ಸೆ. 16: ಬೆಳಪುವಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಡ ಶಿಲನ್ಯಾಸಕ್ಕೆ ಸಚಿವೆ ಜಯಮಾಲಾ

Spread the love

ಸೆ. 16: ಬೆಳಪುವಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಡ ಶಿಲನ್ಯಾಸಕ್ಕೆ ಸಚಿವೆ ಜಯಮಾಲಾ

ಪಡುಬಿದ್ರಿ: ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ 2017 – 18 ಸಾಲಿನ ಬಜೆಟ್‌ನಲ್ಲಿ ಮಂಜೂರು ಆಗಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಡದ ಭೂಮಿ ಪೂಜೆಯನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಸೆ. 16 ರಂದು ಬೆಳಿಗ್ಗೆ 10 ಕ್ಕೆ ಬೆಳಪುವಿನಲ್ಲಿ ನೆರವೇರಿಸಲಿದ್ದಾರೆ ಎಂದು ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.

ಪಂಚಾಯಿತಿ ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ₹8 ಕೋಟಿ ವೆಚ್ಚದಲ್ಲಿ ಬೆಳಪು ಗ್ರಾಮದಲ್ಲಿ 5.35 ಎಕರೆ ಜಮೀನಿನಲ್ಲಿ ಕಾಲೇಜು ನಿರ್ಮಾಣಗೊಳ್ಳಲಿದೆ. ಹಿಂದೇ ಶಾಸಕರಾಗಿದ್ದ ವಿನಯಕುಮಾರ್ ಸೊರಕೆ ಅವರ ವಿಶೇಷ ಸಹಕಾರದಿಂದ ಕಾಲೇಜು ಮಂಜೂರಿ ಆಗಿತ್ತು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.

₹ 35 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸಮೃದ್ಧಿ-ಸಡಗರ-ಚೈತನ್ಯ ವಾಣಿಜ್ಯ ಸಂಕೀರ್ಣಗಳ ಉದ್ಘಾಟನೆ, ಬಸ್ ತಂಗುದಾಣ, ಬೆಳಪು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಹೆಚ್ಚುವರಿ ಕೊಠಡಿ, ಚಿಣ್ಣರ ಅಂಗಳ ಅಂಗನವಾಡಿ ಉದ್ಘಾಟನೆ ಕಾರ್ಯ ವು ನಡೆಯಲಿದೆ. ನವೋದಯ ಸ್ವಸಹಾಯ ಸಂಘದ ಸದಸ್ಯರಿಗೆ ಚೈತನ್ಯ ವಿಮಾ ಕಾರ್ಡ್, ವಿಮಾ ಚೆಕ್ ಮತ್ತು ಸಮವಸ್ತ್ರ ವಿತರಣೆ, ಸರ್ಕಾರದ ವಿವಿಧ ಸವಲತ್ತುಗಳ ವಿತರಣೆ ಹಾಗೂ ಸಾಧಕ ಶಿಕ್ಷಕರಿಗೆ ಸನ್ಮಾನ ಆಯೋಜಿಸಲಾಗಿದೆ ಎಂದರು.

ಬೆಳಪುವಿನಲ್ಲಿ ಈಗಾಗಲೇ ₹ 400 ಕೋಟಿ ವೆಚ್ಚದ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ ಮಂಜೂರಿ ಆಗಿದ್ದು. ₹146 ಕೋಟಿ ಅನುದಾನ ಪ್ರಥಮ ಹಂತದ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿ ₹50 ಕೋಟಿ ಹಣ ಮಂಜೂರುಗೊಳಿಸಿದೆ. 30 ಎಕರೆ ಪ್ರದೇಶದಲ್ಲಿ ಅನುಷ್ಟಾನಗೊಳ್ಳಲಿರುವ ಯೋಜನೆ ಗೃಹಮಂಡಳಿ ಸಂಸ್ಥೆಯ ಮೂಲಕ ಕಾರ್ಯಗತಗೊಳ್ಳಲಿದ್ದು, ಟೆಂಡರ್ ಪ್ರಕ್ರಿಯೆ ಅಂತಿಮಗೊಂಡಿದೆ. ರಾಜ್ಯದಲ್ಲಿಯೇ ವಿಶ್ವದರ್ಜೆಯ ವಿಜ್ಞಾನ ಸಂಶೋಧನಾ ಕೇಂದ್ರ ಇದಾಗಲಿದ್ದು, ಯೋಜನೆ ಸಂಪೂರ್ಣವಾಗಿ ಕಾರ್ಯಗತವಾದಲ್ಲಿ ಬೆಳಪು ಕಾಡು ಎಂದೇ ಖ್ಯಾತಿ ಪಡೆದಿದ್ದ ಬೆಳಪು ಗ್ರಾಮ ಶೈಕ್ಷಣಿಕ ಗ್ರಾಮವಾಗಿ ರೂಪುಗೊಳ್ಳಲಿದೆ ಎಂದು ಅವರು ತಿಳಿಸಿದರು.

ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್. ಮೆಂಡನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಸಂಸದರಾದ ಶೋಭಾ ಕರಂದ್ಲಾಜೆ, ಆಸ್ಕರ್ ಫರ್ನಾಂಡಿಸ್, ಕರ್ನಾಟಕ ಸಹಕಾರಿ ಮಾರಾಟ ಮಹಾಮಂಡಳದ ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಸದಸ್ಯರಾದ ಎಸ್. ಎಲ್. ಭೋಜೇಗೌಡರು, ಪ್ರತಾಪಚಂದ್ರ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.

ಗ್ರಾಪಂ ಉಪಾಧ್ಯಕ್ಷೆ ಶೋಭಾ ಭಟ್, ಸದಸ್ಯರಾದ ನೂರ್ ಜಹಾನ್, ವಿಮಲಾ ದೇವಾಡಿಗ, ಪಿಡಿಒ ಎಚ್. ಆರ್. ರಮೇಶ್ ಉಪಸ್ಥಿತರಿದ್ದರು.


Spread the love