ಸೆಂಟ್ರಲ್ ನಮ್ಮ ಕೈಕ್ ಬರಡ್ …!
( ಸೆಂಟ್ರಲ್ ನಮ್ಮ ಕೈಗೆ ಬರಲಿ …) ಇದು ತುಳು ಕಾಮಿಡಿ ನಾಟಕವೊಂದರ ಡೈಲಾಗ್ , ‘ ಸೆಂಟ್ರಲ್ ಯಾರ ಕೈಗೂ ಬರೋದಿಲ್ಲ , ಅದು ಇದ್ದ ಜಾಗದಲ್ಲೇ ಇರುತ್ತೆ ‘ ಅನ್ನುವುದು ಅದಕ್ಕೆ ಪ್ರತಿಕ್ರಿಯೆಯ ಡೈಲಾಗ್ …
ಮಂಗಳೂರಿನ ಜನ ಹಾದಿ ಬೀದಿಯಲ್ಲಿ ರಾಜಕೀಯದ ಬಗ್ಗೆ ಮಾತನಾಡುವಾಗ ಕೂಡ ಈ ಮೇಲಿನ ಮಾತನ್ನು ತೇಲಿಬಿಡುವುದಿತ್ತು. ಅಂದ್ರೆ , ಆ ಮಟ್ಟಿಗೆ ಸೆಂಟ್ರಲ್ ಟಾಕೀಸ್ ನ ಹೆಸರು ಮಂಗಳೂರಿನ ಜನಜೀವನದ ಭಾಗವಾಗಿತ್ತು.
ಸೆಂಟ್ರಲ್ ಟಾಕೀಸ್ ನಲ್ಲಿ ಸಿನಿಮಾ ಪ್ರದರ್ಶನ ಸ್ಥಗಿತಗೊಂಡು ಒಂದೂವರೆ ವರ್ಷವಾಯಿತು. ಮಲ್ಟಿಫ್ಲೆಕ್ಸ್ ಥಿಯೇಟರ್ ಗಳು ಬಂದ ಬಳಿಕ ಎಲ್ಲಾ ನಗರಗಳಲ್ಲಿ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳು ಬಾಗಿಲು ಮುಚ್ಚುತ್ತಲೆ ಇದೆ, ಮಂಗಳೂರಿನಲ್ಲಿಯೂ ಅದೆ ಕಥೆ .
ಸೆಂಟ್ರಲ್ ಹಿನ್ನೆಲೆ :
ಕಳೆದ ಶತಮಾನದ ಮಂಗಳೂರಿನ ಇತಿಹಾಸದಲ್ಲಿ ಸೆಂಟ್ರಲ್ ಟಾಕೀಸ್ ಕೂಡ ಮಹತ್ವದ ಹೆಜ್ಜೆಗುರುತು.
ಮೂಕಿ ಸಿನಿಮಾ ಕಾಲದಲ್ಲೇ ಕರಾವಳಿಯ ಜನ ಸಿನಿಮಾ ನೋಡಿದ್ದು ಇದೇ ಜಾಗದಲ್ಲಿ . ಆಗ ನೆಲದಲ್ಲಿ ಕುಳಿತು ಸಿನಿಮಾ ನೋಡುವುದು, ತುಂಬಾ ದುಡ್ಡಿದ್ದವರಿಗೆ ಬೆಂಚು .. 1927 ರಲ್ಲಿ ಕೆ.ಕೃಷ್ಣೋಜಿ ರಾವ್ ‘ ಕೃಷ್ಣಾ ಟೂರಿಂಗ್ ಟಾಕೀಸ್ ‘ ಇಲ್ಲಿ ಆರಂಭಿಸಿದರು . ಅವತ್ತಿನ ಕಾಲದಲ್ಲಿ ಈಗಿನಂತೆ ವರ್ಷದ ಎಲ್ಲಾ ದಿನ ಸಿನಿಮಾ ಇರಲಿಲ್ಲ . ಅದಕ್ಕೆ ಟೂರಿಂಗ್ ಟಾಕೀಸ್ .
ಆ ಕಾಲಕ್ಕೆ ಇದು ಮಂಗಳೂರಿನ ಎರಡನೇ ಸಿನಿಮಾ ಟಾಕೀಸ್ . ಅಂದಿಗೆ ಸರಿ ಒಂದು ವರ್ಷ ಮೊದಲು , ಅಂದ್ರೆ 1926 ರಲ್ಲಿ ಹಿಂದೂಸ್ಥಾನ್ ಸಿನಿಮಾ ಆರಂಭಗೊಂಡಿತ್ತು. ( ಈಗಿನ ನ್ಯೂಚಿತ್ರಾ ) .
