತಿಕ್ಕಲು ಯತ್ನಿಸುವುದು ಅಕ್ಷಮ್ಯ ಅಪರಾಧ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಸಿದ್ಧರಾಮಯ್ಯನವರು ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದರು. ಆಗ ಅದಕ್ಕೆ ಸಂಪೂರ್ಣ ರಕ್ಷಣೆಯನ್ನು ಒದಗಿಸಲಾಗಿತ್ತು. ಅದು ಸರ್ಕಾರದ ಜವಾಬ್ದಾರಿ ಕೂಡಾ ಹೌದು. ಈಗ ಬಿಜೆಪಿ ಯುವಮೋರ್ಚಾ ಪ್ರತಿಭಟನೆ ಮಾಡುವಾಗ ಸಿದ್ಧರಾಮಯ್ಯ ಸರ್ಕಾರ ರಕ್ಷಣೆ ಬಿಡಿ, ಅನುಮತಿಯೂ ನೀಡಲೂ ಮೀನಮೇಷ ಎಣಿಸುತ್ತಿದೆ. ಪೊಲೀಸ್ ಇಲಾಖೆ ಮೂಲಕ ಬೆದರಿಕೆ ಹಾಕಿಸುತ್ತಿದೆ. ಇದು ಸ್ವತಃ ರಾಜ್ಯ ಸರ್ಕಾರಕ್ಕೆ ನಾಚಿಕೆಗೇಡು.
ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ರಾಜ್ಯ ಬಿಜೆಪಿ ಯುವಮೋರ್ಚಾ ವತಿಯಿಂದ ನಡೆಸಲ್ಪಡುತ್ತಿರುವ ಮಂಗಳೂರು ಚಲೋ ಬೈಕ್ ರ್ಯಾಲಿ ಮಂಗಳೂರಿಗೆ ತಲುಪಬಾರದು ಎಂಬುದು ಸಿದ್ಧರಾಮಯ್ಯ ಸರ್ಕಾರದ ಸವಾಲು ಆದರೆ ಆ ಸವಾಲಿಗೆ ಉತ್ತರವಾಗಿ ಬೈಕ್ ರ್ಯಾಲಿ ಯನ್ನು ಮಂಗಳೂರಿಗೆ ತಂದು ನಿಲ್ಲಿಸಿಯೇ ನಿಲ್ಲಿಸುತ್ತೇವೆ. ಇದರಲ್ಲಿ ಮಂಗಳೂರು ನಗರ ದಕ್ಷಿಣದಿಂದ ಎರಡು ಸಾವಿರ ಬೈಕ್ ಗಳು ಭಾಗವಹಿಸಲಿವೆ. ಸರ್ಕಾರಕ್ಕೆ ಸಾಧ್ಯವಿದ್ದರೆ ರಕ್ಷಣೆ ನೀಡಲಿ, ಇಲ್ಲವೇ ಕಣ್ಣು ಮುಚ್ಚಿ ಕುಳಿತುಕೊಳ್ಳಲಿ. ನಮ್ಮ ರಕ್ಷಣೆ ಜೊತೆಗೆ ರಾಜ್ಯದ ರಕ್ಷಣೆಯ ಜವಾಬ್ದಾರಿ ನಾವು ಹೊರುತ್ತೇವೆ ಎಂದು ಹೇಳಿದ್ದಾರೆ.