ಸುರತ್ಕಲ್ ಬೇಡಿಕೆಗೆ ಅನುಗುಣವಾಗಿ ಮೆಸ್ಕಾಂ ಸಬ್ ಸ್ಟೇಷನ್ ನಿರ್ಮಿಸಲು ಒಪ್ಪಿಗೆ: ಬಾವಾ
ಸುರತ್ಕಲ್: ಮಂಗಳೂರು ನಗರಕ್ಕೆ ಉಪನಗರ ಮಾದರಿಯಲ್ಲಿ ಬೆಳೆಯುತ್ತಿರುವ ಸುರತ್ಕಲ್ನ ಬೇಡಿಕೆಗೆ ಅನುಗುಣವಾಗಿ ಮೆಸ್ಕಾಂ ಸಬ್ ಸ್ಟೇಷನ್ ನಿರ್ಮಿಸಲು ಇಂಧನ ಖಾತೆ ಸಚಿವ ಡಿ.ಕೆ. ಶಿವಕುಮಾರ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ಶಾಸಕ ಮೊಹಿಯುದ್ದೀನ್ ಬಾವಾ ಹೇಳಿದ್ದಾರೆ.
ಸುರತ್ಕಲ್ ಬಳಿಯ ಮುಕ್ಕದಲ್ಲಿ ಮೆಸ್ಕಾಂನ ಸಹಾಯಕ ಎಂಜಿನಿಯರ್ ಹಾಗೂ ದೂರು ಸ್ವೀಕರಣಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಸುರತ್ಕಲ್ ನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಕೈಗಾರಿಕೆ, ಮೀನುಗಾರಿಕೆ, ಕೃಷಿ, ಗೃಹೋಪಯೋಗಿ ಹೀಗೆ ಎಲ್ಲ ಕ್ಷೇತ್ರದಲ್ಲೂ ವಿದ್ಯುತ್ನ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸುರತ್ಕಲ್ಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಸಂಬಂಧಿಸಿದಂತೆ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸಚಿವರು ಪೂರಕವಾಗಿ ಸ್ಪಂದನೆ ನೀಡಿದ್ದಾರೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ನಗರ ಹೊರತು ಪಡಿಸಿದರೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರದೇಶಗಳಲ್ಲಿ ಸುರತ್ಕಲ್ ಮುಂಚೂಣಿಯಲ್ಲಿದೆ. ಸುರತ್ಕಲ್ನಲ್ಲಿ ಎಲ್ಲ ಕ್ಷೇತ್ರದ ವಿಸ್ತರಣೆಗೆ ಅವಕಾಶವೂ ಇದೆ. ಇದರಿಂದಾಗಿ ಬೆಳವಣಿಗೆಗೆ ತಕ್ಕಂತೆ ಪೂರಕವಾಗಿ ವಿದ್ಯುತ್ ಪೂರೈಸಲು ಸರಕಾರ ಬದ್ಧವಾಗಿದೆ ಎಂದರು.
ಸರಕಾರ ವಿದ್ಯುತ್ ನಿರ್ವಹಣೆಯ ಬಗ್ಗೆ ಹೆಚ್ಚಿನ ಗಮನ ನೀಡಿದ್ದು, ವಿದ್ಯುತ್ ಕಡಿತವಾಗದಂತೆ ರೈತರಿಗೆ ನಿರಂತರವಾಗಿ ಪೂರೈಕೆಗೂ ಪ್ರಯತ್ನ ನಿರತವಾಗಿದೆ ಎಂದರು.
ಕರಾವಳಿಯಲ್ಲಿ ಮಳೆಗಾಲದ ಸಂದರ್ಭ ತಾಂತ್ರಿಕ ಕಾರಣದಿಂದ ವಿದ್ಯುತ್ ವೈಫಲ್ಯಕ್ಕೀಡಾಗುವುದು ಸಾಮಾನ್ಯ ಆದರೆ ಮಳೆಗಾಲದ ಸಂದರ್ಭ ವಿದ್ಯುತ್ ವೈಫಲ್ಯಕ್ಕೀಡಾದಾಗ ಮೆಸ್ಕಾಂ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದಲ್ಲಿ ಜನರ ಬೆಂಬಲವೂ ಲಭಿಸುತ್ತದೆ ಎಂದ ಶಾಸಕ, ಮುಕ್ಕ ಭಾಗದಲ್ಲಿ ವಿದ್ಯುತ್ ಬಿಲ್ ಸ್ವೀಕರಣಾ ಕೇಂದ್ರ ಸ್ಥಾಪಿಸಲು ಅವಕಾಶವಿದೆಯೆ ಎಂಬುದನ್ನು ಮನಗಂಡು ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಮೆಸ್ಕಾಂ ಅಧಿಕಾರಿಗಳಾದ ನಂಜಪ್ಪ, ಗೋವರ್ಧನ್ ಶೆಟ್ಟಿಗಾರ್, ಅಕ್ಬರ್ ಆಲಿ, ಉರ್ಬನ್ ಪಿಂಟೋ, ಕಟ್ಟಡದ ಮಾಲಕ ರಾಮಚಂದ್ರ ಭಟ್ , ಹಿರಿಯ ಮೆಸ್ಕಾಂ ಅಧಿಕಾರಿಗಳು, ಎಂಜಿನಿಯರ್ ಗಳು ಉಪಸ್ಥಿತರಿದ್ದರು.