ಕೃಷ್ಣಾ ಟೂರಿಂಗ್ ಟಾಕೀಸ್ ಆರಂಭವಾದ ಹದಿನಾಲ್ಕು ವರ್ಷದ ಬಳಿಕ ಕೆ.ನಾರಾಯಣ ಕಾಮತ್ ಅವರು ಖರೀದಿ ಮಾಡಿ 1941 ರಲ್ಲಿ ಸೆಂಟ್ರಲ್ ಟಾಕೀಸ್ ಆರಂಭಿಸಿದರು. ಅಲ್ಲಿಂದ ಹೊಸ ಇತಿಹಾಸ .
1947 ರಲ್ಲಿ ಮತ್ತೆ ನಾರಾಯಣ ಕಾಮತರ ನೇತೃತ್ವದಲ್ಲಿ ಹೊಸ ಕಟ್ಟಡ ನಿರ್ಮಾಣ ವಾಗುತ್ತದೆ . ಆ ಹೊತ್ತಿಗೆ ಜಿಲ್ಲೆಯಲ್ಲಿ ಸೆಂಟ್ರಲ್ ಟಾಕೀಸ್ ಮತಷ್ಟು ಪ್ರಸಿದ್ದಿ ಗೆ ಬರುತ್ತದೆ. ದೂರದ ಊರಿನವರು ಎತ್ತಿನಗಾಡಿ , ಕುದುರೆ ಗಾಡಿಯಲ್ಲಿ ಸಿನಿಮಾ ನೋಡಲು ಬರುತ್ತಿದ್ದರಂತೆ .
ಆ ಕಾಲದಲ್ಲೆ ಹಂಪನಕಟ್ಟೆ ಮಂಗಳೂರಿನ ಕೇಂದ್ರ ಜಾಗವಾಗಿದ್ದ ಕಾರಣಕ್ಕೆ ಕಾಮತರು ಸೆಂಟ್ರಲ್ ಟಾಕೀಸ್ ಎಂದು ಹೆಸರಿಸಿರಬಹುದು. ನಾರಾಯಣ ಕಾಮತರ ಬಳಿಕ 1955 ರಿಂದ ಅವರ ಪುತ್ರ ಕೆ.ಜನಾರ್ದನ ಕಾಮತ್ ಸೆಂಟ್ರಲ್ ಮುನ್ನಡೆಸಿದರು. ಸಿನಿಮಾ ಬಹು ಜನಪ್ರಿಯತೆಗೆ ಬರುವಂತಹ ಕಾಲಘಟ್ಟದಲ್ಲಿ ಜನಾರ್ದನ ಕಾಮತ್ ಅವರ ನೇತೃತ್ವ. ಮುಂದೆ ಹೊಸ ಕಾಲಕ್ಕೆ ತಕ್ಕಂತೆ ಹೊಸ ಕಟ್ಟಡವನ್ನು ಜನಾರ್ದನ ಕಾಮತ್ ಅವರು 1975 ರಲ್ಲಿ ನಿರ್ಮಿಸಿದರು.ಹೊಸ ಕಟ್ಟಡದಲ್ಲಿ ಒಂದು ಸಾವಿರ ಸೀಟ್ ಗಳಿದ್ದವು. ಕರ್ನಾಟಕದ ದೊಡ್ಡ ಸಿನಿಮಾ ಟಾಕೀಸ್ ಗಳ ಪೈಕಿ ಸೆಂಟ್ರಲ್ ಕೂಡ ಒಂದಾಗಿತ್ತು.
1991 ರಲ್ಲಿ ಸೆಂಟ್ರಲ್ ಟಾಕೀಸಿನ ಸುವರ್ಣ ಮಹೋತ್ಸವ ವಿಜೃಂಭಣೆಯಿಂದ ನಡೆದಿತ್ತು. . ಕೃಷ್ಣಾ ಟೂರಿಂಗ್ ಟಾಕೀಸ್ 1927 ರಲ್ಲಿ ಆರಂಭವಾಗಿದ್ದರೂ , ಕಾಮತ್ ಫ್ಯಾಮಿಲಿ 1941 ರಲ್ಲಿ ಹೊಸ ಸೆಂಟ್ರಲ್ ಟಾಕೀಸ್ ಆರಂಭಿಸಿದ ಹಿನ್ನೆಲೆಯಲ್ಲಿ ಆ ವರ್ಷದಿಂದ ಗಣನೆ ಮಾಡಿ 1991 ಕ್ಕೆ ಸ್ವರ್ಣ ಮಹೋತ್ಸವ ಆಚರಿಸಿದರು.
