ಸೆಂಟ್ರಲ್ ಮಾರ್ಕೆಟ್ ಸ್ಥಳಾಂತರ ವಿಚಾರದಲ್ಲಿ ಜಿಲ್ಲಾಡಳಿತದ ಏಕಪಕ್ಷೀಯ ನಿರ್ಧಾರ ಸರಿಯಲ್ಲ – ಜೆ.ಆರ್.ಲೋಬೊ
ಮಂಗಳೂರು: ಕೊರೋನಾ ಸೋಂಕು ತಡೆ ವಿಚಾರದಲ್ಲಿ ಬಿಜೆಪಿ ಆಡಳಿತ ಮಹಾನಗರಪಾಲಿಕೆ ಹಾಗೂ ಜಿಲ್ಲಾಡಳಿತ ಮಂಗಳೂರಿನಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಪಕ್ಷವನ್ನು ಯಾವುದೇ ರೀತಿಯಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇರುವುದು ಖಂಡನೀಯ ಎಂದು ಮಂಗಳೂರು ಮಾಜಿ ಶಾಸಕ ಜೆ ಆರ್ ಲೋಬೊ ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮಹಾನಗರಪಾಲಿಕೆ ಒಂದು ಚುನಾಯಿತ ಸಂಸ್ಥೆಯಾಗಿದ್ದು, ಇಲ್ಲಿ ಆಡಳಿತ ನಡೆಸಲು ಒಂದು ಕೌನ್ಸಿಲ್ ಇದ್ದು ಕೋರೊನಾ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಪೋರೇಟರ್ ಗಳನ್ನು ಒಂದು ಮಾತು ಕೇಳದೆ ಹಲವಾರು ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು ಸರಿಯಲ್ಲ.
ಕೇವಲ ಒಂದು ಪಕ್ಷದ ಸಂಸತ್ ಸದಸ್ಯರು, ಶಾಸಕರನ್ನು ಸೇರಿಸಿಕೊಂಡು ತಮಗೆ ಇಷ್ಟ ಬಂದಂತೆ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ. ನಮ್ಮ ಸೆಂಟ್ರಲ್ ಮಾರ್ಕೆಟ್ ಸ್ಥಳಾಂತರ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಮಹಾನಗರಪಾಲಿಕೆಯ ಕಾರ್ಪೋರೇಟರ್ ಗಳೊಂದಿಗೆ ಯಾವುದೇ ಚರ್ಚೆ ನಡೆಸದೆ ಏಕಪಕ್ಷೀಯವಾಗಿ ಹೇಗೆ ನಿರ್ಧಾರ ತೆಗೆದುಕೊಂಡರು. ಸ್ಮಾರ್ಟ್ ಸಿಟಿಯಲ್ಲಿ ಸೆಂಟ್ರಲ್ ಮಾರ್ಕೆಟಿನ ವ್ಯಾಪಾರಿಗಳಿಗೆ ನೆಹರೂ ಮೈದಾನದ ಬಳಿ ವ್ಯವಸ್ಥೆ ಮಾಡಲು ಈಗಾಗಲೇ ತೀರ್ಮಾನವಾಗಿತ್ತು ಆದರೆ ಇದು ಪ್ರಜಾಪ್ರಭುತ್ವದ ರೀತಿಯಲ್ಲಿ ನಡೆದಿಲ್ಲ ಎಂದು ಹೇಳೀದರು.
ಕೊರೋನಾ ವಿಚಾರದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು 40-40 ಮನೆಗೆ ಹೋಗಿ ದೇಣಿಗೆ ಸಂಗ್ರಹಿಸಲು ಪ್ರಧಾನಿಯವರು ಕರೆನೀಡಿರುವುದು ನಿಜಕ್ಕೂ ಖಂಡನೀಯ. ಕೋರೊನಾ ಒಂದು ರಾಷ್ಟ್ರೀಯ ವಿಪತ್ತು ಇದನ್ನು ಕೊನೆಗಾಣಿಸಲು ಪಕ್ಷಭೇಧ ಮರೆತು ಸರಕಾರದೊಂದಿಗೆ ಸಹಕಾರ ನೀಡುತ್ತಿರುವಾಗ ಬಿಜೆಪಿ ಪಕ್ಷದ ಧ್ವಜ ಹಿಡಿದುಕೊಂಡು ದೇಣಿಗೆ ಸಂಗ್ರಹಿಸುವುದು ಸರಿಯಲ್ಲ ಎಂದು ಅವರು ಹೇಳಿದರು.