ಸುರತ್ಕಲ್ – ಬಿ.ಸಿ.ರೋಡ್ ಪೋರ್ಟ್ ಸಂಪರ್ಕ ರಸ್ತೆ ನಿರ್ವಹಣೆ ಕಾಮಗಾರಿಗಳಿಗೆ ಸಂಸದ ಕ್ಯಾ. ಚೌಟ ಚಾಲನೆ

Spread the love

ಸುರತ್ಕಲ್ – ಬಿ.ಸಿ.ರೋಡ್ ಪೋರ್ಟ್ ಸಂಪರ್ಕ ರಸ್ತೆ ನಿರ್ವಹಣೆ ಕಾಮಗಾರಿಗಳಿಗೆ ಸಂಸದ ಕ್ಯಾ. ಚೌಟ ಚಾಲನೆ

ಮಂಗಳೂರು: ಸುರತ್ಕಲ್ ನಿಂದ ಬಿ.ಸಿ.ರೋಡ್ ವರೆಗಿನ ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆ, ಮರು ಡಾಂಬರೀಕರಣ ಹಾಗೂ ಸುರಕ್ಷತಾ ವ್ಯವಸ್ಥೆ ಅಳವಡಿಕೆ, ರಸ್ತೆ ಇಕ್ಕೆಲಗಳ ಸ್ವಚ್ಛತಾ ಕಾರ್ಯ ಸಂಬಂಧಪಟ್ಟ ಕಾಮಗಾರಿಗಳಿಗೆ ಇಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಚಾಲನೆ ನೀಡಿದ್ದಾರೆ.

ಸುರತ್ಕಲ್ ನ ಗೋವಿಂದದಾಸ್ ಕಾಲೇಜಿನ ಸಮೀಪದ ಹೆದ್ದಾರಿ ಬಳಿಯಲ್ಲಿ ಗುರುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಕಾಮಗಾರಿಗಳ ಚಾಲನೆ ನೆರವೇರಿಸಿ ಮಾತನಾಡಿದ ಕ್ಯಾ. ಚೌಟ, ” ದೇಶದ ಪ್ರಮುಖ ಬಂದರು ರಸ್ತೆಗಳಲ್ಲಿ ಒಂದಾಗಿರುವ ಸುರತ್ಕಲ್ನಿಂದ ಬಿಸಿ. ರೋಡ್ ರವರೆಗಿನ ಈ ಮಾರ್ಗದ ನವೀಕರಣ ಸೇರಿ ಇತರ ಕಾಮಗಾರಿಗಳಿಗೆ ಇದೀಗ ಚಾಲನೆ ದೊರೆತಿದೆ. ಮಳೆಗಾಲಕ್ಕೂ ಮೊದಲು ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ನಿರ್ದೇಶನ ನೀಡಲಾಗಿದೆ. ಸುರತ್ಕಲ್ ನಿಂದ ಎಪಿಎಂಸಿ ಯಾರ್ಡ್ ವರೆಗೆ, ಕುಳೂರಿನಿಂದ ಎಜೆ ಆಸ್ಪತ್ರೆವರೆಗೆ ಹಾಗೂ ನಂತೂರಿನಿಂದ ಪಡೀಲ್ ವರೆಗೆ ಒಟ್ಟು 11 ಕೋಟಿ. ರೂ.ಗೂ ಹೆಚ್ಚು ವೆಚ್ಚದಲ್ಲಿ ಡಾಮರೀಕರಣ ಹಾಗೂ ತುಂಬೆ ಬಳಿ ರಸ್ತೆಯಲ್ಲಿ ನೀರು ನಿಲ್ಲದಂತೆ ಕ್ರಾಸ್ ಡ್ರೈನೇಜ್ ವ್ಯವಸ್ಥೆ ಮುಂತಾದ ಕಾಮಗಾರಿಗಳು ನಡೆಯಲಿದೆ. ಈ ರಸ್ತೆಯನ್ನು ಅಭಿವೃದ್ದಿಪಡಿಸುವುದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುವ ಜತೆಗೆ ಬಂದರಿನಿಂದ ಸರಕು ಸಾಗಾಟ ವಾಹನಗಳ ಸಂಚಾರವೂ ಸುಗಮವಾಗಲಿದೆ” ಎಂದರು.

ಬಂದರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳು ಸೂಕ್ತ ನಿರ್ವಹಣೆಯಿಲ್ಲದೆ ಸರಕು ಸಾಗಣೆ ವಾಹನಗಳು ಹಾಗೂ ಇತರೆ ವಾಹನ ಸವಾರರ ಸುಗಮ-ಸುರಕ್ಷಿತ ಸಂಚಾರಕ್ಕೂ ಹಲವು ರೀತಿಯ ಸಮಸ್ಯೆ- ಸವಾಲು ಎದುರಾಗಿದ್ದವು. ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ಗಮನಕ್ಕೆ ಹಾಗೂ ಸಚಿವಾಲಯದ ಅಧಿಕಾರಿಗಳ ಜತೆಗೂ ಮಾತುಕತೆ ನಡೆಸಿ ಸರಿಯಾದ ನಿರ್ವಹಣೆಯಿಲ್ಲದೆ ಸೊರಗಿದ್ದ ಹೆದ್ದಾರಿಗಳ ಕಾಯಕಲ್ಪಕ್ಕೆ ಪ್ರಯತ್ನಿಸಿದ್ದು, ಇಂದಿನಿಂದ ಹೆದ್ದಾರಿಗಳ ರಿಪೇರಿ ಕೆಲಸ ಶುರುವಾಗಲಿದೆ. ಈ ಹಿನ್ನಲೆಯಲ್ಲಿ ವಿಶೇಷ ಅನುದಾನ ಒದಗಿಸಿಕೊಟ್ಟ ಪ್ರಧಾನಮಂತ್ರಿ ಮೋದಿ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಕ್ಯಾ. ಚೌಟ ಇದೇ ವೇಳೆ ತಿಳಿಸಿದ್ದಾರೆ.

ಈ ಹೆದ್ದಾರಿ ಕಾಮಗಾರಿಯನ್ನು ಮುಗ್ರೋಡಿ ಕನ್ಸ್ಟಕ್ಷಷನ್ ನಡೆಸಲಿದ್ದು, ಸುರತ್ಕಲ್-ನಂತೂರು, ಬಿಸಿ.ರೋಡ್-ಪಡೀಲ್ ಹಾಗೂ ನಂತೂರು ಜಂಕ್ಷನ್ನಿಂದ ಪಡೀಲ್ವರೆಗಿನ ಬೈಪಾಸ್ ರಸ್ತೆ ಸೇರಿದಂತೆ ಒಟ್ಟು 37.42 ಕಿಮೀ. ದೂರದ ಹೆದ್ದಾರಿಗಳ ರಿಪೇರಿ, ಮರುಡಾಂಬರೀಕರಣ ಹಾಗೂ ನಿರ್ವಹಣೆ ಕೆಲಸಗಳು ಒಟ್ಟು 28.58 ಕೋಟಿ ರೂ. ವೆಚ್ಚದಲ್ಲಿ ನಡೆಯಲಿವೆ.

ಕಾರ್ಯಕ್ರಮದಲ್ಲಿ ಶಾಸಕರಾದ ಡಾ.ಭರತ್ ಶೆಟ್ಟಿ ವೈ, ಮಾಜಿ ಸಚಿವ ನಾಗರಾಜ್ ಶೆಟ್ಟಿ, ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ್, ಜಯಾನಂದ್ ಅಂಚನ್, ಮನೋಜ್ ಕುಮಾರ್ ಎನ್‌ಎಚ್‌ಎಐ ಅಧಿಕಾರಿಗಳು ಮುಗ್ರೋಡಿ ಕನ್ಸ್ಟಕ್ಷಷನ್ ಸುಧಾಕರ್ ಶೆಟ್ಟಿ, ಬಿಜೆಪಿ ಮುಖಂಡರು, ಮಾಜಿ ಮ.ನ.ಪಾ ಸದಸ್ಯರುಗಳು, ಸ್ಥಳೀಯರು, ನಾಗರಿಕ ಹೋರಾಟ ಸಮಿತಿ ಸದಸ್ಯರು ಹಾಜರಿದ್ದರು. ತಿಲಕ್‌ರಾಜ್ ಕೃಷ್ಣಾಪುರ ಕಾರ್ಯಕ್ರಮ ನಿರೂಪಿಸಿದರು.


Spread the love
Subscribe
Notify of

0 Comments
Inline Feedbacks
View all comments