ಎಪ್ಪತ್ತರ , ಎಂಬತ್ತರ , ತೊಂಬತ್ತರ ದಶಕದ ಜನಪ್ರಿಯ ಹಿಂದಿ ಸಿನಿಮಾಗಳನ್ನು ಕರಾವಳಿ ಜನ ಇದೇ ಸೆಂಟ್ರಲ್ ನಲ್ಲಿ ನೋಡಿದ್ದು . ಸಂಗಮ್ , ಬಾಬ್ಬಿ , ಹಮ್ರಾಜ್ , ಕಹೋನಾ ಪ್ಯಾರ್ ಹೈ , ಬಾರ್ಡರ್ , ದಿಲ್ ಸೇರಿದಂತೆ ಇನ್ನೂ ಅನೇಕ ಸಿನಿಮಾಗಳಿಗೆ ಸ್ಕ್ರೀನ್ ಒದಗಿಸಿತ್ತು ಸೆಂಟ್ರಲ್ ಟಾಕೀಸ್ . ಮಾಧುರಿ ದೀಕ್ಷಿತ್ , ಶ್ರೀದೇವಿ , ಅಮಿತಾಬ್ , ಋಷಿ ಕಪೂರ್ ಮೊದಲಾದವರನ್ನು ಕರಾವಳಿ ಜನ ಹತ್ತಿರದಿಂದ ನೋಡಿದ್ದು ಇದೇ ಜಾಗದಲ್ಲಿ.
ಜನಾರ್ದನ ಕಾಮತ್ ಅವರ ಬಳಿಕ ಅವರ ಪುತ್ರ ಕೆ.ಸುಧೀರ್ ಕಾಮತ್ ಅವರು ಸೆಂಟ್ರಲ್ ನಲ್ಲಿ ಅಧಿಕಾರಕ್ಕೆ ಬಂದವರು. ಅವರ ನೇತೃತ್ವದಲ್ಲಿ ಮತ್ತೆ ಟಾಕೀಸ್ ಆಧುನೀಕರಣಗೊಂಡಿತು. ಹೊಸ ಜಮಾನದ ಸೌಂಡ್ ಎಫೆಕ್ಟ್ ಗಳು , ಈ ಮೊದಲಿನ ಸೀಟ್ ಸಂಖ್ಯೆಯನ್ನು ಸ್ವಲ್ಪ ಕಡಿಮೆ ಮಾಡಿ ಆಧುನಿಕ ಪುಷ್ ಬ್ಯಾಕ್ ಸೀಟ್ ಗಳು ಬಂದವು. ಮುಂದೆ ಸೆಂಟ್ರಲ್ ನಲ್ಲಿ ಸಿನಿಮಾ ನೋಡುವುದು ಮಂಗಳೂರಿನ ಜನರಿಗೆ ಪ್ರತಿಷ್ಠೆಯ ವಿಚಾರವಾಯಿತು. ಕಾಲೇಜ್ ಹುಡಗ ಹುಡುಗಿಯರ ಫೇವರಿಟ್ ತಾಣವಾಯಿತು.
ಹಿಂದಿ ಸಿನಿಮಾದ ಮುಖ್ಯ ಸ್ಟಾಂಡ್ ಸೆಂಟ್ರಲ್ ಆಗಿದ್ದರೂ ತೆಲುಗು ,ತಮಿಳಿನ ಹಿಟ್ ಸಿನಿಮಾ ಕೂಡ ಇಲ್ಲೆ ಬರುತ್ತಿದ್ದದು.
34 ವಾರ ನಿರಂತರ ‘ಮುಂಗಾರು ಮಳೆ’ಯಾದದ್ದು ಇದೇ ಸೆಂಟ್ರಲ್ ನಲ್ಲಿ ..
ಇಂತಹ ಸೆಂಟ್ರಲ್ ಇನ್ನೂ ಯಾರ ಕೈಗೂ ಬರುವುದಿಲ್ಲ……
ಮೂರು ತಲೆಮಾರುಗಳು ಕೊಂಡಿಯಾಗಿ ಕನಸುಗಳನ್ನು ಹಂಚಿಕೆ ಮಾಡಿದ ಕಾಮತ್ ಫ್ಯಾಮಿಲಿ ಹೊಸ ಕನಸಿನತ್ತ ಹೆಜ್ಜೆ ಹಾಕಿದೆ.
ಇದೀಗ 70 ಸೆಂಟ್ಸ್ ಸೆಂಟ್ರಲ್ ಜಾಗದಲ್ಲಿ ಹೊಸ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆಗಳು ಸುಧೀರ್ ಕಾಮತ್ ನೇತೃತ್ವದಲ್ಲಿ ಆರಂಭಗೊಂಡಿದೆ.
ತಾರಾನಾಥ್ ಗಟ್ಟಿ ಕಾಪಿಕಾಡ್