ಸುವರ್ಣ ಮಹೋತ್ಸವದ “ ರನ್ ಫಾರ್ ಫಿಶ್ – ಮ್ಯಾರಥಾನ್”
ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಮತ್ತು ವಿಶ್ವ ಮೀನುಗಾರಿಕಾ ದಿನಾಚರಣೆ ಅಂಗವಾಗಿ “ಉತ್ತಮ ಆರೋಗ್ಯ ಮತ್ತು ಸಂಪತ್ತಿಗಾಗಿ ಮೀನು” ಎಂಬ ಸಂದೇಶ ಸಾರಲು ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಂದ ಸುವರ್ಣಮಹೋತ್ಸದ “ರನ್ ಫಾರ್ ಫಿಶ್ – ಮ್ಯಾರಥಾನ್” ಕಾರ್ಯಕ್ರಮವನ್ನು ನಗರದ ನೆಹರೂ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಶಸಿಕಾಂತ್ ಸೆಂಥಿಲ್ ಅವರು ಉದ್ಘಾಟಿಸಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಇದು ಒಂದು ಅತ್ಯುತ್ತಮವಾದ ಕಾರ್ಯಕ್ರಮವಾಗಿದ್ದು ದೇಶದ ಒಳಿತಿಗಾಗಿ ಯುವಕರು ಶ್ರದ್ಧೆಯಿಂದ ಕಾರ್ಯನಿರ್ವಹಿಸಿದರೆ ದೇಶಕ್ಕೆ ಒಳ್ಳೆಯದಾಗುತ್ತದೆ. ಈ ನಿಟ್ಟಿನಲ್ಲಿ ಯುವಕರ ಪಾತ್ರ ಬಹಳ ಮುಖ್ಯ. ಮೀನುಗಾರಿಕಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಮುಂದುವರೆಯಬೇಕೆಂದು ಆಶಯ ವ್ಯಕ್ತಪಡಿಸಿದರು ಹಾಗೂ ಮೀನುಗಾರಿಕಾ ಕಾಲೇಜಿನ ಕೊಡುಗೆ ಮತ್ತು ಕಾರ್ಯಕ್ರಮಗಳ ಬಗ್ಗೆ ಪ್ರಶಂಸಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೀನುಗಾರಿಕಾ ಕಾಲೇಜಿನ ಡೀನ್ರವರಾದ ಫ್ರೊ. ಹೆಚ್. ಶಿವಾನಂದ ಮೂರ್ತಿಯವರು ಕಾಲೇಜು ಬೆಳೆದು ಬಂದ ಬಗ್ಗೆ, ಸುವರ್ಣಮಹೋತ್ಸದ ಆಚರಣೆ ಬಗ್ಗೆ ಮಾತನಾಡುತ್ತಾ ವಿಶ್ವ ಮೀನುಗಾರಿಕೆ ದಿನಾಚರಣೆಯ ಉದ್ದೇಶಗಳು, ಮೀನು ಸಂಪನ್ಮೂಲಗಳ ಸಂರಕ್ಷಣೆ, ಮೀನುಪೌಷ್ಟಿಕತೆ ಮತ್ತು ಮೀನುಗಾರಿಕೆ ಪ್ರಾಮುಖ್ಯತೆ ಬಗ್ಗೆ ಹಾಗೂ ಎಲ್ಲಾ ಸಂಬಂದ ಪಟ್ಟವರಿಗೆ ಮತ್ತು ಜನಸಾಮಾನ್ಯರಿಗೆ ಅರಿವು ಮಾಡಿಸುವುದು ಈ ಮ್ಯಾರಥಾನ್ನ ಮುಖ್ಯ ಉದ್ದೇಶವೆಂದು ತಿಳಿಸಿದರು. ಕಾರ್ಯಕ್ರಮ ಸಂಯೋಜಕರಾದ ಪ್ರಾಧ್ಯಾಪಕ ಡಾ.ಹೆಚ್.ಎನ್.ಆಂಜನಾಯಪ್ಪ ಸ್ವಾಗತಿಸಿದರು. ಸಹಪ್ರಾಧ್ಯಾಪಕ ಡಾ.ಎ.ಟಿ.ರಾಮಚಂದ್ರ ನಾಯ್ಕ್ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಸಲ್ಲಿಸಿದರು.
ಸುಮಾರು ಮುನ್ನೂರಕ್ಕೂ ಅಧಿಕ ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು, ಭೋದಕ ಹಾಗೂ ಭೋದಕೇತರ ವರ್ಗದವರು ಮ್ಯಾರಥಾನ್ನಲ್ಲಿ ಭಾಗವಹಿಸಿ ನೆಹರೂ ಮೈದಾನದಿಂದ ಮೀನುಗಾರಿಕಾ ಕಾಲೇಜಿನವರೆಗೆ 7 ಕಿ.ಮೀ. ಮ್ಯಾರಥಾನ್ ಮಾಡಿದರು. ಮ್ಯಾರಥಾನ್ ಓಟದಲ್ಲಿ ಮೊದಲು ಬಂದ ಎರಡೆರಡು ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿನಿಯರಿಗೆ, ಬೋಧಕ, ಬೋಧಕೇತರ ವರ್ಗದ, ಮಹನೀಯ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಪ್ರಶಸ್ತಿಗಳನ್ನು ಕೊಡಲಾಯಿತು.