ಸ್ವಚ್ಛಗ್ರಾಮ ಸ್ವಚ್ಛ ಪರಿಸರ ಸ್ಪರ್ಧೆಯಲ್ಲಿ ಕೆ. ಸತ್ಯೇಂದ್ರ ಪೈ ಗೆ ಪ್ರಶಸ್ತಿ
ಮಂಗಳೂರು; ಕರ್ನಾಟಕ ಸರಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸ್ವಚ್ಛ ಭಾರತ್ ಮಿಷನ್(ಗ್ರಾ) ಇವರು ಗ್ರಾಮೀಣ ಪ್ರದೇಶದಲ್ಲಿ ದ್ರವತ್ಯಾಜ್ಯ ನಿರ್ವಹಣೆ ಪದ್ದತಿಯನ್ನು ಅಳವಡಿಸಿಕೊಳ್ಳಲು ಉತ್ತೇಜಿಸುವ ಸಲುವಾಗಿ ಸ್ವಚ್ಛ ಗ್ರಾಮ – ಸ್ವಚ್ಛ ಪರಿಸರ ಹೆಸರಿನಡಿ ಜೂನ್ 6, 2020 ರಿಂದ ಜೂನ್ 19, 2020 ರವರೆಗೆ ಸ್ವಚ್ಛತಾ ಪಾಕ್ಷಿಕಾಚರಣೆ ಸಲುವಾಗಿ ಸಾಂಸ್ಥಿಕ ಮತ್ತು ಗೃಹೋತ್ಪಾದಿತ ತ್ಯಾಜ್ಯ ನೀರಿನ ಸೂಕ್ತ ವಿಲೇವಾರಿ ಕುರಿತಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್ (ಗ್ರಾ) ಆಹ್ವಾನಿಸಿದ ಕಿರುಚಿತ್ರ, ಯಶೋಗಾಥೆ ಲೇಖನ, ಹಾಗೂ ಮಾದರಿ (ಮಾಡಲ್) ಸ್ಪರ್ಧೆಯಲ್ಲಿ ಸನ್ಮಾಟ್ರಿಕ್ಸ್ನ ಕೆ. ಸತ್ಯೇಂದ್ರ ಪೈ ಪ್ರಥಮ ಸ್ಥಾನ ಪಡೆದಿದ್ದಾರೆ.
ದ್ವಿತೀಯ ಸ್ಥಾನವನ್ನು ಪುತ್ತೂರಿನ ಆಶ್ಲೇಷ್ ಕುಮಾರ್, ತೃತೀಯ ಸ್ಥಾನವನ್ನು ಡಾ. ವಾರಾಣಾಸಿ ಕೃಷ್ಣಮೂರ್ತಿ ಪಡೆದಿದ್ದಾರೆ.
ಪರಿಕಲ್ಪನೆ ಮತ್ತು ತಾಂತ್ರಿಕ ವಿಧಾನಗಳು, ವೆಚ್ಚ ಬಂಡವಾಳ ಮತ್ತು ಕಾರ್ಯಾಚರಣೆ, ಸುಸ್ಥಿರತೆ, ವಿನೂತನ ಹಾಗೂ ಸುಲಭವಾಗಿ ಅಳವಡಿಸುವಿಕೆಯ ಮಾನದಂಡದ ಆಧಾರದಲ್ಲಿ ಬಂದ ಎಲ್ಲ ಕಿರುಚಿತ್ರ, ಯಶೋಗಾಥೆ ಹಾಗೂ ಮಾಡಲ್ಗಳನ್ನು ಜಿಲ್ಲಾ ಮಟ್ಟದ ಮೌಲ್ಯಮಾಪಕರ ಸಮಿತಿ ಪರೀಕ್ಷಿಸಿ ಈ ಫಲಿತಾಂಶ ನೀಡಿದೆ. ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಕಿರುಚಿತ್ರವನ್ನು ರಾಜ್ಯ ಹಂತದ ಪುರಸ್ಕಾರಕ್ಕೆ ನಾಮನಿರ್ದೇಶನ ಮಾಡಲಾಗಿದೆ.