ಸೇನಾ ನೇಮಕಾತಿ: ದ.ಕ. ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ

Spread the love

ಸೇನಾ ನೇಮಕಾತಿ: ದ.ಕ. ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ

ಮ0ಗಳೂರು, : ಭಾರತೀಯ ಸೇನೆಗೆ ಸೇರಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಕಾಂಕ್ಷಿಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿದ್ದು, ಈ ವರ್ಷ ಇದುವರೆಗೆ 175ಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಭಾರತೀಯ ಸೇನೆಯು ಸೇನೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಸೇನಾ ನೇಮಕಾತಿಗೆ ಭಾರತೀಯ ಸೇನೆಯು ಪ್ರತೀ ವರ್ಷ ರಾಜ್ಯದ ವಿವಿದೆಡೆ ನೇಮಕಾತಿ ರ್ಯಾಲಿ ನಡೆಸುತ್ತಿದೆ. ಈ ವರ್ಷ ಮೇ. 12 ರಿಂದ ಬಿಜಾಪುರದಲ್ಲಿ ರ್ಯಾಲಿ ನಡೆಯಲಿದೆ.

ದಕ್ಷಿಣ ಕನ್ನಡ ಜಿಲ್ಲೆಯಿಂದ ಸೇನಾ ನೇಮಕಾತಿ ರ್ಯಾಲಿಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಬಹಳ ಕಡಿಮೆಯಾಗಿತ್ತು. ಪ್ರಸಕ್ತ ವರ್ಷ ಈ ನಿಟ್ಟಿನಲ್ಲಿ ಮಂಗಳೂರು ಕೂಳೂರಿನಲ್ಲಿರುವ ಸೇನಾ ನೇಮಕಾತಿ ಕೇಂದ್ರವು ದಕ್ಷಿಣ ಕನ್ನಡ ಜಿಲ್ಲಾಡಳಿತದ ಸಹಯೋಗದಲ್ಲಿ ಸೇನಾ ನೇಮಕಾತಿ ರ್ಯಾಲಿ ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡಿತ್ತು. ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮ, ಮಾಧ್ಯಮಗಳ ಮೂಲಕ ನೇಮಕಾತಿಯ ಪ್ರಚಾರ ನಡೆಸಿತ್ತು.
2017 ಮಾರ್ಚ್ 12ರಿಂದ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಇದುವರೆಗೆ ದಕ್ಷಿಣ ಕನ್ನಡ ಜಿಲ್ಲೆಯ 175 ಯುವಕರು ಅರ್ಜಿ ಸಲ್ಲಿಸಿರುತ್ತಾರೆ. ಏಪ್ರಿಲ್ 25ರವರೆಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯಿಂದ ಯುವಕರು ಸೇನೆ ಸೇರಲು ಆಸಕ್ತಿ ವಹಿಸಿರುವುದಕ್ಕೆ ಸೇನಾ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯ ಸೈನಿಕ, ಸೈನಿಕ ಟ್ರೇಡ್ಸ್‍ಮೆನ್ (ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾಗಿರುವವರು), ತಾಂತ್ರಿಕ ಸೈನಿಕ(ದ್ವಿತೀಯ ಪಿಯುಸಿ ಪಿಸಿಎಂ), ನರ್ಸಿಂಗ್ ಸಹಾಯಕ (ದ್ವಿತೀಯ ಪಿಯುಸಿ ಪಿಸಿಬಿ) ಹಾಗೂ ಸೈನಿಕ ಗುಮಾಸ್ತ(ದ್ವಿತೀಯ ಪಿಯುಸಿ ಇಂಗ್ಲಿಷ್, ಅಕೌಂಟ್ಸ್/ಗಣಿತ) ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ. ಸಾಮಾನ್ಯ ಸೈನಿಕ (21 ವರ್ಷ) ಹಾಗೂ ಉಳಿದ ಹುದ್ದೆಗಳಿಗೆ 23 ವರ್ಷದೊಳಗಿನ ಪುರುಷರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಸಂಪೂರ್ಣ ಉಚಿತವಾಗಿದ್ದು, ಯಾವುದೇ ಶುಲ್ಕ ಇರುವುದಿಲ್ಲ.

ಮೇ 12ರಿಂದ ಬಿಜಾಪುರದಲ್ಲಿ ನಡೆಯುವ ರ್ಯಾಲಿಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಯುವಕರು ಭಾಗವಹಿಸಬಹುದು.

