ಸೋಲನ್ನು ಸವಾಲಾಗಿ ಸ್ವೀಕರಿಸಿ ಪಕ್ಷವನ್ನು ಮುನ್ನಡೆಸಿ: ಆಸ್ಕರ್ ಫೆರ್ನಾಂಡಿಸ್
ಉಡುಪಿ: ರಾಜ್ಯಪಾಲರು ಪೂರ್ಣ ಬಹುಮತವಿಲ್ಲದ ಬಿಜೆಪಿಗೆ ಸರಕಾರ ರಚಿಸಲು ಅವಕಾಶ ನೀಡಿರುವುದು ಪ್ರಜಾಪ್ರಭುತ್ವದ ವಿರೋಧಿ ನಿರ್ಧಾರ ಈ ನಿಟ್ಟಿನಲ್ಲಿ ರಾಜ್ಯಪಾಲರು ಸಂವಿಧಾನದ ಮೌಲ್ಯವನ್ನು ಎತ್ತಿ ಹಿಡಿಯಲು ಬಹುಮತ ಹೊಂದಿರುವ ಮೈತ್ರಿಕೂಟಕ್ಕೆ ಸರಕಾರ ರಚಿಸಲು ಅವಕಾಶ ನೀಡಬೇಕಿತ್ತು ಎಂದು ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ ಕಾರ್ಯಕರ್ತರ ಕೃತಜ್ಞತಾ ಸಮರ್ಪಣಾ ಸಭೆಯಲ್ಲಿ ಆಸ್ಕರ್ ಫೆರ್ನಾಂಡಿಸ್ರವರು ಹೇಳಿದರು. ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ದಿನಗಳಲ್ಲಿ ಬರುವ ಶಿಕ್ಷಕರ, ಪದವೀಧರ ಕ್ಷೇತ್ರದ ಹಾಗೂ ಸ್ಥಳಿಯಾಡಳಿತ ಚುನಾವಣೆಗಳಲ್ಲಿ ಕಾರ್ಯಕರ್ತರು ಸಂಘಟಿತರಾಗಿ ತೊಡಗಿಸಿಕೊಂಡು ಪಕ್ಷವನ್ನು ಮುನ್ನಡೆಸಬೇಕೆಂದು ಕಾರ್ಯಕರ್ತರಿಗೆ ಆತ್ಮವಿಶ್ವಾಸವನ್ನು ತುಂಬಿದರು. ಜಿಲ್ಲಾ ಕಾಂಗ್ರೆಸ್ ಸಭೆಯು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜನಾರ್ದನ ತೋನ್ಸೆಯವರ ಅಧ್ಯಕ್ಷತೆಯಲ್ಲಿ ಜರಗಿತು.
ಕರಾವಳಿ ಪ್ರದೇಶದ ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು ಯಾವುದೇ ತಾರತಮ್ಯವಿಲ್ಲದೆ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮಾಡಿದರೂ ಬಿಜೆಪಿಯ ನಿರಂತರ ಅಪಪ್ರಚಾರದಿಂದ ಪಕ್ಷಕ್ಕೆ ಹಾಗೂ ತಮಗೆ ಹಿನ್ನಡೆಯಾಗಿದೆ. ಜನತೆ ಅತೀ ಶೀಘ್ರ ವಾಸ್ತವಿಕ ಅರಿವಿಗೆ ಬಂದು ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಬೆಂಬಲವನ್ನು ಸೂಚಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆಯವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಕುಂದಾಪುರ ಕ್ಷೇತ್ರದ ಅಭ್ಯರ್ಥಿ ರಾಕೇಶ್ ಮಲ್ಲಿಯವರು ಇ.ವಿ.ಎಂ. ಬಗ್ಗೆ ಆಕ್ಷೇಪವೆತ್ತಿ ಚುನಾವಣೆಯಲ್ಲಿ ತನ್ನ ಹಿನ್ನಡೆಗೆ ಇ.ವಿ.ಎಂ. ಕಾರಣವಾಗಿದೆ ಎಂದು ಇ.ವಿ.ಎಂ. ದೋಷದ ಬಗ್ಗೆ ಉದಾಹರಣೆಗಳನ್ನು ನೀಡಿ ವಿವರಿಸಿದರು. ತಾನು ಈಗಾಗಲೇ ಚುನಾವಣಾ ಅಧಿಕಾರಿಗಳಿಗೆ ದೂರನ್ನು ದಾಖಲಿಸಿರುವುದಾಗಿ ತಿಳಿಸಿದರು.
ಸಭೆಯಲ್ಲಿ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಎಂ. ಎ. ಗಪೂರ್, ಮಾಜಿ ಶಾಸಕರಾದ ಯು. ಆರ್ ಸಭಾಪತಿ, ಗೀತಾ ವಾಗ್ಳೆ, ವೆರೋನಿಕಾ ಕರ್ನೇಲಿಯೋ, ದಿನೇಶ್ ಪುತ್ರನ್, ಹರೀಶ್ ಕಿಣಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕಾಪು ದಿವಾಕರ ಶೆಟ್ಟಿ, ದೇವಿ ಪ್ರಸಾದ್ ಶೆಟ್ಟಿ, ದಿವಾಕರ ಕುಂದರ್, ಗಣೇಶ್ ಕೋಟ್ಯಾನ್, ಕೃಷ್ಣರಾಜ ಸರಳಾಯ, ಸರಳಾ ಕಾಂಚನ್, ಪ್ರಖ್ಯಾತ್ ಶೆಟ್ಟಿ, ಮಲ್ಯಾಡಿ ಶಿವರಾಮ ಶೆಟ್ಟಿ, ಮುರಳಿ ಶೆಟ್ಟಿ, ನೀರೆ ಕೃಷ್ಣ ಶೆಟ್ಟಿ, ಸಂಪಿಗೇಡಿ ಸಂಜೀವ ಶೆಟ್ಟಿ, ಸುಧಾಕರ ಕೋಟ್ಯಾನ್, ನವೀನ್ಚಂದ್ರ ಶೆಟ್ಟಿ, ಭಾಸ್ಕರ್ ರಾವ್ ಕಿದಿಯೂರು, ಜನಾರ್ದನ ಭಂಡಾರ್ಕಾರ್, ಹರೀಶ್ ಶೆಟ್ಟಿ ಪಾಂಗಳ, ವಿಜಯ ಹೆಗ್ಡೆ ಸಿ, ಸುಧೀರ್ ಹೆಗ್ಡೆ, ಸತೀಶ್ ಅಮೀನ್ ಪಡುಕರೆ, ಮೈರ್ಮಾಡಿ ಸುಧಾಕರ ಶೆಟ್ಟಿ, ಮನೋಜ್ ಕರ್ಕೇರ, ಮಹಾಬಲ ಕುಂದರ್, ಮಾರ್ಕ್ ಡಿ’ಸೋಜಾ, ಡಾ. ಸುನಿತಾ ಶೆಟ್ಟಿ, ಮಲ್ಲಿಕಾ ಪೂಜಾರಿ, ಬಾಲಕೃಷ್ಣ ಪೂಜಾರಿ ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹ ಮೂರ್ತಿ ಕಾರ್ಯಕ್ರಮ ನಿರ್ವಹಿಸಿ, ಕಾರ್ಯದರ್ಶಿ ಹರೀಶ್ ಕಿಣಿ ಧನ್ಯವಾದ ಸಲ್ಲಿಸಿದರು.