ಸೈನೈಡ್ ಮೋಹನ್‌ಗೆ ಜೀವನಪರ್ಯಂತ ಜೀವಾವಧಿ ಶಿಕ್ಷೆ

Spread the love

ಸೈನೈಡ್ ಮೋಹನ್‌ಗೆ ಜೀವನಪರ್ಯಂತ ಜೀವಾವಧಿ ಶಿಕ್ಷೆ

ಮಂಗಳೂರು : ಸರಣಿ ಹಂತಕ ಸೈನೈಡ್ ಮೋಹನ್‌ನ 8 ಮತ್ತು 9ನೇ ಪ್ರಕರಣದ ಆರೋಪವು ಸಾಬೀತಾಗಿದ್ದು, ಆತನಿಗೆ ಜೀವನ ಪರ್ಯಂತ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.

ಪುತ್ತೂರು ನಗರ ಠಾಣೆ ಹಾಗೂ ಮಡಿಕೇರಿ ಗ್ರಾಮಾಂತರ ಠಾಣೆ ವ್ಯಾಪ್ತಿಗಳಲ್ಲಿ ನಾಪತ್ತೆಯಾಗಿದ್ದ ಇಬ್ಬರು ಯುವತಿಯರ ಪ್ರಕರಣಗಳಲ್ಲಿ ಶಿಕ್ಷೆ ಪ್ರಕಟವಾಗಿದೆ. ಎರಡೂ ಪ್ರಕರಣಗಳಲ್ಲಿ ಒಂದೇ ರೀತಿಯಲ್ಲಿ ಶಿಕ್ಷೆ ವಿಧಿಸಿ ನ್ಯಾಯಾಧೀಶ ಡಿ.ಟಿ.ಪುಟ್ಟರಂಗ ಸ್ವಾಮಿ ತೀರ್ಪು ನೀಡಿದ್ದಾರೆ.

ಐಪಿಸಿ ಸೆಕ್ಷನ್ 302 (ಕೊಲೆ) ಪ್ರಕರಣಕ್ಕೆ ಜೀವನ ಪರ್ಯಂತ ಜೀವಾವಧಿ ಶಿಕ್ಷೆ, ಸೆಕ್ಷನ್ 376 (ಅತ್ಯಾಚಾರ) ಮತ್ತು ಸೆಕ್ಷನ್ 328 (ವಿಷ ಉಣಿಸಿದ್ದು)ರಡಿ ತಲಾ ಏಳು ವರ್ಷ ಕಠಿಣ ಸಜೆ, ಮೂರು ಸಾವಿರ ರೂ. ದಂಡ, ಸೆಕ್ಷನ್ 201 (ಸಾಕ್ಷಿನಾಶ) ಐದು ವರ್ಷ ಕಠಿಣ ಸಜೆ, ಮೂರು ಸಾವಿರ ರೂ. ದಂಡ, ಸೆಕ್ಷನ್ 392 (ಚಿನ್ನಾಭರಣ ಸುಲಿಗೆ) ಐದು ವರ್ಷ ಕಠಿಣ ಸಜೆ, ಮೂರು ಸಾವಿರ ರೂ. ದಂಡ, ಸೆಕ್ಷನ್ 417 (ವಂಚನೆ)ರಡಿ ಆರು ತಿಂಗಳ ಸಜೆ ಹಾಗೂ ಎರಡೂ ಪ್ರಕರಣಗಳಲ್ಲಿ ತಲಾ 18 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಕೊಲೆಯಾದ ಯುವತಿಯರ ಕುಟುಂಬಸ್ಥರು ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ಪಡೆದುಕೊಳ್ಳಲು ಅರ್ಹರೆಂದು ತೀರ್ಪಿನಲ್ಲಿ ತಿಳಿಸಲಾಗಿದೆ.


Spread the love