ಸೇನಾ ನೇಮಕಾತಿ ಪ್ರಕ್ರಿಯೆ ಒಟ್ಟು ಮೂರು ಹಂತಗಳಲ್ಲಿ ನಡೆಯಲಿದೆ. ಅಭ್ಯಥಿಗಳು ಮೊದಲ ಹಂತದಲ್ಲಿ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಿದ್ದು, ನಂತರ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು. ಈ ಎರಡು ಹಂತದಲ್ಲಿ ಉತ್ತೀರ್ಣರಾದವರು ಲಿಖಿತ ಪರೀಕ್ಷೆ ಬರೆಯಬೇಕಾಗಿದ್ದು, ಇದರಲ್ಲಿ ಪಾಸಾದವರು ಸೇನೆಗೆ ಆಯ್ಕೆಯಾಗಿ ತರಬೇತಿಗೆ ಕಳುಹಿಸಲ್ಪಡಲಿದ್ದಾರೆ.

ಆನ್‍ಲೈನ್‍ನಲ್ಲಿ ವೆಬ್‍ಸೈಟ್ ರಲ್ಲಿ ಏಪ್ರಿಲ್ 25ರವರೆಗೆ ಅರ್ಜಿ ಸಲ್ಲಿಸಬಹುದು ಎಂದು ಮಂಗಳೂರು ಸೇನಾ ನೇಮಕಾತಿ ಕೇಂದ್ರದ ಪ್ರಕಟಣೆ ತಿಳಿಸಿದೆ.

ಸೌಲಭ್ಯಗಳು: ಸೇನೆಗೆ ಆಯ್ಕೆಯಾದವರಿಗೆ ಮಾಸಿಕ ಸುಮಾರು ರೂ.25000 ವೇತನ ಪಡೆಯಲಿದ್ದಾರೆ. ಇದಲ್ಲದೇ, ಉಚಿತ ಸಮವಸ್ತ್ರ, ಆಹಾರ, ವಸತಿ, ವೈದ್ಯಕೀಯ ಸೌಲಭ್ಯ, ಉಚಿತ ರೈಲು ಪ್ರಯಾಣ ಹಾಗೂ ಕ್ಯಾಂಟೀನ್ ಸೌಲಭ್ಯ ದೊರಕಲಿದೆ. ಪ್ರತೀ ವರ್ಷ 90 ದಿನಗಳ ರಜಾ ಸೌಲಭ್ಯವೂ ದೊರಕಲಿದೆ.

ಸೈನಿಕರು ಸರಾಸರಿ 15-17 ವರ್ಷ ಮಾತ್ರ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ನಂತರ ಸೇನೆಯಿಂದ ನಿವೃತ್ತನಾಗಿ ಜೀವನದ ಉಳಿದ ಅವಧಿಯುದ್ದಕ್ಕೂ ಪಿಂಚಣಿ ದೊರಕಲಿದೆ. ಇದಲ್ಲದೇ, ತಂದೆ, ತಾಯಿ,ಮಕ್ಕಳು ಸೇರಿದಂತೆ ಕುಟುಂಬ ಸದಸ್ಯರಿಗೆ ಶಸ್ತ್ರಚಿಕಿತ್ಸೆ ಸೇರಿದಂತೆ ಎಲ್ಲ ರೀತಿಯ ವೈದ್ಯಕೀಯ ಸೌಲಭ್ಯ ದೊರಕಲಿದೆ. ಕರ್ನಾಟಕ ರಾಜ್ಯ ಸರಕಾರಿ ನೇಮಕಾತಿಗಳಲ್ಲಿ ನಿವೃತ್ತ ಸೈನಿಕರಿಗೆ ಶೇಕಡಾ 10 ರಷ್ಟು ಮೀಸಲಾತಿ ಇದೆ. ದೇಶಾದ್ಯಂತ ಸಂಚರಿಸುವ ವಿಮಾನಯಾನ ಟಿಕೇಟ್‍ಗಳಲ್ಲಿ ರಿಯಾಯಿತಿ ದೊರಕಲಿದೆ.
ಭಾರತೀಯ ಸೇನೆ ಸೇರಲು ಯುವಕರಿಗೆ ಇದೊಂದು ಅಪೂರ್ವ ಅವಕಾಶವಾಗಿದ್ದು, ಘನತೆ ಮತ್ತು ಗೌರವದೊಂದಿಗೆ ದೇಶ ಸೇವೆ ಮಾಡಲು ಇದಕ್ಕಿಂತ ಮಿಗಿಲಾದ ಅವಕಾಶವಿಲ್ಲ.


Spread the love