ಸಿವಿಲ್ ಎಂಜಿನಿಯರ್ಸ್ ದೇಶದ ನಿರ್ಮಾಣ ಕ್ಷೇತ್ರದ ಉತ್ಕೃಷ್ಟ ಸಂಪನ್ಮೂಲ: ಶಾಸಕ ಬಾವಾ
ಸುರತ್ಕಲ್: ಕೌಶಲ್ಯಯುಕ್ತ ಯುವ ಸಿವಿಲ್ ಎಂಜಿನಿಯರ್ಸ್ ದೇಶದ ನಿರ್ಮಾಣ ಕ್ಷೇತ್ರದ ಉತ್ಕೃಷ್ಟ ಸಂಪನ್ಮೂಲ. ದೇಶದ ನಿರ್ಮಾಣ ಕ್ಷೇತ್ರವು ಸಿವಿಲ್ ಎಂಜಿನಿಯರ್ ಅವರ ಕೈಯಲ್ಲಿ ಇದೆ ಎಂದು ಶಾಸಕ ಮೊಹಿಯುದ್ದೀನ್ ಬಾವಾ ಹೇಳಿದರು.
ಎಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಇಂಡಿಯಾ ಇದರ ವತಿಯಿಂದ ಸುರತ್ಕಲ್‌ನ ಎನ್‌ಐಟಿಕೆ ಸಿವಿಲ್ ಎಂಜಿನಿಯರ್ ವಿಭಾಗದಲ್ಲಿ ಎಂಜಿನಿಯರ್ಸ್ ವೀಕ್ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಅವರು ಹೇಳಿದರು.
ಯಾವುದೇ ಕ್ಷೇತ್ರ ಬೆಳೆಯಬೇಕಾದರೆ ನಿರ್ಮಾಣ ಕ್ಷೇತ್ರವು ಪ್ರಥಮವಾಗಿ ಬೆಳೆಯಬೇಕು. ಇದರಿಂದಾಗಿ ಅಭಿವೃದ್ಧಿಶೀಲ ದೇಶವಾದ ಭಾರತದಲ್ಲಿ ಸಿವಿಲ್ ಎಂಜಿನಿಯರ್ಸ್ ಅಭಿವೃದ್ಧಿಯ ಫೌಂಡೇಶನ್. ಬೆಳೆಯುತ್ತಿರುವ ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೌಶಲ್ಯಯುಕ್ತ ಸಿವಿಲ್ ಎಂಜಿನಿಯರ್ಸ್ ಅವರಿಗೆ ಉತ್ತಮ ಬೇಡಿಕೆ ಇದೆ. ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಚಿಂತನಾಶೀಲ ಯುವ ಸಿವಿಲ್ ಎಂಜಿನಿಯರ್ ಅವರಿಗೆ ಉತ್ತಮ ಭವಿಷ್ಯ ಇದೆ ಎಂದರು.
ಸಿವಿಲ್ ಕೆಲಸಗಳಿಗೆ ಸಂಬಂದ ಪಟ್ಟ ಹಾಗೆ ಮಂಗಳೂರು ಉತ್ತಮ ನಿದರ್ಶನ. ಮಂಗಳೂರು ಹಾಗೂ ಆಸುಪಾಸುಗಳಲ್ಲಿ ಅತ್ಯುತ್ತಮ ತಂತ್ರಜ್ಞಾನದ ಮಾಲ್ ಗಳು, ಕಟ್ಟಡಗಳು ನಿರ್ಮಾಣವಾಗುತ್ತಿವೆ. ಅತ್ಯಂತ ಬೇಡಿಕೆಯ ಕ್ಷೇತ್ರಗಳಲ್ಲಿ ಸಿವಿಎಲ್ ಎಂಜಿನಿಯರ್ ಕ್ಷೇತ್ರವೂ ಒಂದಾಗಿದೆ. ಈ ಶಿಕ್ಷಣ ಕಲಿತ ಯುವಕರಿಗೆ ದೇಶದಲ್ಲಿ ಉತ್ತಮ ಭವಿಷ್ಯವಿದೆ. ನಮ್ಮ ದೇಶದಲ್ಲೇ ನೆಲೆ ನಿಂತು ದೇಶಕ್ಕಾಗಿ ಕೊಡುಗೆ ನೀಡ ಬೇಕು ಎಂದು ಯುವ ಎಂಜಿನಿಯರಿಗಳಿಗೆ ಮನವಿ ಮಾಡಿದರು.
ಜಪಾನ್‌ನ ಸಂಪನ್ಮೂಲ ವ್ಯಕ್ತಿಗಳಾದ ಡಾ. ಯೋಶಿಕಝಾ ಅಕಿರಾ ಅವರು ಮಾತನಾಡಿ, ಭಾರತದಲ್ಲಿ ಉತ್ತಮ ಪ್ರತಿಭೆಗಳಿದ್ದು ವಿಶ್ವದಾದ್ಯಂತ ಅವರಿಗೆ ಮಾನ್ಯತೆ ದೊರೆಯುತ್ತಿದೆ.ತಂತ್ರಜ್ಞಾನ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು ಬದಲಾವಣೆಗೆ ಎಂಜಿನಿಯರ್ ಗಳು ಆದ್ಯತೆ ನೀಡುವುದು ಅವಶ್ಯಕ ಎಂದರು.
ಡಾ.ಟೊಮೊನೊರಿ ಸೈಟ ,ಎಂಜಿನಿಯರ್ ಕಟ್ಟ ವೆಂಕ್ರಟಮನ್ ಎಂಜಿನಿಯರ್ ಮೊಹಮ್ಮದ್ ಆಯೂಬ್ ,ಸೂರಜ್ ಶೆಟ್ಟಿ ಉಪಸ್ಥಿತರಿದ್ದರು. ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳು ಯುವ ಎಂಜಿನಿಯರ್‌ಗಳಿಗೆ ಕಾರ್ಯಾಗಾರ ನಡೆಸಿಕೊಟ್ಟರು.